ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಸಾರಾ ಅಬೂಬಕ್ಕರ್ ಇನ್ನಿಲ್ಲ

Last Updated 10 ಜನವರಿ 2023, 18:25 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ಮಂಗಳವಾರ ನಿಧನರಾದರು.

ಆರು ತಿಂಗಳ ಹಿಂದೆ ಬಾಯಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ಏರುಪೇರಾಗಿದ್ದರಿಂದ ನಗರದ ಯುನಿಟಿ ಆಸ್ಪತ್ರೆಗೆ ಮಂಗಳ ವಾರ ಬೆಳಿಗ್ಗೆ ಅವರನ್ನು ದಾಖಲಿಸಲಾಗಿತ್ತು. ಸ್ವಲ್ಪ ಹೊತ್ತಿನಲ್ಲೇ ಅವರು ಕೊನೆಯುಸಿರೆಳೆದರು.

ಸಾರಾ ಅವರಿಗೆ ನಾಲ್ವರು ಪುತ್ರರು ಇದ್ದಾರೆ. ಅಂತ್ಯಕ್ರಿಯೆಯು ನಗರದ ಬಂದರ್‌ನ ಜೀನತ್‌ ಬಕ್ಷ್‌ ಜುಮ್ಮಾ ಮಸೀದಿ ಪ್ರದೇಶದಲ್ಲಿ ನೆರವೇರಿತು.

ಕಾಸರಗೋಡು ಜಿಲ್ಲೆಯ ‘ಪುದಿಯಾ ಪುರ್ (ಹೊಸಮನೆ) ತರವಾಡು ಮನೆಯಲ್ಲಿ ಜನಿಸಿದ್ದ ಸಾರಾ, 1984ರಲ್ಲಿ ರಚಿಸಿದ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಮೂಲಕ ಖ್ಯಾತರಾಗಿದ್ದರು. ಇದು ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಒಡಿಯಾ ಭಾಷೆಗೆ ಅನುವಾದವಾಗಿದೆ.

ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿತ್ತು. ‘ಹೊತ್ತು ಕಂತುವ ಮುನ್ನ’ ಅವರ ಆತ್ಮಕತೆ. ಹಲವು ಕಾದಂಬರಿ, ಐದು ಕಥಾ ಸಂಕಲನ, ನಾಟಕ, ಪ್ರವಾಸ ಕೃತಿಗಳು, ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ. ಮಲಯಾಳ ಭಾಷೆಯಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿದ್ದರು.

ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಅವರು 10ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ವಕೀಲರಾಗಿದ್ದ ಅವರ ತಂದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪಡೆದ ಮೊದಲ ಮುಸ್ಲಿಂ ಬಾಲಕಿ ಅವರು.

ಸದಾ ಧಾರ್ಮಿಕ ಮೂಲಭೂತವಾದದ ವಿರುದ್ಧ ಧ್ವನಿ ಎತ್ತುತ್ತಿದ್ದ ಸಾರಾ, ಸ್ತ್ರೀ ಸಬಲೀಕರಣ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆದು ಸಬಲರಾಗಬೇಕು ಎಂಬ ಆಶಯ ಹೊಂದಿದ್ದ ಅವರು, ತಮ್ಮ ಕೃತಿಗಳಲ್ಲೂ ಇದನ್ನು ಬಲವಾಗಿ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT