ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಅಕಾಡೆಮಿಯಿಂದ ಪುರಸ್ಕಾರ: ಗ್ರಂಥಾಲಯದಿಂದ ತಿರಸ್ಕಾರ!

ಬಹುಮಾನಿತ ಕೃತಿ ಗ್ರಂಥಾಲಯಕ್ಕಿಲ್ಲ
Last Updated 21 ಜನವರಿ 2021, 15:00 IST
ಅಕ್ಷರ ಗಾತ್ರ

ಮಂಗಳೂರು:ಲೇಖಕ ನರೇಂದ್ರ ರೈ ದೇರ್ಲ ಬರೆದ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ‘ನೆಲಮುಖಿ’ ಕೃತಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು 2018ನೇ ಸಾಲಿನ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಈಡಾಗಿದೆ.

ಈ ಕುರಿತು ದೇರ್ಲ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ‘ಮೇಲ್ನೋಟಕ್ಕೆ ನನ್ನ ಕನಸು ಪ್ರಕಾಶನದ ಯಾವುದೇ ಪುಸ್ತಕ ಆಯ್ಕೆ ಆದಂತೆ ಕಾಣಿಸುವುದಿಲ್ಲ. ನನ್ನ ಐದು ಕೃತಿಗಳ ಪೈಕಿ ಒಂದು ಕೃತಿಗೆ (ನೆಲಮುಖಿ) ಕರ್ನಾಟಕ ಸಾಹಿತ್ಯ ಅಕಾಡಮಿಯ ಬಹುಮಾನ ಬಂದಿದೆ. ಗ್ರಂಥಾಲಯ ಇಲಾಖೆಯ ಸಚಿವ ಸುರೇಶ್ ಕುಮಾರ್‌ ಅವರ ಮನೆಯಲ್ಲೂ ನನ್ನ ಒಂದೆರಡು ಪುಸ್ತಕಗಳು ಇವೆ. ಕನಸು ನನ್ನದೇ ಪುಟ್ಟ ಪ್ರಕಾಶನ. ನನ್ನದು ಎಡ ಬಲ ಅಲ್ಲದ ಈ ನೆಲ, ನೀರು, ಅನ್ನದ ಸತ್ಯ ಹೇಳುವ ಸರಳ ಕೃತಿಗಳು. ತಾಂತ್ರಿಕ ಕಾರಣವೋ, ಉದ್ದೇಶರ್ವಕವೋ ಗೊತ್ತಿಲ್ಲ....’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೃತಿ ಕೈಬಿಟ್ಟಿರುವ ಬಗ್ಗೆ ಸಾಹಿತ್ಯ, ಮುದ್ರಣ, ಕೃಷಿ ಹಾಗೂ ವಿವಿಧ ವಲಯಗಳ ಪ್ರಮುಖರ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ‘ಅಕಾಡೆಮಿ ಬಹುಮಾನ ಪಡೆದ ಕೃತಿ ಗ್ರಂಥಾಲಯದಲ್ಲಿ ಓದಲು ಅರ್ಹವಲ್ಲವೇ?’ ಎಂಬ ಪ್ರಶ್ನೆಗಳೂ ಕೇಳಿಬಂದಿವೆ.

‘ನಾವೂ ಕೃತಿಗಳನ್ನು ಕಳುಹಿಸಿದ್ದೆವು. ಕೃತಿ ಬಗ್ಗೆ ನಮಗೊಂದು ಪತ್ರ ಬಂದಿತ್ತು. ಖಾರವಾಗಿ ಪ್ರತಿಕ್ರಿಯಿಸಿದ್ದೆವು. ಅಂತಿಮವಾಗಿ ನಮ್ಮ ಕೃತಿ ಆಯ್ಕೆಯಾಗಿತ್ತು’ ಎಂದು ಪ್ರಕಾಶಕ ಕಲ್ಲೂರ ನಾಗೇಶ್ತಿಳಿಸಿದರು.

‘ದೇರ್ಲ ಅವರ ಬರಹವನ್ನು ನಾನೂ ಓದುತ್ತೇನೆ. ಆದರೆ, ಅವರ ಕೃತಿ ಆಯ್ಕೆ ಆಗದಿರುವ ವಿಚಾರವು ನನ್ನ ಗಮನಕ್ಕೂ ಬಂದಿಲ್ಲ. ಸುಮಾರು 7 ಸಾವಿರ ಕೃತಿಗಳು ಬಂದಿದ್ದವು. ನಮ್ಮ ಸಮಿತಿಯಲ್ಲಿ 25 ಮಂದಿ ಸದಸ್ಯರಿದ್ದು, ವಿವಾದಾತ್ಮಕ ಆಗಿದ್ದರೆ ಮಾತ್ರ ನನ್ನ ಗಮನಕ್ಕೆ ತರುತ್ತಾರೆ. ಈ ಕೃತಿ ಯಾರಿಗೆ ಹೋಗಿದೆ? ಏನು ಷರಾ ಬರೆದಿದ್ದಾರೆ? ತಾಂತ್ರಿಕ ಕಾರಣಗಳಿವೆಯೇ? ಎಂಬುದನ್ನು ಖುದ್ದು ಪರಿಶೀಲಿಸುತ್ತೇನೆ. ಪುನರ್ ಪರಿಶೀಲನೆ ಅವಕಾಶ ಇದ್ದರೂ, ಪರಿಶೀಲಿಸಲಾಗುವುದು’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಪ್ರತಿಕ್ರಿಯಿಸಿದ್ದಾರೆ.

‘ಈ ಬಾರಿ ಸಾಕಷ್ಟು ಪಾರದರ್ಶಕತೆಗೆ ಪ್ರಯತ್ನಿಸಿದ್ದೇವೆ. ಆಯ್ಕೆ ಆದ ಮತ್ತು ಆಗದ ಕೃತಿಗಳನ್ನು ಸಾರ್ವಜನಿಕ ಗ್ರಂಥಾಲಯದಲ್ಲಿ ಪ್ರದರ್ಶನವೂ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT