ಬುಧವಾರ, ಸೆಪ್ಟೆಂಬರ್ 22, 2021
24 °C

ಸಂಸತ್ ಕಲಾಪದಲ್ಲಿ ಗದ್ದಲ: ಕಾಗೇರಿ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಕೆಲವು ಸದಸ್ಯರು ಅಶಿಸ್ತಿನಿಂದ ವರ್ತಿಸಿ, ಗದ್ದಲ ನಡೆಸಿರುವುದು ಖಂಡನೀಯ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯಸಭೆಯಲ್ಲಿ ವಿರೋಧ ಪ‍ಕ್ಷಗಳ ಕೆಲವು ಸದಸ್ಯರು ಪ್ರದರ್ಶಿಸಿದ ನಡವಳಿಕೆಯು ಅಶಿಸ್ತಿನಿಂದ ಕೂಡಿತ್ತು ಮತ್ತು ಅಸಹ್ಯಕರವಾಗಿತ್ತು. ಅರಾಜಕತೆಯ ವಾತಾವರಣವನ್ನು ಸೃಷ್ಟಿಸಿದ ಸದಸ್ಯರ ನಡವಳಿಕೆ ಸ್ವೀಕಾರಾರ್ಹವಲ್ಲ’ ಎಂದರು.

ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುತ್ತದೆ. ಆದರೆ, ರಾಜ್ಯಸಭೆಯ ಕೆಲವು ಸದಸ್ಯರು ಸಂಸತ್ತಿನ ಪಾವಿತ್ರ್ಯಕ್ಕೆ ಕಳಂಕ ತಂದರು. ಇಂತಹ ವರ್ತನೆಯನ್ನು ಸಂಸತ್ತು ಅಥವಾ ಶಾಸನಸಭೆಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮಂಗಳವಾರ ರಾಜ್ಯಸಭೆಯಲ್ಲಿ ನಡೆದಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಸಭಾಪತಿಯವರು ಅದಕ್ಕಾಗಿಯೇ ತೀವ್ರ ವೇದನೆ ವ್ಯಕ್ತಪಡಿಸಿದರು. ರಾಜ್ಯಸಭೆಯ ಇತಿಹಾಸದಲ್ಲೇ ಅದು ಕರಾಳ ದಿನವಾಗಿ ಉಳಿಯುತ್ತದೆ. ಶಾಸನಸಭೆಯಲ್ಲಿ ಇರುವವರು ಆದರ್ಶಪ್ರಾಯವಾದ ಮಾದರಿ ನಡವಳಿಕೆ ಹೊಂದಿರಬೇಕು. ಆದರೆ, ಇಂತಹ ಘಟನೆಗಳು ಸರಿಯಾಗಿ ಚಿಂತಿಸುವ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಸದಸ್ಯರು ಗೌರವಯುತವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ರಾಜಕೀಯ ಪಕ್ಷಗಳಿಗೆ ಸೇರಿದ್ದು. ರಾಜಕೀಯ ನಡವಳಿಕೆ ಮತ್ತು ಸಾರ್ವಜನಿಕ ನಡವಳಿಕೆ ಕುರಿತು ರಾಜಕೀಯ ಪಕ್ಷಗಳು ತಮ್ಮ ನಾಯಕರು, ಸದಸ್ಯರಿಗೆ ಪಾಠ ಹೇಳುವ ಅಗತ್ಯವಿದೆ ಎಂದು ಕಾಗೇರಿ ಹೇಳಿದರು.

‘ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಕುಸ್ತಿ ಅಖಾಡದಂತೆ ಆದವು. ಈ ರೀತಿ ಅಸಭ್ಯವಾಗಿ ವರ್ತಿಸಿದ ಎಲ್ಲ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಸೆಪ್ಟೆಂಬರ್‌ನಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಲೇಬೇಕಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೊ? ಅಥವಾ ಬೆಂಗಳೂರಿನಲ್ಲೇ ನಡೆಸಬೇಕೊ? ಎಂಬ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು