ಬೈಕ್ ಹಿಂದಿಕ್ಕಿದಕ್ಕೆ ಥಳಿತ, ಜಾತಿ ನಿಂದನೆ: ಎಸ್.ಸಿ ಯುವಕ ಆತ್ಮಹತ್ಯೆ

ನಂಗಲಿ (ಕೋಲಾರ ಜಿಲ್ಲೆ): ಬೈಕ್ ಹಿಂದಿಕ್ಕಿದ ಪರಿಶಿಷ್ಟ ಜಾತಿಯ(ಎಸ್.ಸಿ) ಉದಯ್ ಕಿರಣ್ (25) ಎಂಬ ಯುವಕನನ್ನು ಒಕ್ಕಲಿಗ ಸಮುದಾಯದ ನಾಲ್ವರು ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಇದರಿಂದ ಮನನೊಂದ ಆತ ಬೇವಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೆತ್ತಾಂಡ್ಲಹಳ್ಳಿಯ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ ಹಾಗೂ ಮುನಿವೆಂಕಟಪ್ಪ ವಿರುದ್ಧ ಮೃತನ ಮಾವ ಬಿ.ಎಚ್. ನಾಗರಾಜ್ ಗುರುವಾರ ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿಗಳೆಲ್ಲರೂ ಸಂಬಂಧಿಗಳಾಗಿದ್ದು, ತಲೆ ಮರೆಸಿಕೊಂಡಿದ್ದಾರೆ. ಅವರ ವಿರುದ್ಧ ದೌರ್ಜನ್ಯ, ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
‘ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಸಿಂಗ್ ತಿಳಿಸಿದ್ದಾರೆ.
‘ಬೈಕ್ ಹಿಂದಿಕ್ಕಿದ ಕಾರಣ ಜಗಳ ತೆಗೆದ ಆರೋಪಿಗಳು ಹಲ್ಲೆ ನಡೆಸಿ ಉದಯ್‌ನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಅವನ್ನು ವಾಪಸ್ ಕೇಳಲು ಆತ ಪೆತ್ತಾಂಡ್ಲಹಳ್ಳಿಗೆ ಹೋಗಿದ್ದ. ಈ ಸಂದರ್ಭದಲ್ಲಿ ಆರೋಪಿಗಳು ಆತ ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಜಾತಿ ನಿಂದನೆ ಮಾಡಿದ್ದರು’
ಎಂದು ಮೃತನ ಮಾವ ದೂರಿನಲ್ಲಿ ತಿಳಿಸಿದ್ದಾರೆ.
ಮೂಲತಃ ಎಚ್. ಬೈಯಪ್ಪನಹಳ್ಳಿ ಗ್ರಾಮದ ಈ ಯುವಕ ಬೇವಹಳ್ಳಿಯ ಮಾವನ ಮನೆಯಲ್ಲಿ ವ್ಯವಸಾಯ ಮಾಡಿ ಕೊಂಡಿದ್ದ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.