ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವು ಸಾಕಲು ಸರ್ಕಾರಿ ನೌಕರರ ವೇತನ ಕಡಿತ

ಸಂಘದ ಪ್ರಸ್ತಾವಕ್ಕೆ ಸರ್ಕಾರದ ಮಂಜೂರಾತಿ, ನೌಕರರ ಅಪಸ್ವರ
Last Updated 16 ನವೆಂಬರ್ 2022, 21:38 IST
ಅಕ್ಷರ ಗಾತ್ರ

ಬೆಂಗಳೂರು: ಗೋಶಾಲೆಯಲ್ಲಿ ಹಸುಗಳನ್ನು ಪೋಷಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಪುಣ್ಯಕೋಟಿ ದತ್ತು ಯೋಜನೆ’ಗೆ ನೌಕರರ ವೇತನದಿಂದ ದೇಣಿಗೆ ಕಡಿತಗೊಳಿಸಲುರಾಜ್ಯ ಸರ್ಕಾರ ಬುಧವಾರ (ನ.16) ಮಂಜೂರಾತಿ ನೀಡಿದೆ.

‘ಡಿ’ ವೃಂದದ ನೌಕರರನ್ನು ಬಿಟ್ಟು, ಇತರ ವೃಂದಗಳ, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ ತಿಂಗಳ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತವಾಗಲಿದೆ.

ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಗೆ ಕಡಿತ ಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ, ಈ ಮಂಜೂರಾತಿ ನೀಡಲಾಗಿದೆ. ವಂತಿಗೆ ಕೊಡಲು ಇಚ್ಛೆ ಇಲ್ಲದವರು, ಅಸಮ್ಮತಿ ಪತ್ರವನ್ನು ಇದೇ 25ರ ಒಳಗೆ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಲಿಖಿತವಾಗಿ ನೀಡಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಆದರೆ, ಸಂಘ ಸಲ್ಲಿಸಿದ್ದ ಪ್ರಸ್ತಾವ ಮತ್ತು ಸರ್ಕಾರದ ಮಂಜೂರಾತಿಗೆ ನೌಕರರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಪ್ರಸಕ್ತ ಸಾಲಿನ (2022–23) ಬಜೆಟ್‌ನಲ್ಲಿ ‘ಪುಣ್ಯಕೋಟಿ’ ದತ್ತು ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಿದ್ದರು. ಅಲ್ಲದೆ, ಈ ಯೋಜನೆಯ ಧ್ಯೇಯೋದ್ದೇಶಕ್ಕೆ ಪೂರಕವಾಗಿ ಗೋವುಗಳನ್ನು ಪೋಷಿಸುವ ಕಾರ್ಯಕ್ಕೆ ಸರ್ಕಾರದ ಹಾಗೂ ಸರ್ಕಾರದ ಇತರ ಅವಿಭಾಜ್ಯ ಅಂಗಗಳಾದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರು ನೆರವು ನೀಡಬೇಕು ಎಂದು ಮನವಿ ಮಾಡಿದ್ದರು.

ಇತ್ತೀಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ನೇತೃತ್ವದ ನಿಯೋಗ, ನೌಕರರ ವೇತನದಿಂದ ಹಣ ಕಡಿತ ಮಾಡಿ ಈ ಯೋಜನೆಗೆ ₹ 100 ಕೋಟಿ ದೇಣಿಗೆ ನೀಡುವ ಪತ್ರವನ್ನು ನೀಡಿದ್ದರು.

‘ನೌಕರರ ಸಂಘ ಈ ಹಿಂದೆ ಪ್ರವಾಹ, ಕೋವಿಡ್‌, ಭೂಕಂಪದಂಥ ಸಂದರ್ಭದಲ್ಲಿಯೂ ಸರ್ಕಾರದ ನೆರವಿಗೆ ನಿಂತಿದೆ. ಇದೊಂದು ಉತ್ತಮ ಯೋಜನೆ. ನೆರವು ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದರು. ಹೀಗಾಗಿ, ರಾಜ್ಯದಲ್ಲಿರುವ 107 ಸಂಘಗಳ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ, ಒಮ್ಮತದಿಂದ ಈ ತೀರ್ಮಾನ ತೆಗೆದುಕೊಂಡಿದ್ದೇವೆ. 7ನೇ ವೇತನ ಆಯೋಗ ರಚಿಸುವ ಮೂಲಕ ನೌಕರರ ಪರ ಸರ್ಕಾರ ನಿಂತಿದೆ. ಅದಕ್ಕೆ ಪೂರಕವಾಗಿ ನಾವೂ ಸ್ಪಂದಿಸಿದ್ದೇವೆ. ಹಾಗೆಂದು, ವಂತಿಗೆ ನೀಡುವಂತೆ ಯಾರಿಗೂ ಬಲವಂತ ಇಲ್ಲ. ಶೇ 95ರಷ್ಟು ನೌಕರರು ವೇತನದಿಂದ ದೇಣಿಗೆ ನೀಡುವ ವಿಶ್ವಾಸವಿದೆ’ ಎಂದು ಅಧ್ಯಕ್ಷ ಷಡಾಕ್ಷರಿ ತಿಳಿಸಿದರು.

ಅಸಮಾಧಾನ: ‘ಸರ್ಕಾರ 7ನೇ ವೇತನ ಆಯೋಗ ರಚಿಸಿದ ಆದೇಶ ಇನ್ನೂ ಬಂದಿಲ್ಲ. ಆದರೆ, ಪುಣ್ಯಕೋಟಿ ಯೋಜನೆಗೆ ವೇತನದಿಂದ ವಂತಿಗೆ ಕಡಿತಗೊಳಿಸುವ ಆದೇಶ ತರಾತುರಿಯಲ್ಲಿ ಬಂದಿದೆ. ಇದು ನಮ್ಮ ದುರಾದೃಷ್ಟ’ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಎಂದು ಪಿ. ಗುರುಸ್ವಾಮಿ ಅವರು ಅಸಮಾಧಾನವ್ಯಕ್ತಪಡಿಸಿದರು.

ಎಸ್‌ಸಿ, ಎಸ್‌ಟಿ ನೌಕರರ ಸಂಘ ಅಸಮ್ಮತಿ
‘ರಾಜ್ಯದಲ್ಲಿ ನಮ್ಮ ಸಂಘ ಕೂಡಾ ಬಲಿಷ್ಠವಾದುದು. ಯೋಜನೆಗೆ ವೇತನದಿಂದ ದೇಣಿಗೆ ಕಟಾಯಿಸುವ ಬಗ್ಗೆ ನಮ್ಮ ಜೊತೆ ರಾಜ್ಯ ಸರ್ಕಾರಿ ನೌಕರರ ಸಂಘವಾಗಲಿ, ಇತರ ಅಧಿಕಾರಿಗಳಾಗಲಿ ಸಮಾಲೋಚನೆ ನಡೆಸಿಲ್ಲ. ಹೀಗಾಗಿ, ವೇತನ ಕಟಾಯಿಸುವುದಕ್ಕೆ ನಮ್ಮ ಸಮ್ಮತಿ ಇಲ್ಲ’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಹೇಳಿದರು.

ಯಾರಿಂದ ಎಷ್ಟು ಮೊತ್ತ?
ವೃಂದ; ಮೊತ್ತ (₹ಗಳಲ್ಲಿ)

‘ಎ’ ವೃಂದ; 11,000
‘ಬಿ’ ವೃಂದ;‌ 4,000
‘ಸಿ’ ವೃಂದ;‌ 4,00
‘ಡಿ’ ವೃಂದ; ವಿನಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT