ಗುರುವಾರ , ಫೆಬ್ರವರಿ 25, 2021
29 °C
ಲೇಖಕಿ ಬಿ.ಟಿ.ಲಲಿತಾ ನಾಯಕ್ ಆರೋಪ

ದಲಿತರ ಮೀಸಲಾತಿ ಕಸಿಯಲು ಈಶ್ವರಪ್ಪ ಯತ್ನ: ಬಿ.ಟಿ.ಲಲಿತಾ ನಾಯಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆರ್‌ಎಸ್‌ಎಸ್‌ನ ಆಲೋಚನೆಯುಳ್ಳ ಸಚಿವ ಈಶ್ವರಪ್ಪ ಅವರು ದಾರಿ ತಪ್ಪಿದ್ದಾರೆ. ಕುರುಬರ ಎಸ್‍ಟಿ ಮೀಸಲಾತಿಗಾಗಿ ಹೋರಾಡುತ್ತಾ ದಲಿತರ ಮೀಸಲಾತಿ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್ ಆರೋಪಿಸಿದರು.

ಮೀಸಲಾತಿ ಕಾವಲು ಸಮಿತಿಯು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪಟ್ಟಿಗೆ ಅನ್ಯ ಜಾತಿಗಳ ಸೇರ್ಪಡೆ’ ಕುರಿತು ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಈಶ್ವರಪ್ಪ ಅವರು ಇಡೀ ಕುರುಬ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ವೀರಶೈವರ ಜಂಗಮರಿಗೂ ‘ಬೇಡ ಜಂಗಮ’ ಪ್ರಮಾಣಪತ್ರ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಹೋದ ನಿಯೋಗದ ನೇತೃತ್ವವನ್ನು ನಿಡುಮಾಮಿಡಿ ಮಠದ ಚೆನ್ನಮಲ್ಲ ವೀರಭದ್ರ ಸ್ವಾಮೀಜಿ ವಹಿಸಿದ್ದಾರೆ. ಇದು ಬೇಸರದ ಸಂಗತಿ. ಸರ್ಕಾರ ಇಂತಹ ವಿಚಾರಗಳನ್ನು ಪರಿಗಣಿಸಬಾರದು’ ಎಂದು ಹೇಳಿದರು.

‘ಬ್ರಾಹ್ಮಣರಲ್ಲಿರುವ ಮಲೆ, ಮಾಲೆಯ ಸಮುದಾಯದವರ ಮಕ್ಕಳು ದಲಿತರಿಗಿಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಮೀಸಲಾತಿ ಇಂತಹವರಿಗೆ ಸಿಗಬೇಕು. ಆದರೆ, ಸಮಾಜದ ಉನ್ನತ ಸ್ಥಾನದಲ್ಲಿರುವ ಬ್ರಾಹ್ಮಣರು ಮೀಸಲಾತಿ ಬೇಡುತ್ತಿರುವುದು ವಿಪರ್ಯಾಸ. ಮನುಷ್ಯತ್ವದ ಪರಿಕಲ್ಪನೆ ಜಾಗೃತ ಆಗುವವರೆಗೂ ಮೀಸಲಾತಿ ಹೋಗುವುದಿಲ್ಲ. ಮೀಸಲಾತಿ ಬೇಡುವವರು ಜಾತಿ ಬಿಡಲಿ’ ಎಂದರು.

ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ, ‘ಜಾತಿಯ ಆಲೋಚನಾ ಕ್ರಮದಿಂದ ಮನಸ್ಸುಗಳು ಕಲುಷಿತಗೊಂಡಿವೆ. ಈಗ ಮೀಸಲಾತಿ ಕೇಳುವ ಮೂಲಕ ಶೋಷಿತ ಸಮುದಾಯದ ಹಕ್ಕುಗಳನ್ನು ಲೂಟಿ ಮಾಡುವ ಹುನ್ನಾರ ನಡೆಸಿದ್ದಾರೆ’ ಎಂದು ಕಿಡಿ ಕಾರಿದರು.

‘ಜಾತಿಯ ಹೆಸರಿನಲ್ಲಿ ಶೋಷಿತರ ಹಕ್ಕು ಕದಿಯುವ ಕೆಟ್ಟತನವನ್ನು ಬಿಡಬೇಕು. ದಲಿತರ ಮೇಲಿನ ಶೋಷಣೆ ಎಂದಿಗೂ ಸಹಿಸುವುದಿಲ್ಲ. ನಿಡುಮಾಮಿಡಿ ಸ್ವಾಮೀಜಿ ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ‘ಬೇಡ ಜಂಗಮ ಪ್ರಮಾಣಪತ್ರಕ್ಕೆ ಆಗ್ರಹಿಸಿರುವ ನಿಡುಮಾಮಿಡಿ ಸ್ವಾಮೀಜಿಯ ನಡೆ ಆಘಾತಕಾರಿ. ಇದು, ಬಸವಣ್ಣನವರಿಗೆ ಮಾಡಿರುವ ಅಪಚಾರ. ಈ ಬಗ್ಗೆ ಸ್ವಾಮೀಜಿ ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಕುರುಬರು, ಪಂಚಮಸಾಲಿ ಸಮುದಾಯಗಳು ದಲಿತರ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಅವರ ಹೋರಾಟಕ್ಕೆ ಅರ್ಥವೇ ಇಲ್ಲ. ಮೀಸಲಾತಿ ನೀಡಿ ಸಾಮಾಜಿಕ ಸಂಘರ್ಷಕ್ಕೆ ಸರ್ಕಾರ ಅವಕಾಶ ನೀಡಬಾರದು. ಈ ಬಗ್ಗೆ ಚಿಂತನೆ ನಡೆಸಬೇಕು’ ಎಂದೂ ಎಚ್ಚರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು