ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಕೂದಲನ್ನೂ ಅಲುಗಾಡಿಸಲಾಗದು: ಈಶ್ವರಪ್ಪ

Last Updated 30 ಸೆಪ್ಟೆಂಬರ್ 2022, 9:51 IST
ಅಕ್ಷರ ಗಾತ್ರ

ಮೈಸೂರು: ‘ಕಾಂಗ್ರೆಸ್‌ನ ಇಡೀ ಗಾಂಧಿ ವಂಶವೇ ಒಟ್ಟಾದರೂ ಆರ್‌ಎಸ್‌ಎಸ್‌ನ ಒಂದು ಕೂದಲನ್ನೂ ಅಲುಗಾಡಿಸಲು ಆಗಲಿಲ್ಲ. ಈ ಸಿದ್ದರಾಮಯ್ಯ ಏನು ಮಾಡಿಕೊಳ್ಳುತ್ತಾರೆ?’ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆ ಮನುಷ್ಯ ಮುಸ್ಲಿಮರನ್ನು ತೃಪ್ತಿಪಡಿಸಲು ಹೇಳಿಕೆ ಕೊಡುತ್ತಾರಷ್ಟೆ. ಆರ್‌ಎಸ್‌ಎಸ್‌ ಇರದಿದ್ದರೆ ಈ ದೇಶ ಎಲ್ಲಿರುತ್ತಿತ್ತು? ಹಗುರವಾದ ಮಾತುಗಳಿಂದ ಸಿದ್ದರಾಮಯ್ಯಗೆ ಈಗಾಗಲೇ ನೆಲೆ ಇಲ್ಲ; ಬೆಲೆಯೂ ಹೋಗುತ್ತದೆ’ ಎಂದು ಟೀಕಿಸಿದರು.

‘ಬಿಜೆಪಿಯು ಆರ್‌ಎಸ್‌ಎಸ್‌ನ ದೇಶ ಭಕ್ತ ಕೂಸು’ ಎಂದು ಪ್ರತಿಪಾದಿಸಿದರು.

‘ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಫ್ಲೆಕ್ಸ್ ಹರಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿರುವುದು ಗೂಂಡಾಗಿರಿಯ ಹೇಳಿಕೆಯಾಗಿದೆ. ಫ್ಲೆಕ್ಸ್ ಹರಿಯುವ ಸಂಸ್ಕೃತಿ ಬಿಜೆಪಿಯದ್ದಲ್ಲ. ರಾಜ್ಯದಲ್ಲಿ ಗಂಡಸರು ಅವರೊಬ್ಬರೇನಾ? ನಾವು ನಮ್ಮ ವೀರ ವನಿತೆಯರಿಂದ ಉತ್ತರ ಕೊಡಿಸುತ್ತೇವೆ’ ಎಂದು ಗುಡುಗಿದರು.

‌‘ಭಾರತ ಒಡೆದಿದ್ದೇ ಕಾಂಗ್ರೆಸ್. ಈಗ ಜೋಡಿಸುವ ಮಾತನಾಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಅನ್ನು ಕರ್ನಾಟಕದಲ್ಲೂ ಹುಡುಕಬೇಕಾಗುತ್ತದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಮೊದಲು ಪಕ್ಷವನ್ನು ಜೋಡಿಸಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ದಿಢೀರನೆ ಪಕ್ಷ ಸಂಘಟನೆಗೆ ಇಳಿದಿದ್ದೀರಲ್ಲಾ’ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ‘ಕುಡಿದವರಂತೆ ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ. ಸಿದ್ದರಾಮಯ್ಯ ಗಾಳಿ ಬೀಸಿದರೆ ಮಾತ್ರ ಇಂಥ ಪ್ರಶ್ನೆ ಬರುತ್ತದೆ’ ಎಂದು ಸಿಡಿಮಿಡಿಗೊಂಡರು.

‘ಸಚಿವ ಸ್ಥಾನ ಬರುತ್ತದೆ; ಹೋಗುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೊನೆಯ ಉಸಿರಿರುವವರೆಗೂ ಬಿಜೆಪಿ ತೊರೆಯುವುದಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅಹಿಂದ ಸಮಾವೇಶಕ್ಕೆ ಮುಂದಾಗಿದ್ದೇನೆಯೇ ಹೊರತು ವೈಯುಕ್ತಿಕ ಹಿತಾಸಕ್ತಿಗಾಗಿ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT