ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ ಬುಲ್ ಮೇಲೆ ಹಾರುವ ಸಾವರ್ಕರ್ -ಉಲ್ಲೇಖಕ್ಕೆ ತಗಾದೆ

ಕುಸ್ಮಾ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Last Updated 25 ನವೆಂಬರ್ 2022, 8:28 IST
ಅಕ್ಷರ ಗಾತ್ರ

ಬೆಂಗಳೂರು: "ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್‌ಬುಲ್‌ ಹಕ್ಕಿಗಳು ಬರುತ್ತಿದ್ದವು. ಅವುಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು" ಎಂದು ರಾಜ್ಯ ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಿರುವುದಕ್ಕೆ, "ಕರ್ನಾಟಕ ಅನುದಾನರಹಿತ ಶಾಲೆಗಳ ನಿರ್ವಹಣೆಗಳ ಸಂಘ" (ಕುಸ್ಮಾ) ಹೈಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

"ಕರ್ನಾಟಕ ಶಿಕ್ಷಣ ಕಾಯ್ದೆ-1983ರ ವಿವಿಧ ನಿಬಂಧನೆಗಳನ್ನು ಖಾಸಗಿ ಅನುದಾನರಹಿತ ಶಾಲೆಗಳಿಗೂ ಅಳವಡಿಕೆ ಮಾಡಿರುವುದು ಅಸಮಂಜಸ ಮತ್ತು ಅಸಾಂವಿಧಾನಿಕ" ಎಂದು ಆಕ್ಷೇಪಿಸಲಾದ ತಿದ್ದುಪಡಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ (ನ.24) ಪೂರ್ಣಗೊಳಿಸಿದ್ದು ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾದ ಮಂಡಿಸಿದ ವಕೀಲ ಕೆ.ವಿ.ಧನಂಜಯ ಅವರು, ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಸಾವರ್ಕರ್ ಬಗೆಗಿನ ಕೆಲ ಸಾಲುಗಳು ಮತ್ತು 1984ರ ದೆಹಲಿ ಸಿಖ್ ಹತ್ಯಾಕಾಂಡದ ಕುರಿತ ಮಾಹಿತಿಗಳನ್ನು ಪ್ರಸ್ತಾಪಿಸಿ; "ನಿಗದಿಪಡಿಸಿದ ಪಠ್ಯಕ್ರಮಕ್ಕಿಂತ ಹೆಚ್ಚೇನೂ ಮಕ್ಕಳಿಗೆ ಕಲಿಸಬಾರದು ಎಂದು ನಿರ್ದೇಶಿಸುವ ನಿಬಂಧನೆಗಳಿಗೆ ಈ ಅಳವಡಿಕೆ ವಿರುದ್ಧವಾಗಿವೆ" ಎಂದರು.

"ಸರ್ಕಾರವು ಶಾಲಾ ಮಕ್ಕಳನ್ನು ರಾಜಕೀಯ ಪಕ್ಷಗಳಿಗೆ ಭವಿಷ್ಯದ ಮತದಾರರನ್ನಾಗಿ ರೂಪಿಸಲು ಪ್ರಯತ್ನಿಸುತ್ತದೆ. ಇಂತಹ ತಪ್ಪುಗಳನ್ನು ಎತ್ತಿ ತೋರಿಸುವ ಅಧಿಕಾರ ಕುಸ್ಮಾಗೆ ಇದೆ. ಮುಕ್ತ ಮಾರುಕಟ್ಟೆಯು ಸರ್ಕಾರದ ಪ್ರಕಟಣೆಗಳಿಗಿಂತ ಹೆಚ್ಚು ಮಕ್ಕಳ ಸ್ನೇಹಿಯಾಗಿದೆ" ಎಂದು ಅವರು ಪ್ರತಿಪಾದಿಸಿದರು.

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ವಿಷಯದಲ್ಲಿ ಮೀಸಲಾತಿ ಸೂಚಿಸುವ ಕಲಂ 41(3)ರ ಜೊತೆಗೆ ಓದಲಾದ ಕಲಂ 5 ಸೇರಿದಂತೆ ಕರ್ನಾಟಕ ಶಿಕ್ಷಣ ಕಾಯ್ದೆಯ ಹಲವು ನಿಬಂಧನೆಗಳನ್ನು ಕುಸ್ಮಾ ಪ್ರಶ್ನಿಸಿದೆ. 1995ರ ಜನವರಿ 1ರಲ್ಲೇ ಈ ಅರ್ಜಿ ದಾಖಲಿಸಿದ್ದು ಹಲವು ಸುತ್ತಿನ ಕಾನೂನು ಹೋರಾಟ ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT