ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಸರಿ ಶಾಲು ಧರಿಸಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವ ಸಂಘ: ಸಿದ್ದರಾಮಯ್ಯ

Last Updated 10 ಫೆಬ್ರುವರಿ 2022, 11:05 IST
ಅಕ್ಷರ ಗಾತ್ರ

ಬೆಂಗಳೂರು: ಸಂಘ ಪರಿವಾರದವರು ತಾವೇ ಕೇಸರಿ ಶಾಲು ಖರೀದಿ ಮಾಡಿ, ಅವುಗಳನ್ನು ಧರಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಮುಖ್ಯಮಂತ್ರಿ ಕಾನೂನು ಕ್ರಮ ಜರುಗಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಗ್ರಹಿಸಿದ್ದಾರೆ.

ಹಿಜಾಬ್‌ ವಿವಾದದ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಆಡಳಿತಾರೂಢ ಬಿಜೆಪಿಯು ಜನರ ಗಮನ ಬೇರೆಡೆಗೆ ಸೆಳೆದು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಿಜಾಬ್ ಎಂಬ ಹೊಸ ವಿವಾದ ಹುಟ್ಟುಹಾಕಿದೆ’ ಎಂದು ಆರೋಪಿಸಿದ್ದಾರೆ.

‘ಇಸ್ಲಾಂ ಧರ್ಮದ ಪ್ರಕಾರ ಹಿಜಾಬ್ ಧರಿಸುವುದು ಒಂದು ಪದ್ಧತಿ. ಕುರಾನ್ ನಲ್ಲಿಯೂ ಇದರ ಉಲ್ಲೇಖವಿದೆ. ಇದರಿಂದ ಬೇರೆಯವರಿಗೆ ಏನು ತೊಂದರೆ? ಇದನ್ನೇ ನೆಪವಾಗಿಟ್ಟುಕೊಂಡು ಹೆಣ್ಣುಮಕ್ಕಳನ್ನು ಕಾಲೇಜಿನ ಒಳಬರಲು ಬಿಡದೆ ಇರುವ ಪ್ರಾಂಶುಪಾಲರ ನಡೆ ಅಮಾನವೀಯವಾದುದು. ಅವರನ್ನು ಈ ಕೂಡಲೇ ವಜಾಗೊಳಿಸಬೇಕು‘ ಎಂದು ಆಗ್ರಹಿಸಿದ್ದಾರೆ.

‘ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳುತ್ತಾರೆ. ಇಂತಹವರು ರಾಜಕೀಯದಲ್ಲಿ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್‘ ಎಂದು ಸಿದ್ದರಾಮಯ್ಯ ಅವರು ಹೆಸರು ಹೇಳದೇ ಸಚಿವ ಈಶ್ವರಪ್ಪ ಅವರ ವಿರುದ್ಧ ಕಿಡಿ ಕಾರಿದರು.

‘ಇನ್ನು ನೂರು, ಐನೂರು ವರ್ಷದ ನಂತರ ಭಗವಾಧ್ವಜವೇ ರಾಷ್ಟ್ರಧ್ವಜ ಆಗಬಹುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ಹೇಳಿದ್ದರು. ಅಲ್ಲದೆ, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಅವರು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

‘ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶದ ಮಹಿಳೆಯರು, ದಲಿತರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶ, ದೇಶದ ಜನತೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಯುವ ಜನರು ಹೋರಾಟಕ್ಕೆ ಸಿದ್ಧರಾಗಬೇಕು. ಮುಂದಿನ ವರ್ಷ ಚುನಾವಣೆ ಬರಲಿದೆ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವುದಕ್ಕಿಂತ ಬಿಜೆಪಿಯವರ ದುರಾಡಳಿತದಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದರಲ್ಲಿ ಯುವ ಕಾಂಗ್ರೆಸ್‌ನ ಪಾತ್ರ ಬಹಳ ದೊಡ್ಡದಿದೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಸಾಧನೆಯ ಬಲದಿಂದ ಮತಕೇಳುವ ಧೈರ್ಯ ಬಿಜೆಪಿಗೆ ಇಲ್ಲ. ಭ್ರಷ್ಟಾಚಾರದಿಂದ ರೋಸಿಹೋಗಿರುವ ಗುತ್ತಿಗೆದಾರರ ಸಂಘದವರು ಸಚಿವರ 40% ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಚೌಕಿದಾರ್ ಪ್ರಧಾನಿ ಇಲ್ಲಿಯ ವರೆಗೆ ಉತ್ತರಿಸಿಲ್ಲ. ಏನಿದರ ಅರ್ಥ’ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.

‘ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಸಿದ್ಧಾಂತ ಮತ್ತು ಸಂವಿಧಾನದ ಅರಿವು ಇರಬೇಕು. ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಂವಿಧಾನದ ಬಗೆಗೆ ಸರಳವಾದ ಒಂದು ಪುಸ್ತಕ ಬರೆದಿದ್ದಾರೆ, ಅದನ್ನು ಎಲ್ಲರೂ ಕೊಂಡು ಓದಬೇಕು. ಸಂವಿಧಾನ ಮತ್ತು ದೇಶವನ್ನು ಕಾಪಾಡುವ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT