ಮಂಗಳವಾರ, ಮಾರ್ಚ್ 21, 2023
29 °C

ಸರ್ಕಾರಿ ವಕೀಲರ ನೇಮಕಕ್ಕೆ ಬಿಗಿ ನಿಯಮ: ಜೆ.ಸಿ. ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಪ್ರಾಧಿಕಾರಗಳನ್ನು ಪ್ರತಿನಿಧಿಸುವ ಸರ್ಕಾರಿ ವಕೀಲರ ನೇಮಕಕ್ಕೆ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಕೀಲರ ನೇಮಕಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣಸ್ವಾಮಿ, ‘ಬಿಬಿಎಂಪಿಯಲ್ಲಿ ವಕೀಲರ ಆಯ್ಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪಾಲಿಕೆಯನ್ನು ಪ್ರತಿನಿಧಿಸುವ ವಕೀಲರು ವಿರೋಧಿಗಳ ಜತೆ ಕೈಜೋಡಿಸುತ್ತಿದ್ದಾರೆ. ವಕೀಲರ ನೇಮಕಾತಿಯಲ್ಲಿನ ದೋಷದಿಂದಾಗಿ ಪಾಲಿಕೆಯ ಆಸ್ತಿಗಳು ಕಬಳಿಕೆದಾರರ ಪಾಲಾಗುತ್ತಿವೆ’ ಎಂದು ದೂರಿದರು.

‘ಉದ್ಯಾನದಲ್ಲಿ ಕಟ್ಟಿದ ಮನೆಯನ್ನು ತೆರವು ಮಾಡಿಸುವುದಕ್ಕೂ ಬಿಬಿಎಂಪಿ ವಕೀಲರು ಶಕ್ತರಾಗಿಲ್ಲ. ವಕೀಲರ ನೇಮಕಕ್ಕೆ ಪ್ರತ್ಯೇಕ ನೀತಿ ರೂಪಿಸಬೇಕು. ನೇಮಕಾತಿಯಲ್ಲಿ ಪಾರದರ್ಶಕತೆ ತರಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ‘ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ಕಾನೂನು ಹೋರಾಟದಲ್ಲಿ ಸರ್ಕಾರ ಸೋಲುತ್ತಿದೆ. ಆದರೆ, ಸರ್ಕಾರಿ ವಕೀಲರು ಬೆಳೆಯುತ್ತಿದ್ದಾರೆ’ ಎಂದರು.

‘ಬಿಡಿಎ ಸ್ವಾಧೀನಕ್ಕೆ ಪಡೆದುಕೊಂಡ ಜಮೀನುಗಳು ಮತ್ತೆ ಒತ್ತುವರಿದಾರರ ಪಾಲಾಗುತ್ತಿವೆ. ಸರ್ಕಾರದ ಪರ ವಕೀಲರು ಈ ಕುರಿತು ಮೇಲ್ಮನವಿಯನ್ನೂ ಸಲ್ಲಿಸುತ್ತಿಲ್ಲ’ ಎಂದು ಜೆಡಿಎಸ್‌ನ ಎಚ್‌.ಎಂ. ರಮೇಶ್‌ ಗೌಡ ದೂರಿದರು.

ಕಠಿಣ ನಿಯಮಕ್ಕೆ ಚಿಂತನೆ: ಉತ್ತರ ನೀಡಿದ ಮಾಧುಸ್ವಾಮಿ, ‘ಸರ್ಕಾರಿ ವಕೀಲರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ಪ್ರಭಾವ ಬೀರುವುದು ದೀರ್ಘ ಕಾಲದಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಿದ್ದೇನೆ. ಸರ್ಕಾರಿ ವಕೀಲರ ನೇಮಕಕ್ಕೆ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ನ್ಯಾಯಾಧೀಶರ ಶಿಫಾರಸು ಕಡ್ಡಾಯಗೊಳಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿಗಳು ಪರಿಶೀಲನಾ ವರದಿ ನೀಡಿದ ಬಳಿಕವೇ ನೇಮಕಾತಿ ಮಾಡಲಾಗುತ್ತಿದೆ. ವಕೀಲರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ನಿಗಮ, ಮಂಡಳಿಗಳಲ್ಲಿನ ವಕೀಲರ ನೇಮಕಾತಿ ಇನ್ನೂ ನೇರವಾಗಿ ಕಾನೂನು ಇಲಾಖೆ ವ್ಯಾಪ್ತಿಗೆ ಬಂದಿಲ್ಲ. ಎಲ್ಲವನ್ನೂ ಸರಿಪಡಿಸಿ ಬಿಗಿಯಾದ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

‘ರಾಜ್ಯ ಸರ್ಕಾರದ ಹಂತದಲ್ಲೂ ವಕೀಲರ ನೇಮಕಾತಿ ಪ್ರಕ್ರಿಯೆಯಲ್ಲಿ ಬಿಗಿ ತರಲಾಗಿದೆ. ತಪ್ಪುಗಳಾದರೆ ಅಡ್ವೊಕೇಟ್‌ ಜನರಲ್‌ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು