ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌: ಕನ್ನಡದಲ್ಲೇ ಗ್ರಾಹಕ ಸೇವೆಗೆ ಕೂಗು

ಮಾತೃ ಭಾಷೆ ಕಡೆಗಣನೆ, ಹಿಂದಿ ಹೇರಿಕೆಗೆ ಟ್ವಿಟರ್‌ನಲ್ಲಿ ಭಾರಿ ಆಕ್ರೋಶ
Last Updated 24 ಡಿಸೆಂಬರ್ 2020, 19:54 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ನಲ್ಲಿ ಕನ್ನಡವಿಲ್ಲ, ಪಾಸ್‌ಪೋರ್ಟ್‌ನಲ್ಲಿ ಕನ್ನಡವಿಲ್ಲ, ವಿಮಾನಗಳಲ್ಲಿ ಕನ್ನಡವಿಲ್ಲ, ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವ ಪೂರ್ವಭಾವಿ ಪರೀಕ್ಷೆಗಳಲ್ಲಿ ಕನ್ನಡವಿಲ್ಲ! ನಮ್ಮದೇ ನೆಲದಲ್ಲಿ ನಾವು ಎರಡನೇ ದರ್ಜೆಯ ಪ್ರಜೆಗಳೇ?

ದೀಪಕ್‌ ಗೌಡ ಅವರು ಟ್ವೀಟ್‌ ಮೂಲಕ ಕೇಳಿರುವ ಪ್ರಶ್ನೆ ಇದು. ಅವರಂತೆಯೇ ಸಾವಿರಾರು ಕನ್ನಡಿಗರು, ‘ತಮ್ಮ ತಾಯಿ ಭಾಷೆಯಲ್ಲಿ ಗ್ರಾಹಕ ಸೇವೆಗಳು ಸಿಗದ ಕುರಿತು ಗುರುವಾರ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಗ್ರಾಹಕರ ಕೂಟವು ಗುರುವಾರ #ServeInMyLanguage, #NationalConsumerDay ಹ್ಯಾಷ್‌
ಟ್ಯಾಗ್‌ಗಳಲ್ಲಿ ಆಯೋಜಿಸಿದ್ದ ಟ್ವಟರ್‌ ಅಭಿಯಾನ ‘ತಾಯಿ ಭಾಷೆಯಲ್ಲಿ ಸೇವೆ ಸಿಗದ ಬಗ್ಗೆ ಕನ್ನಡಿಗರಲ್ಲಿ ಮನೆ ಮಾಡಿರುವ ಅಸಮಧಾನವನ್ನು ಹೊರಹಾಕಲು ವೇದಿಕೆ ಕಲ್ಪಿಸಿತು.

ಗ್ರಾಹಕರಿಗೆ ಸಂಬಂಧಿಸಿದ ಎಲ್ಲ ಸೇವೆಗಳು ಹಾಗೂ ಮಾಹಿತಿಗಳೂ ಕನ್ನಡದಲ್ಲೂ ಲಭ್ಯವಾಗಬೇಕು ಎಂದು ಒತ್ತಾಯಿಸಿ ನಡೆದ ಈ ಅಭಿಯಾನವನ್ನು ಬೆಂಬಲಿಸಿ ಆರು ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿದವು.

ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಸುರಕ್ಷತೆಯ ಮಾಹಿತಿ ಕನ್ನಡದಲ್ಲಿ ಇಲ್ಲದ ಬಗ್ಗೆ ಟೀಕಿಸಿರುವ ಕಿರಣ್‌, ಈ ಕುರಿತು ಚಿತ್ರವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕನ್ನಡ, ತಮಿಳು, ಮಲಯಾಳಿ, ತೆಲುಗು, ಪಂಜಾಬಿ, ಬಂಗಾಳಿ ಭಾಷಿಕರ ಜೀವಕ್ಕೆ ಬೆಲೆ ಕಡಿಮೆ ಎಂದು ಕೇಂದ್ರ ಸರ್ಕಾರ ಭಾವಿಸುತ್ತದೆಯೇ. ಅದೇಕೆ ಎಲ್ಲ ಭಾಷೆಗಳನ್ನು ಸಮನಾಗಿ ಕಾಣುತ್ತಿಲ್ಲ’ ಎಂದು ಧ್ವನಿ ಎತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಯ ‘ಸ್ಮಾರ್ಟ್‌ ಬನೋ ಆಜ್‌ ಹಿ ಫೈಲ್‌ ಕರೋ’ ಜಾಹೀರಾತಿನ ಚಿತ್ರವನ್ನು ಹಂಚಿಕೊಂಡಿರುವ ನಿರಂಜನ್‌ ಚಂದ್ರಯ್ಯ, ‘ಹಿಂದಿ ಬಾರದವರಿಗೆ ಇಂಗ್ಲಿಷ್‌ನಲ್ಲಿ ಬರೆದಿರುವ ಹಿಂದಿ ಸ್ಲೋಗನ್‌ ಕಳುಹಿಸುವುದನ್ನು ನಿಲ್ಲಿಸುವ ಮೂಲಕ ನೀವು ಮೊದಲು ಸ್ಮಾರ್ಟ್‌ ಆಗಿ. ಜನರು ಬಳಸುವ ಭಾಷೆಯಲ್ಲಿ ಸಂವಹನ ನಡೆಸಿ ಹೆಚ್ಚು ತೆರಿಗೆ ಸಂಗ್ರಹಿಸಿ’ ಎಂದು ಕಿವಿಮಾತು ಹೇಳಿದ್ದಾರೆ.

ಔಷಧಗಳ ಮೇಲಿನ ಮಾಹಿತಿಗಳು ಕನ್ನಡದಲ್ಲಿ ಇಲ್ಲದಿರುವುದು ಅನನುಕೂಲವಲ್ಲವೇ ಎಂದು ಅಜಯ್‌ ಕುಮಾರ್‌ ಪ್ರಶ್ನಿಸಿದ್ದಾರೆ.

‘ಸಂವಿಧಾನದಲ್ಲಿ 344ರಿಂದ 351ನೇ ವಿಧಿಗಳಿಗೆ ತಿದ್ದುಪಡಿ ತಂದು ದೇಶದ ಎಲ್ಲ ಭಾಷೆಗಳೂ ಸಮಾನ ಎಂದು ಸಾರಿ ಹೇಳಬೇಕು. ಭಾಷಾ ತಾರತಮ್ಯ ನಿಲ್ಲಿಸಬೇಕು’ ಎಂದು ಕಿರಣ್‌ ಹಾಗೂ ‘ಉತ್ಪನ್ನಗಳ ಹೆಸರುಗಳು, ಬಳಕೆದಾರರ ಕೈಪಿಡಿ ಸೇರಿದಂತೆ ಎಲ್ಲ ವಿಷಯಗಳು ಗ್ರಾಹಕನ ನುಡಿಯಲ್ಲಿ ದೊರೆಯಬೇಕು. ಅದಕ್ಕೆ ಅಗತ್ಯವಾದ ಗ್ರಾಹಕ ಕಾಯ್ದೆ– ಕಾನೂನುಗಳ ತಿದ್ದುಪಡಿಯಾಗಬೇಕು’ ಎಂದು ಶ್ರುತಿ ಎಚ್‌.ಎಂ. ಅವರು ಒತ್ತಾಯಿಸಿದ್ದಾರೆ.

‘ಕರ್ನಾಟಕದಲ್ಲಿ ಹಲವಾರು ಕಡೆ ಸೇವೆಗಳು ಈಗಲೂ ಕನ್ನಡದಲ್ಲಿ ಸಿಗುತ್ತಿಲ್ಲ. ಕನ್ನಡಿಗರ ಹಕ್ಕುಗಳನ್ನು ಕಾಪಾಡುವ ಹೊಣೆ ಹೊತ್ತ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದ್ದೆಯೇ’ ಎಂದು ಪ್ರಶಾಂತ ಎಸ್‌. ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕನ್ನಡದಲ್ಲಿ ಸೇವೆ ಬೇಕು ಎನ್ನುವುದು ಬೇರೆ ಭಾಷೆ ನನಗೆ ಬರುವುದಿಲ್ಲ ಎಂದಲ್ಲ. ಕನ್ನಡ ನಾಡಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಕನ್ನಡ ಬಿಟ್ಟು ಬೇರೊಂದು ನುಡಿ ಬರಲ್ಲ. ಅವರಿಗೆ ನಾವು ದನಿಯಾಗಬೇಕಿದೆ’ ಎಂದು ಗಿರೀಶ್‌ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ದೇಶದ ಎಲ್ಲ ಭಾಷೆಗಳ ಗ್ರಾಹಕರಿಗೂ ಸಮಾನ ಸೇವೆ ಸಿಗಬೇಕು ಎಂಬ ಆಶಯದಿಂದ ಪ್ರತಿವರ್ಷ ರಾಷ್ಟ್ರೀಯ ಗ್ರಾಹಕರ ದಿನದಂದು ‘ನಮ್ಮ ಭಾಷೆಯಲ್ಲೇ ಸೇವೆ ಒದಗಿಸಿ’ ಎಂಬ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ. ಈ ಬಾರಿ ನಿರೀಕ್ಷೆಗೂ ಮೀರಿ ಅಭಿಯಾನ ಯಶಸ್ವಿಯಾಗಿದೆ. 30 ಲಕ್ಷಕ್ಕೂ ಅಧಿಕ ಮಂದಿಯನ್ನೂ ನಾವು ಈ ಬಾರಿ ತಲುಪಿದ್ದೇವೆ’ ಎಂದು ಕನ್ನಡ ಗ್ರಾಹಕರ ಕೂಟದ ಬಾಬು
ಅಜಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಮನ ಸೆಳೆದ ಟ್ವೀಟ್‌ಗಳು

ಪ್ಯಾಕೇಟುಗಳ ಮೇಲಿನ ಮಾಹಿತಿ ಯಾವುದೋ ಭಾಷೆಯಲ್ಲಿದ್ದರೆ, ಪಾಷಾಣ ಯಾವುದು ಮ್ಯಾಗಿ ಪುಡಿ ಯಾವುದು ಎಂದು ತಿಳಿಯುವುದಾದರೂ ಹೇಗೆ?‌
–ಗಿರೀಶ್‌ ಕಾರ್ಗದ್ದೆ

*

ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಅಗ್ರ 30 ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಮಾತನಾಡುವವರಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಭಾಷಿಕ ಸಮುದಾಯಗಳೂ ಎಲ್ಲ ಸೇವೆಗಳನ್ನು ಅವರ ಭಾಷೆಯಲ್ಲೇ ಪಡೆಯುತ್ತಿವೆ. ಇದು ತೀರಾ ಅನ್ಯಾಯ.
–ಸಂತೋಷ್‌ ಕುಮಾರ್‌

*

1,600 ವರ್ಷಗಳ ಹಿಂದೆ ಕನ್ನಡವೇ ಆಡಳಿತದ ಹಾಗೂ ಶಾಸನದ ಭಾಷೆಯಾಗಿತ್ತು. ನಾಣ್ಯಗಳನ್ನೂ ಕನ್ನಡದಲ್ಲೇ ಠಂಕಿಸಲಾಗುತ್ತಿತ್ತು. ನಮ್ಮತನವನ್ನು ನಾವೀಗ ಕಳೆದುಕೊಂಡಿದ್ದೇವೆ. ಯಾವುದೇ ನೋಟು ಕೂಡಾ ಕನ್ನಡದಲ್ಲಿ ಮುದ್ರಣಗೊಳ್ಳುತ್ತಿಲ್ಲ. ಕೇಂದ್ರದ ಯಾವುದೇ ಶಾಸನವೂ ಕನ್ನಡದಲ್ಲಿಲ್ಲ.
–ಸಂದೀಪ್‌ ಕಂಬಿ

*

ಕರ್ಣಾಟಕ ಬ್ಯಾಂಕ್‌ನವರೇ ನಿಮ್ಮ ಚೆಕ್‌ ಪುಸ್ತಕಗಳಲ್ಲಿ ಹಾಗೂ ಪಾಸ್‌ ಪುಸ್ತಕಗಳಲ್ಲಿ ಏಕೆ ಕನ್ನಡವಿಲ್ಲ. ನಾನು ನಿಮ್ಮ ಬ್ಯಾಂಕಿನ ಬೆಂಗಳೂರು ದಕ್ಷಿಣ ಶಾಖೆಯಲ್ಲಿ ಖಾತೆ ಹೊಂದಿದ್ದೇನೆ.
–ನೊಬಿತಾ

*

ಔಷಧಗಳು, ಅಡುಗೆ ಅನಿಲ ಸಿಲಿಂಡರ್‌, ನೀತಿಗಳು, ವಿಮೆ ಯೋಜನೆಗಳು, ನೇಮಕಾತಿ ಪರೀಕ್ಷೆಗಳು ಹಾಗೂ ಆದಾಯ ತೆರಿಗೆಗೆ ಸಂಬಂಧಿಸಿದ ಮಾಹಿತಿಗಳು ಪೆಟ್ರೋಲ್‌ ಬಂಕ್‌, ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ರೈಲ್ವೆಯಲ್ಲಿನ ಮಾಹಿತಿಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಏಕಿವೆ?
–ಕಿರಣ್ ಎಂ.ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT