ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಅಧಿಕಾರ ಅಬಾಧಿತ: ಪಿಎಂಎಲ್‌ಎ ಸೆಕ್ಷನ್‌ಗಳನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Last Updated 27 ಜುಲೈ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೀಡಲಾಗಿರುವ ಅಧಿಕಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 200ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇ.ಡಿಯ ಅಧಿಕಾರಗಳನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ವಿರೋಧ ಪಕ್ಷಗಳಿಗೆ ತೀವ್ರ ಹಿ‌ನ್ನಡೆಯಾದಂತಾಗಿದೆ.

ಪಿಎಂಎಲ್‌ಎಯ ವಿವಿಧ ಸೆಕ್ಷನ್‌ಗಳ ಅಡಿ ಜಾರಿ ನಿರ್ದೇಶನಾಲಯವು ಬಳಸುತ್ತಿರುವ ಅಧಿಕಾರವನ್ನು ಪ್ರಶ್ನಿಸಿ ವಿರೋಧ ಪಕ್ಷಗಳ ನಾಯಕರು, ರಾಜ್ಯಗಳ ಸಚಿವರು, ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ಸಲ್ಲಿಸಿದ್ದ 241 ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದಎ.ಎಂ.ಖಾನ್‌ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ನಡೆಸಿತ್ತು. ಅರ್ಜಿಗಳಿಗೆ ಸಂಬಂಧಿಸಿದ 545 ಪುಟಗಳಷ್ಟು ದೀರ್ಘವಾದ ತೀರ್ಪನ್ನು ಪೀಠವು ಬುಧವಾರ ನೀಡಿತು.

ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಮತ್ತು ಆ ಮೂಲಕ ವಿರೋಧ ಪಕ್ಷಗಳ ನಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ಅಧಿಕಾರಗಳು ನಿರಂಕುಶವಾದುವು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಈ ಪ್ರತಿಪಾದನೆಯನ್ನು ಅಲ್ಲಗಳೆದಿರುವ ಸುಪ್ರೀಂ ಕೋರ್ಟ್‌ ಪೀಠವು, ‘ಈ ಅಧಿಕಾರಗಳು ನಿರಂಕುಶವಾದುದಲ್ಲ. ಆರೋಪಿಗಳ ಹಕ್ಕುಗಳ ರಕ್ಷಣೆಗೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಲ್ಲಿ ಅವಕಾಶ ನೀಡಲಾಗಿದೆ’ ಎಂದು ಹೇಳಿದೆ.

‘ಯಾವುದೇ ಸ್ವರೂಪದ ಅಪರಾಧಗಳನ್ನು ಈ ಕಾಯ್ದೆಯ ಅಡಿ ತರುವುದು ಅಥವಾ ಕಾಯ್ದೆಯಿಂದ ತೆಗೆದುಹಾಕುವುದು ಸಂಪೂರ್ಣವಾಗಿ ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವಾಗಿದೆ’ ಎಂದು ಪೀಠವು ಹೇಳಿದೆ. ಪಿಎಂಎಲ್‌ಎಗೆ ತಂದಿರುವ ಕೆಲವು ತಿದ್ದುಪಡಿಗಳನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಿಸ್ತೃತ ಪೀಠವು ಪರಿಶೀಲಿಸಬೇಕು ಎಂದು ಪೀಠವು ಹೇಳಿದೆ.

‘ಇಸಿಐಆರ್ ಕಡ್ಡಾಯವಲ್ಲ’

ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು ಸಿದ್ಧಪಡಿಸುವ ‘ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್)’, ಎಫ್‌ಐಆರ್‌ಗೆ ಸಮಾನವಾದ ದಾಖಲೆಯಲ್ಲ. ಹೀಗಾಗಿ ಆರೋಪಿಗಳ ಬಂಧನದ ಸಂದರ್ಭದಲ್ಲಿ ಇಸಿಐಆರ್ ಅನ್ನು ನೀಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್‌ ಪೀಠವು ಹೇಳಿದೆ.

ಪಿಎಂಎಲ್‌ಎ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಾಗ ಜಾರಿ ನಿರ್ದೇಶನಾಲಯವು ಇಸಿಐಆರ್‌ ಅನ್ನು ನೀಡುತ್ತಿಲ್ಲ ಎಂಬುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಪೀಠವು ಹೀಗೆ ಹೇಳಿದೆ.

‘ಎಫ್‌ಐಆರ್ ದಾಖಲಿಸುವುದು ಕಡ್ಡಾಯ ಮತ್ತು ಬಂಧನದ ವೇಳೆ ಆರೋಪಿಗಳಿಗೆ ಎಫ್‌ಐಆರ್‌ ತೋರಿಸುವುದು ಕಡ್ಡಾಯ. ಆದರೆ ಇಸಿಐಆರ್, ಎಫ್‌ಐಆರ್ ಅಲ್ಲ. ಅದು ಜಾರಿ ನಿರ್ದೇಶನಾಲಯದ ಆಂತರಿಕ ದಾಖಲೆ. ಆರೋಪಿಗಳ ಬಂಧನದ ವೇಳೆ ಇಸಿಐಆರ್ ಅನ್ನು ನೀಡುವುದು ಕಡ್ಡಾಯವಲ್ಲ. ಬಂಧನದ ವೇಳೆ ಯಾವ ಕಾರಣಕ್ಕೆ ಬಂಧಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದರೂ ಸಾಕು’ ಎಂದು ಪೀಠವು ಹೇಳಿದೆ.

ಆದರೆ, ‘ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದಾಗ, ಎಲ್ಲಾ ದಾಖಲೆಗಳನ್ನು ಪ್ರಸ್ತುತಪಡಿಸಿ ಎಂದು ನ್ಯಾಯಾಲಯವು ಕೇಳಬಹುದು. ಅದು ಸಂಪೂರ್ಣವಾಗಿ, ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರ’ ಎಂದೂ ಪೀಠವು ಹೇಳಿದೆ.

ತೀರ್ಪಿನ ಮುಖ್ಯಾಂಶಗಳು

‘ಯಾವುದೇ ವ್ಯಕ್ತಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾನೆ ಎಂಬ ಊಹೆಯ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಡೆದಿದೆ ಎನ್ನಲಾದ ಅಪರಾಧದ ಸಂಬಂಧ, ಆ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಬೇಕು ಮತ್ತು ಸಂಬಂಧಿತ ತನಿಖಾ ಸಂಸ್ಥೆಯಲ್ಲಿ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರಬೇಕು. ಆಗ ಮಾತ್ರ ಜಾರಿ ನಿರ್ದೇಶನಾಲಯವು ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿಕೊಳ್ಳಬಹುದು’ ಎಂದು ಸುಪ್ರೀಂ ಕೋರ್ಟ್‌ ಪೀಠವು ಹೇಳಿದೆ.

ಹಣಅಕ್ರಮ ವರ್ಗಾವಣೆಯ ಮೂಲಕ ಆಸ್ತಿ ಸಂಪಾದಿಸಿದ್ದರೆ ಮಾತ್ರಪಿಎಂಎಲ್‌ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎಯ 3ನೇ ಸೆಕ್ಷನ್‌ನಲ್ಲಿರುವ ವಿವರಣೆಗಳು ಅಸಾಂವಿಧಾನಿಕ ಎಂಬುದು ಅರ್ಜಿ ದಾರರ ವಾದವಾಗಿತ್ತು. ‘ಅಕ್ರಮ ಹಣ ವರ್ಗಾವಣೆ ನಡೆದ ನಂತರವಷ್ಟೇ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದಲ್ಲ. ಬದಲಿಗೆ ಅಂತಹ ಅಕ್ರಮ ವರ್ಗಾವಣೆಯ ವಿವಿಧ ಹಂತಗಳಲ್ಲೂ ಜಾರಿ ನಿರ್ದೇಶನಾಲಯವು ಕಾರ್ಯಪ್ರವೃತ್ತವಾಗಲು ಮತ್ತು ಕ್ರಮ ತೆಗೆದುಕೊಳ್ಳಲು 3ನೇ ಸೆಕ್ಷನ್‌ ಅವಕಾಶ ನೀಡುತ್ತದೆ’ ಎಂದು ಪೀಠವು ಹೇಳಿದೆ.

ಪಿಎಂಎಲ್‌ಎಯ 5ನೇ ಸೆಕ್ಷನ್‌ ಅಡಿ, ಆರೋಪಿಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಸಾಂವಿಧಾನಿಕ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಪೀಠವು ಈ ಪ್ರತಿಪಾದನೆಯನ್ನು ತಿರಸ್ಕರಿಸಿದೆ. ‘ತನಿಖೆ ನಡೆಸಲು ಅಗತ್ಯವಿರುವಂತೆ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಈ ಸೆಕ್ಷನ್‌ ಅವಕಾಶ ಮಾಡಿಕೊಡುತ್ತದೆ ಮತ್ತು ಆರೋಪಿಗಳ ಹಕ್ಕುಗಳು, ಹಿತಾಸಕ್ತಿ ರಕ್ಷಣೆಗೂ ಈ ಸೆಕ್ಷನ್‌ನಲ್ಲಿ ಅವ ಕಾಶವಿದೆ. ಹೀಗಾಗಿ ಇದು ಸಂವಿಧಾನಕ್ಕೆ ಬದ್ಧವಾಗಿದೆ’ ಎಂದು ಪೀಠವು ಹೇಳಿದೆ.

ಪಿಎಂಎಲ್‌ಎಯ 24ನೇ ಸೆಕ್ಷನ್‌ ಅಸಾಂವಿಧಾನಿಕ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ‘ಮುಟ್ಟುಗೋಲು ಹಾಕಿಕೊಳ್ಳಲಾದ ಸ್ವತ್ತುಗಳನ್ನು ಕಾನೂನುಬದ್ಧವಾಗಿಯೇ ಸಂಪಾದಿಸಲಾಗಿದೆ ಎಂಬುದನ್ನು ಸಾಬೀತುಮಾಡುವ ಹೊಣೆಗಾರಿಕೆ ಆರೋಪಿಗಳದ್ದೇ.ಇದು ಕಾಯ್ದೆಯ ಉದ್ದೇಶಗಳಿಗೆ ಬದ್ಧವಾಗಿರುವ ಸೆಕ್ಷನ್‌’ ಎಂದು ಹೇಳಿದೆ.

ತನಿಖೆಯ ವೇಳೆ ಆರೋಪಿಗಳು ನೀಡಿದ ಮಾಹಿತಿಯನ್ನು, ಅವರ ವಿರುದ್ಧ ಸಾಕ್ಷ್ಯವಾಗಿ ಬಳಸಲು ಪಿಎಂಎಲ್‌ಎಯ 50ನೇ ಸೆಕ್ಷನ್ ಅವಕಾಶ ಮಾಡಿ ಕೊಡುತ್ತದೆ. ಇದು ಸಂವಿಧಾನದ 20(3)ನೇ ವಿಧಿಗೆ ವಿರುದ್ಧವಾದುದು ಎಂಬುದು ಅರ್ಜಿದಾರರ ವಾದವಾಗಿತ್ತು. ‘ಸೆಕ್ಷನ್‌ 50ರ ಅಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆಯೇ ಹೊರತು, ಅದು ತನಿಖೆ ಅಲ್ಲ. ತನಿಖೆ ನಡೆಸಲು ಅವರು ಪೊಲೀಸ್ ಅಧಿಕಾರಿಗಳಲ್ಲ. ಹೀಗಾಗಿ ‘ಆರೋಪಿಗಳ ಹೇಳಿಕೆಯನ್ನು ಅವರ ವಿರುದ್ಧವೇ ಸಾಕ್ಷಿಯಾಗಿ ಬಳಸುವಂತಿಲ್ಲ’ ಎಂಬ 20(3)ನೇ ವಿಧಿಯು, ಇಲ್ಲಿ ಅನ್ವಯವಾಗುವುದಿಲ್ಲ’ ಎಂದು ಪೀಠವು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT