ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರ ಎಸ್‌ಟಿ ಹೋರಾಟಕ್ಕೆ ಜಾತ್ಯತೀತ ಬೆಂಬಲ

ಮುಸ್ಲಿಮರ ಮನೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಪೂಜೆ
Last Updated 30 ಜನವರಿ 2021, 17:01 IST
ಅಕ್ಷರ ಗಾತ್ರ

ತುಮಕೂರು: ಪರಿಶಿಷ್ಟ ಪಂಗಡದ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕುರುಬ ಸಮಾಜವು ಹಮ್ಮಿಕೊಂಡಿರುವ ಪಾದಯಾತ್ರೆ ಶನಿವಾರ ರಾತ್ರಿ ತುಮಕೂರು ಪ್ರವೇಶಿಸಿತು.

ಪಾದಯಾತ್ರೆ ನಗರ ಪ್ರವೇಶಿಸುವ ಹಾದಿಯಲ್ಲಿ ಶುಭಕೋರುವ ಭಿತ್ತಿಪತ್ರಗಳನ್ನು ಅಳವಡಿಸಲಾಗಿತ್ತು. ತಳಿರು ತೋರಣಗಳು, ಭಿತ್ತಿಪತ್ರಗಳು, ಬಾಳೆ ಕಂದುಗಳನ್ನು ಕಟ್ಟಿ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆಯನ್ನು ಕುರುಬ ಸಮಾಜದವರು ಸ್ವಾಗತಿಸಿದರು. ಜಯಘೋಷಗಳು ಮೊಳಗಿದವು.

ಶುಕ್ರವಾರ ತುಮಕೂರು ತಾಲ್ಲೂಕಿನ ಸೀಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಶನಿವಾರ ಕೋರ ಪ್ರವೇಶಿಸಿದರು. ಕೋರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಜೀರ್ ಅಹಮ್ಮದ್
ಮನೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಪೂಜೆ ಸಲ್ಲಿಸಿ ಉಪಾಹಾರ ಸ್ವೀಕರಿಸಿದರು. ಅಲ್ಲಿಯೇ ವಿಶ್ರಾಂತಿ ಪಡೆದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಪಾದಯಾತ್ರೆ ಘೋಷಿಸಿದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ಆತಂಕ ನಮ್ಮಲ್ಲಿ ಇತ್ತು. ಆದರೆ, ನಮ್ಮ ನಿರೀಕ್ಷೆ ಮೀರಿ ಜನರು ಸೇರುತ್ತಿದ್ದಾರೆ. ಒಳ್ಳೆಯ ಸ್ವರೂಪ ಪಡೆಯುತ್ತಿದೆ’ ಎಂದು ಪ್ರಶಂಸಿಸಿದರು.

‘ಮಾದಾರ ಗುರುಪೀಠ, ಭೋವಿ ಗುರುಪೀಠ, ಕುಂಚಿಟಿಗ ಗುರುಪೀಠ ಸೇರಿದಂತೆ ವಿವಿಧ ಸಮುದಾಯಗಳ ಮಠಾಧೀಶರು, ಜನಪ್ರತಿನಿಧಿಗಳು ಜಾತ್ಯತೀತವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಿದೆ’ ಎಂದರು.

‘ಕುರುಬ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆ’ ಎಂದು ಹೇಳಿದರು.

ಬೆಂಗಳೂರಿನತ್ತ ಪಾದಯಾತ್ರೆ

ತುಮಕೂರಿನ ಕಾಳಿದಾಸ ವಿದ್ಯಾವರ್ಧಕ ಸಂಘದಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ ಬೆಳಿಗ್ಗೆ ತುಮಕೂರಿನಿಂದ ಹೊರಟು‌ ಮಂಚಕಲ್‌ಕುಪ್ಪೆ ತಲುಪುವರು. ಅಲ್ಲಿ ಬೆಳಿಗ್ಗೆ 10ರಿಂದ 11.30ರ ವರೆಗೆ ಜಾಗೃತಿ ಸಭೆ ನಡೆಯಲಿದೆ. ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‍ಪೇಟೆಯಲ್ಲಿ ಜಾಗೃತಿ ಸಭೆ ನಡೆಯಲಿದ್ದು, ಅಲ್ಲಿಯೇ ವಾಸ್ತವ್ಯ ಹೂಡುವರು.

5 ಕೆ.ಜಿ ತೂಕ ಕಡಿಮೆ

‘ಪಾದಯಾತ್ರೆಯಿಂದ 5 ಕೆ.ಜಿ ತೂಕ ಕಡಿಮೆ ಆಗಿದೆ. ನನ್ನ ಆರೋಗ್ಯದಲ್ಲಿ ಸ್ವಲ್ಪವೂ ಏರುಪೇರು ಆಗಿಲ್ಲ, ಚೆನ್ನಾಗಿದೆ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT