ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿ ಬಾಗಿಲಿಗೆ 40 ಲಕ್ಷ ವಾಹನ! ಆತಂಕದಲ್ಲಿ ಹಳೇ ಕಾರು, ಲಾರಿ ಮಾಲೀಕರು

Last Updated 14 ಆಗಸ್ಟ್ 2021, 19:03 IST
ಅಕ್ಷರ ಗಾತ್ರ

ಬೆಂಗಳೂರು: ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ‌ಜಾರಿ ತಂದಿದ್ದು, ಅದರ ಪ್ರಕಾರ ರಾಜ್ಯದಲ್ಲಿರುವ 2.46 ಕೋಟಿ ವಾಹನಗಳಲ್ಲಿ 40 ಲಕ್ಷಕ್ಕೂ ಹೆಚ್ಚು ವಾಹನಗಳು ಗುಜರಿ ಸೇರುವುದಕ್ಕೆ ಅರ್ಹವಾಗಿವೆ.

ಹಳೆಯ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕಿಸಿ ಹೊಸ ವಾಹನಗಳ ಖರೀದಿಗೆ ಜನರನ್ನು ಪ್ರೇರೇಪಿಸುವುದು ಇದರ ಉದ್ದೇಶ. 15 ವರ್ಷ ಮೇಲ್ಪಟ್ಟ ಮ್ಯಾಕ್ಸಿಕ್ಯಾಬ್‌, ಕಾರು, ಆಟೋರಿಕ್ಷಾ, ಬಸ್‌ ಮತ್ತು ಲಾರಿಗಳು ಸೇರಿ 9 ಲಕ್ಷಕ್ಕೂ ಹೆಚ್ಚು ವಾಹನಗಳು ರಾಜ್ಯದಲ್ಲಿವೆ. 20 ವರ್ಷ ದಾಟಿದ 31 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ರಾಜ್ಯದಲ್ಲಿವೆ.

ಈ ನೀತಿ ಪ್ರಕಾರ ಈ ವಾಹನಗಳು ಗುಜರಿ ಬಾಗಿಲಲ್ಲಿ ನಿಲ್ಲಲು ಅರ್ಹತೆ ಪಡೆದಿವೆ. ವಾಹನ ಮಾಲೀಕರು ಸ್ವಯಂ ಪ್ರೇರಿತವಾಗಿ ಗುಜರಿಗೆ ಈ ವಾಹನಗಳನ್ನು ಹಾಕಬಹುದು. ಅಥವಾ ಮೂರು ಬಾರಿ ಯೋಗ್ಯತಾ ಪರೀಕ್ಷೆಯಲ್ಲಿ(ಎಫ್‌ಸಿ) ವಿಫಲವಾದರೆ ಸಾರಿಗೆ ಇಲಾಖೆಯೇ ಅವುಗಳನ್ನು ಗುಜರಿಗೆ ತಳ್ಳಲಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಯಶಸ್ವಿಯಾದರೂ ಹಸಿರು ತೆರಿಗೆ ಪಾವತಿಸಬೇಕು.

‘ಒಂದು ವಾಹನ ಎಷ್ಟು ವರ್ಷಗಳ ನಂತರ ಗುಜರಿ ಸೇರಬೇಕು ಎಂಬುದರ ಬಗ್ಗೆ ದೇಶದಲ್ಲಿ ನಿಯಮ ಇರಲಿಲ್ಲ. ಹೊರ ದೇಶಗಳಲ್ಲಿ ಈಗಾಗಲೇ ಇದೆ. ಈ ನಿಯಮ ಬರಲೇಬೇಕಿತ್ತು. ಜಾರಿಗೆ ಬರುವುದರಿಂದ ಮಾಲಿನ್ಯ ಕಡಿಮೆಯಾಗಲಿದೆ’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

‘ಆದರೆ, ಈ ನೀತಿ ಹಳೇ ಕಾರು ಮತ್ತು ಲಾರಿಗಳನ್ನು ಹೊಂದಿದವರನ್ನು ಆತಂಕದಲ್ಲಿ ಮುಳುಗುವಂತೆ ಮಾಡಿದೆ. ಹಳೇ ಕಾರುಗಳನ್ನು ಲಕ್ಷಗಟ್ಟಲೆ ಕೊಟ್ಟು ಖರೀದಿಸಿದ್ದವರು ಈಗ ಬರಿಗೈ ಆಗುವ ಸಾಧ್ಯತೆ ಇದೆ. ಹಳೇ ಕಾರು ಮತ್ತು ದ್ವಿಚಕ್ರ ವಾಹನ ವ್ಯಾಪಾರ ನಡೆಸುವ ಉದ್ಯಮದ ಮೇಲೂ ಇದರ ಪರಿಣಾಮ ಬೀರಲಿದೆ. ದುಬಾರಿ ವೆಚ್ಚ ಭರಿಸಿ ಹೊಸ ಕಾರು ಖರೀದಿಸಲು ಸಾಧ್ಯವಾಗದವರು ಜೀವನದಲ್ಲಿ ಒಂದು ಹಳೇ ಕಾರನ್ನಾದರೂ ಖರೀದಿಸಬೇಕು ಎಂದುಕೊಂಡವರು ಕನಸುಗಳು ಕನಸಾಗಿಯೇ ಉಳಿಯಲಿದೆ’ ಎಂದು ಹಳೇ ಕಾರುಗಳ ವ್ಯಾಪಾರ ನಡೆಸುವ ಮಧು ಹೇಳುತ್ತಾರೆ.

‘ಹಳೇ ವಾಹನಗಳನ್ನು ನಂಬಿಕೊಂಡು ಗ್ಯಾರೇಜ್ ನಡೆಸುತ್ತಿರುವ ಮೆಕ್ಯಾನಿಕ್‌ಗಳ ಜೀವನಕ್ಕೂ ಈ ಹೊಸ ನೀತಿ ಕಲ್ಲು ಹಾಕುವ ಸಾಧ್ಯತೆ ಇದೆ. ಶೋರೂಂಗಳಲ್ಲೇ ರಿಪೇರಿ ಆಗಬೇಕಿರುವ ಬಿಎಸ್‌–6 ವಾಹನಗಳು ರಸ್ತೆಗೆ ಇಳಿದ ಬಳಿಕ ರಸ್ತೆ ಬದಿಯ ಮೆಕ್ಯಾನಿಕ್‌ಗಳು ಚಿಂತೆಗೀಡಾಗಿದ್ದರು. ಕಾರು ಅಥವಾ ಬೈಕ್ ಮೆಕ್ಯಾನಿಕ್‌ಗಳು ರಿಪೇರಿ ಕೆಲಸದ ಜತೆಗೆ ಹಳೇ ವಾಹನಗಳ ವ್ಯಾಪಾರವನ್ನೂ ಸಣ್ಣದಾಗಿ ನಡೆಸುತ್ತಾರೆ. ಈಗ ಹಳೇ ವಾಹನಗಳು ಗುಜರಿಗೆ ಸೇರಿದರೆ ರಿಪೇರಿ ಕೆಲಸವೂ ಇಲ್ಲ, ವಾಹನ ಮಾರಾಟದ ವ್ಯಾಪಾರವೂ ಇಲ್ಲವಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೀದಿಗೆ ಬೀಳುವ ಲಾರಿ ಮಾಲೀಕರು

‘ಗುಜರಿ ನೀತಿ ಜಾರಿಗೆ ಬಂದರೆ ಸಾವಿರಾರು ಲಾರಿ ಮಾಲೀಕರ ಕುಟುಂಬಗಳು ಬೀದಿಗೆ ಬೀಳಲಿವೆ’ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದರು.

‘10–11 ವರ್ಷ ಹಳೆಯದಾದ ಲಾರಿಗಳು ಸ್ಥಳೀಯವಾಗಿಯೇ ಸಂಚರಿಸುತ್ತವೆ. ರೈಲ್ವೆ ಗೂಡ್ಸ್‌, ಎಪಿಎಂಸಿಗಳಿಗೆ ಬಾಡಿಗೆ ಓಡುತ್ತವೆ. 10 ವರ್ಷ ಕಳೆದ ನಂತರ ಲಾರಿಗಳ ದಿನದ ವಹಿವಾಟು ₹3 ಸಾವಿರ ದಾಟುವುದಿಲ್ಲ. ಅಂತಹ ಲಾರಿಗಳ ಮಾಲೀಕರು ಈಗ ಬೀದಿಗೆ ಬೀಳಬೇಕಾಗುತ್ತದೆ. ಆಟೋಮೊಬೈಲ್ ಲಾಭಿಗೆ ಮಣಿದು ಸರ್ಕಾರ ಈ ಹೊಸ ನೀತಿ ಜಾರಿಗೆ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT