ಶನಿವಾರ, ಮೇ 28, 2022
21 °C
‘ಉತ್ತುಂಗ’ ಪುಸ್ತಕ ಬಿಡುಗಡೆ

ನಮ್ಮ ವ್ಯಕ್ತಿತ್ವ ಸಂಘದ ಪ್ರತಿಬಿಂಬದಂತೆ ಇರಲಿ: ಸುರೇಶ್‌ ಜೋಶಿ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಂಘದ ಹೆಸರಿನಿಂದ ಯಾರೂ ಗುರುತಿಸಿಕೊಳ್ಳಬಾರದು. ನಮ್ಮ ವ್ಯಕ್ತಿತ್ವವೇ ಸಂಘದ ಬಗ್ಗೆ ತಿಳಿಸುವಂತೆ ಇರಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸುರೇಶ್‌ ಜೋಶಿ (ಭಯ್ಯಾಜಿ) ಹೇ‌ಳಿದರು. 

ಕೃಷ್ಣಪ್ರಸಾದ ಬದಿ ಅವರು ರಚಿಸಿರುವ ದಿವಂಗತ ಕೃ.ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ ಒಳಗೊಂಡ ‘ಉತ್ತುಂಗ’ ಪುಸ್ತಕ ಬಿಡುಗಡೆ ಮಾಡಿ ಅವರು ಬುಧವಾರ ಮಾತನಾಡಿದರು. 

‘ಸಂಘವು ಸಂಸ್ಕಾರವನ್ನು ಕಲಿಸುತ್ತದೆ. ಅಲ್ಲಿ ಕೆಲಸ ಮಾಡುವವರ ವ್ಯಕ್ತಿತ್ವ ಸಂಘದ ಪ್ರತಿಬಿಂಬದಂತೆ ಇರಬೇಕು. ಪುಸ್ತಕಗಳು ವ್ಯಕ್ತಿಗಳ ಬದುಕಿನ ಹಾದಿಯ ಬಗ್ಗೆ ಅರಿಯಲು ಸಹಕಾರಿಯಾಗುತ್ತವೆ. ತಮ್ಮ ವ್ಯಕ್ತಿತ್ವದ ಮೂಲಕವೇ ಜನರಿಗೆ ಸಂಘದ ಮಹತ್ವ ಸಾರಿದ ಸೂರ್ಯನಾರಾಯಣ ಅವರನ್ನು ಈ ಪುಸ್ತಕದ ಮೂಲಕ ಸ್ಮರಿಸುತ್ತಿರುವುದು ಖುಷಿಯ ವಿಷಯ’ ಎಂದರು. 

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ–ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್‌,  ‘ಸೂರ್ಯನಾರಾಯಣ ಅವರ ಚಿಂತನೆಯಲ್ಲಿ ಖಚಿತತೆ ಇತ್ತು. ಮಾತಿನಲ್ಲಿ ಪ್ರಖರತೆ ಇತ್ತು. 70 ವರ್ಷಗಳ ಕಾಲ ಪ್ರಚಾರಕ ಜೀವನ ನಡೆಸಿದ ಅವರು ಸಂಘದ ಕೆಲಸಕ್ಕೆ ಹೊಸ ಆಯಾಮ ತಂದುಕೊಟ್ಟರು’ ಎಂದು ತಿಳಿಸಿದರು.

‘ಮಹಾತ್ಮ ಗಾಂಧೀಜಿಯ ಹತ್ಯೆಯ ನಂತರ ಸ್ವಯಂಸೇವಕರು ಹಾಗೂ ಸಂಘದ ಕಾರ್ಯಕರ್ತರು ಬಂಧನಕ್ಕೊಳಪಟ್ಟರು. ಆಗ ‘ಸೂರು’ ಅವರೂ ಜೈಲು ಸೇರಿದ್ದರು. ಆಗಿನ ಕಾಲದಲ್ಲಿ ಸೆರೆಮನೆಯಲ್ಲಿದ್ದವರಿಗೆ ಸರ್ಕಾರದಿಂದ ತಿಂಗಳಿಗೆ 10 ಬೀಡಿ ಅಥವಾ ಸಿಗರೇಟ್‌ ನೀಡಲಾಗುತ್ತಿತ್ತು. ‘ಸೂರು’ ಅವರು ತಮ್ಮ ಜೊತೆಗಿದ್ದ ಇತರ 14 ಮಂದಿಯಿಂದ ಸಿಗರೇಟಿಗಾಗಿ ನೀಡುವ ಹಣ ಸಂಗ್ರಹಿಸಿ ಅದರಿಂದ ವಿವೇಕಾನಂದರ ಪುಸ್ತಕಗಳನ್ನು ಖರೀದಿಸಿದ್ದರು. ಅದನ್ನು ಜೈಲಿನ ಗ್ರಂಥಾಲಯಕ್ಕೆ ಕೊಟ್ಟಿದ್ದರು’ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣಪ್ರಸಾದ ಬದಿ ಅವರ ಅನುವಾದಿತ ‘ಪಥಿಕ ಮತ್ತು ಪಾಥೇಯ’ ಕೃತಿಯನ್ನೂ ಬಿಡುಗಡೆ ಮಾಡಲಾಯಿತು.

ಪುಸ್ತಕ ಪರಿಚಯ

ಹೆಸರು: ಉತ್ತುಂಗ

ಲೇಖಕ: ಕೃಷ್ಣಪ್ರಸಾದ ಬದಿ

ಪ್ರಕಾಶನ: ಸಾಹಿತ್ಯ ಸಂಗಮ

ಪುಟ: 236

ಬೆಲೆ: ₹200

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು