ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಲಂಚ ಪ್ರಕರಣ: ಸಚಿವ ಸೋಮಶೇಖರ್‌ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ಎಫ್ಐಆರ್‌ ರದ್ದುಪಡಿಸಲು ಕೋರಿಕೆ
Last Updated 11 ಅಕ್ಟೋಬರ್ 2022, 4:16 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಯೊಂದರ ಕಾಮಗಾರಿಯ ಗುತ್ತಿಗೆ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದ ‍ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಕರ್ನಾಟಕದಸಹಕಾರಸಚಿವ ಎಸ್‌.ಟಿ.ಸೋಮಶೇಖರ್, ಐಎಎಸ್‌ ಅಧಿಕಾರಿ ಜಿ.ಸಿ.ಪ್ರಕಾಶ್‌ ಹಾಗೂ 37 ಕ್ರೆಸೆಂಟ್‌ ಹೋಟೆಲ್‌ ಮಾಲೀಕ ಕೆ.ರವಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್‌ನ ತನಿಖೆಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ 23 ರಂದು ತಡೆಯಾಜ್ಞೆ ನೀಡಿತ್ತು.

ಮೂವರುಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ದೇವದತ್ತ ಕಾಮತ್‌ ಹಾಗೂ ಸಿದ್ಧಾರ್ಥ ದವೆ ವಾದ ಮಂಡಿಸಿ, ಹೈಕೋರ್ಟ್‌ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿದರು.

ಪ್ರಕರಣದ ಒಬ್ಬ ಆರೋಪಿ ವಿರುದ್ಧ ತನಿಖೆಗೆ ತಡೆಯಾಜ್ಞೆ ನೀಡಿರುವುದರಿಂದ ಲೋಕಾಯುಕ್ತ ‍ಪೊಲೀಸರು ಇತರರ ವಿರುದ್ಧ ವಿಚಾರಣೆ ನಡೆಸುವುದು ಸರಿಯಲ್ಲ ಎಂದರು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ, ಈ ಮನವಿಯನ್ನು ತಿರಸ್ಕರಿಸಿತು.

ಈ ನಡುವೆ, ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲರು, ‘ಯಡಿಯೂರಪ್ಪ ಪ್ರಕರಣ ವಿಭಿನ್ನವಾಗಿತ್ತು. ಯಡಿಯೂರಪ್ಪ ಪ್ರಕರಣದಲ್ಲಿ ರಾಜ್ಯಪಾಲರಿಂದ ಪೂರ್ವಾನುಮತಿ ಕೋರಲಾಗಿತ್ತು. ಅದು ತಿರಸ್ಕೃತವಾಗಿತ್ತು. ಆದರೆ, ಬೇರೆ ಆರೋಪಿಗಳ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ’ ಎಂದರು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ತಮ್ಮ ಅರ್ಜಿಗಳನ್ನು ಹಿಂಪಡೆಯುವುದಾಗಿ ತಿಳಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕಿನ ಕೋನದಾಸನಪುರದಲ್ಲಿ ಬಿಡಿಎ ನಿರ್ಮಿಸುತ್ತಿರುವ ಬಹುಮಹಡಿ ವಸತಿ ಸಮುಚ್ಚಯದ ಕಾಮಗಾರಿಯ ಗುತ್ತಿಗೆ ಸಂಬಂಧ ಚಂದ್ರಕಾಂತ್‌ ರಾಮಲಿಂಗಂ ಅವರಿಂದ ಇತರ ಆರೋಪಿಗಳು ಒಟ್ಟು ₹ 29.5 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT