ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಫ್‌ಒ ಮನೆಯಲ್ಲಿ ಶ್ರೀಗಂಧ

ಎಸಿಎಫ್ ಹುದ್ದೆಗೆ ಬಡ್ತಿ ನಿರಾಕರಿಸಿದ್ದ ಬಾದಾಮಿ ವಲಯ ಅರಣ್ಯಾಧಿಕಾರಿ ಖೇಡಗಿ
Last Updated 16 ಮಾರ್ಚ್ 2022, 22:29 IST
ಅಕ್ಷರ ಗಾತ್ರ

ಬಾಗಲಕೋಟೆ/ಹಾವೇರಿ/ಗದಗ: ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಅವರ ಬಾಗಲಕೋಟೆಯ ನವನಗರದ ಸೆಕ್ಟರ್ ನಂ 15ರಲ್ಲಿರುವ ಅವರ ನಿವಾಸಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ದಾಳಿ ಮಾಡಿದ ವೇಳೆ ನೋಟು ಎಣಿಸುವ ಯಂತ್ರ ಹಾಗೂ 3 ಕೆ.ಜಿ ಶ್ರೀಗಂಧದ ತುಂಡುಗಳು ದೊರೆತಿವೆ.

ಖೇಡಗಿ ಮೂಲತಃ ವಿಜಯಪುರ ಜಿಲ್ಲೆ ಸಿಂದಗಿಯವರು. ಎರಡು ವರ್ಷಗಳಿಂದ ಬಾದಾಮಿ ವಲಯ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ವಿಜಯಪುರ ಹಾಗೂ ಬಾಗಲಕೋಟೆ ಅರಣ್ಯ ವಲಯಗಳಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರು ಅಳಿಯಂದಿರ ಮನೆ, ಅಂಗಡಿ, ಬಾದಾಮಿಯ ಕಚೇರಿ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿತು.

ವರ್ಗಾವಣೆಗಾಗಿ ಎಸಿಎಫ್ ಹುದ್ದೆ ನಿರಾಕರಣೆ: ಸಹಾಯಕ ವಲಯ ಅರಣ್ಯಾಧಿಕಾರಿ (ಎಆರ್‌ಎಫ್‌ಒ) ಆಗಿ ಇಲಾಖೆಯಲ್ಲಿ ಕೆಲಸ ಆರಂಭಿಸಿದ್ದ ಶಿವಾನಂದ ಖೇಡಗಿ ಇದೇ ಜೂನ್ 31ಕ್ಕೆ ನಿವೃತ್ತಿಯಾಗಲಿದ್ದರು. ವರ್ಷದ ಹಿಂದೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗೆ ಬಡ್ತಿ ದೊರಕಿತ್ತು. ಬಹುತೇಕ ಸೇವೆ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಮಾಡಿರುವ ಅವರು, ಎಸಿಎಫ್ ಆದಲ್ಲಿ ಬೇರೆ ಕಡೆಗೆ ತೆರಳಬೇಕಾಗುತ್ತದೆ ಎಂದು ಬಡ್ತಿ ನಿರಾಕರಿಸಿ ಬರೆದುಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಹಾವೇರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಹಾಯಕ ಎಂಜಿನಿಯರ್‌ ಕೃಷ್ಣ ಕೇಶಪ್ಪ ಆರೇರ ಅವರ ಬಸವೇಶ್ವರ ನಗರ ಬಿ ಬ್ಲಾಕ್‌ನ 16ನೇ ಕ್ರಾಸ್‌ನಲ್ಲಿರುವ ಸ್ವಂತ ಮನೆ ಅಂದಾಜು ಒಂದೂವರೆ ಕೋಟಿ ಮೌಲ್ಯದ್ದಾಗಿದೆ. ಈ ಮನೆಯಲ್ಲಿ476 ಗ್ರಾಂ ಚಿನ್ನಾಭರಣ, ಎರಡು ಮುಕ್ಕಾಲು ಕೆ.ಜಿ. ಬೆಳ್ಳಿ, ₹2.29 ಲಕ್ಷ ನಗದು ಸಿಕ್ಕಿದೆ. ಹಾವೇರಿ ನಗರದಲ್ಲಿ 1 ನಿವೇಶನ, ಸ್ವಗ್ರಾಮ ಡೊಳ್ಳೇಶ್ವರದಲ್ಲಿ 12 ಎಕರೆ ಹೊಲ ಮತ್ತು ತೋಟವನ್ನು ಕೃಷ್ಣ ಹೊಂದಿದ್ದಾರೆ. ಸ್ವಗ್ರಾಮದಲ್ಲಿರುವ ಸಹೋದರರ ಮನೆಗಳ ಮೇಲೂ ದಾಳಿ ನಡೆದಿದ್ದು, ₹6 ಲಕ್ಷ ನಗದು, 180 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗದಗ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ಬಿ.ಎಸ್‌.ಅಣ್ಣಿಗೇರಿ ಅವರ ಪಂಚಾಕ್ಷರಿ ಬಡಾವಣೆಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಅರ್ಧ ಕೆ.ಜಿ. ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ ಹಾಗೂ 20 ಎಕರೆ ಜಮೀನಿನ ಪತ್ರಗಳು ಸಿಕ್ಕಿವೆ. ಉಳಿತಾಯ ಖಾತೆಯಲ್ಲಿ ₹32 ಲಕ್ಷ ಹಣ ಇರುವುದು ಪತ್ತೆಯಾಗಿದೆ. ಅದೇರೀತಿ, ಟಾಂಗಾಕೂಟ್‌ ಬಳಿ ಇರುವ ಅವರ ಅಳಿಯ ರಾಕೇಶ್‌ ಅವರ ಕಚೇರಿ ಮೇಲೆ ದಾಳಿ ನಡೆಸಿದ ತಂಡಕ್ಕೆ ಎರಡು ಕೆ.ಜಿ. ಬೆಳ್ಳಿ ಹಾಗೂ ₹59 ಸಾವಿರ ನಗದು ಸಿಕ್ಕಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT