ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಟ್ರೋ ರವಿಗೆ ಜನವರಿ 25ರವರೆಗೆ ನ್ಯಾಯಾಂಗ ಬಂಧನ

Last Updated 16 ಜನವರಿ 2023, 8:38 IST
ಅಕ್ಷರ ಗಾತ್ರ

ಮೈಸೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಂಜುನಾಥ ಅಲಿಯಾಸ್ ಸ್ಯಾಂಟ್ರೊ ರವಿಗೆ ಜ.25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನಗರದ ಆರನೇ ಹೆಚ್ಚುವರಿ ಮತ್ತು ಸೆಶೆನ್ಸ್ ನ್ಯಾಯಾಲಯವು ಸೋಮವಾರ ಆದೇಶ ನೀಡಿತು.

ಜಾಮೀನು ಮತ್ತು ಇತರ ಆಕ್ಷೇಪಣೆಗಳಿಗೆ ಜ.18ರಂದು ಮನವಿ ಸಲ್ಲಿಸಬಹುದು ಎಂದು ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಆದೇಶಿಸಿದರು.

ಅವರ ಮುಂದೆ ಬೆಳಿಗ್ಗೆ 11:10ಕ್ಕೆ ಬಿಗಿ ಭದ್ರತೆಯೊಂದಿಗೆ ಸ್ಯಾಂಟ್ರೊ ರವಿಯನ್ನು ಹಾಜರುಪಡಿಸಲಾಯಿತು.

ಸರ್ಕಾರಿ ವಕೀಲರು ವಾದಿಸಿ, 'ಸ್ಯಾಂಟ್ರೊ ರವಿ ಈ ಪ್ರಕರಣ ಮಾತ್ರವಲ್ಲದೇ, ಹಲವಾರು ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದೆ. ಎಲ್ಲವನ್ನೂ ಒಗ್ಗೂಡಿಸಿ ಸಿಐಡಿ ತನಿಖೆಗೆ ಒಳಪಡಿಸಲು ಸರ್ಕಾರ ಆಲೋಚಿಸುತ್ತಿದೆ. ಬಂಧನದ ಬಳಿಕ ಆತನ ವಿಚಾರಣೆಗೆ ಹೆಚ್ಚು ಕಾಲಾವಕಾಶ ದೊರೆತಿಲ್ಲ. ಅತ್ಯಾಚಾರದಂತಹ ಗಂಭೀರ ಪ್ರಕರಣ ಇದಾಗಿದ್ದು, ಪೊಲೀಸ್ ತನಿಖೆಗೆ ಆತ ಅವಶ್ಯ. ಈ ಹಂತದಲ್ಲಿ ಯಾವುದೇ ಜಾಮೀನು ನೀಡಬಾರದು' ಎಂದು ಕೋರಿದರು.

ಆರೋಪಿ ಪರ ವಕೀಲರು ಮಾತನಾಡಿ 'ಸ್ಯಾಂಟ್ರೋ ರವಿ ಅವರಿಗೆ ಜೀವ ಭಯವಿದೆ, ಹಲವು ಪ್ರಕರಣಗಳಲ್ಲಿ ಆತನನ್ನು ಸಿಕ್ಕಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ನ್ಯಾಯಾಲಯವು ಬಂಧನಕ್ಕೆ ಕಾರಣವಾದ ಐಪಿಸಿ 376, 498ಕ್ಕೆ ಸಂಬಂಧಿಸಿದಂತೆ ಮಾತ್ರ ವಾದವನ್ನು ಪರಿಗಣಿಸಬೇಕು. ಆರೋಪಿಯು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯಾಯಾಲಯ ಸಮ್ಮತಿಸಿದರೆ ಈಗಲೇ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇನೆ' ಎಂದು ಮನವಿ ಮಾಡಿದರು.

ವಾದ ವಿವಾದ ಆಲಿಸಿದ ನ್ಯಾಯಾಧೀಶರು, 'ಸಿಐಡಿ ಪ್ರಕರಣಕ್ಕೆ ಒಪ್ಪಿಸುವುದು ಬಿಡುವುದು ರಾಜ್ಯ ಸರ್ಕಾರದ ವಿವೇಚನೆ, ಅದರ ಕುರಿತು ನಾವು ಏನನ್ನೂ ಹೇಳುವುದಿಲ್ಲ, ಅದೇ ಉದ್ದೇಶವಿರುವುದಾದರೆ ಇಲ್ಲಿ ಪೊಲೀಸ್ ಕಸ್ಟಡಿಗೆ ನೀಡುವ ಔಚಿತ್ಯ ಕಂಡುಬರುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT