ಮಂಗಳವಾರ, ಅಕ್ಟೋಬರ್ 27, 2020
22 °C
ಕಾಂಗ್ರೆಸ್, ಬಿಜೆಪಿ ರಣೋತ್ಸಾಹ

ಶಿರಾ ಉಪಚುನಾವಣೆ: ಖಾಲಿಯಾಗುತ್ತಿದೆ ಜೆಡಿಎಸ್ ಮನೆ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

JDS

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ರಂಗೇರುತ್ತಿದ್ದು ಕ್ಷೇತ್ರದಲ್ಲಿ ಜೆಡಿಎಸ್ ತೊರೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆ ಪಕ್ಷದಲ್ಲಿ ಒಂದು ರೀತಿಯ ಗೊಂದಲ ಮೂಡಿದ್ದರೆ ಕಾಂಗ್ರೆಸ್, ಬಿಜೆಪಿ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿವೆ.

ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ನಿಧನದ ನಂತರ ಜೆಡಿಎಸ್‌ನಲ್ಲಿ ಸಾಕಷ್ಟು ಗೊಂದಲ ಕಾಡಿದವು. ಅವರ ಪುತ್ರ ಸತ್ಯಪ್ರಕಾಶ್ ಸಹ ಟಿಕೆಟ್ ಬಯಸಿದ್ದರು. ಅವರ ತಾಯಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ಸಿಗುವುದು ಖಾತ್ರಿಯಾದ ನಂತರ ಸುಮ್ಮನಾದರು. ಆರಂಭದಲ್ಲಿ ತಮಗೆ ಟಿಕೆಟ್ ಬೇಡ ಎಂದು ಹೇಳಿದ್ದ ಅಮ್ಮಾಜಮ್ಮ ಅವರ ಮನವೊಲಿಸಿರುವ ಜೆಡಿಎಸ್ ಮುಖಂಡರು ಅವರಿಗೆ ಟಿಕೆಟ್ ನೀಡಿದ್ದಾರೆ.

ವರಿಷ್ಠರ ವಿರುದ್ಧ ಅಸಮಾಧಾನ: ಜೆಡಿಎಸ್‌ನಿಂದ ಟಿಕೆಟ್ ಬಯಸಿದ್ದವರಲ್ಲಿ ಒಬ್ಬೊಬ್ಬರೇ ಪಕ್ಷ ತೊರೆಯುತ್ತಿರುವುದು ಆ ಪಕ್ಷದ ನಾಯಕರ ಆತಂಕವನ್ನು ಹೆಚ್ಚಿಸಿದೆ. ‘ತಮ್ಮ ಪತ್ನಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ವಿರುದ್ಧ ಜೆಡಿಎಸ್ ಸದಸ್ಯರೇ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದರೂ ಪಕ್ಷದ ವರಿಷ್ಠರು ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ರವಿಕುಮಾರ್ ಅಸಮಾಧಾನಗೊಂಡಿದ್ದರು. ಕೊನೆಗೆ ಉಪಚುನಾವಣೆಗೂ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ತಮ್ಮ ಪತ್ನಿಯ ಅಧಿಕಾರ ಉಳಿಸಲು ಕಾಂಗ್ರೆಸ್‌ ಜತೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಮತ್ತೊಬ್ಬ ಸದಸ್ಯೆ ಗಿರಿಜಮ್ಮ ಪತಿ ಶ್ರೀರಂಗಯಾದವ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹನುಮಂತರಾಯಪ್ಪ, ತಿಮ್ಮಣ್ಣ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಆ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಬಂದು ಕಾರ್ಯಕರ್ತರ ಸಭೆ ಮಾಡಿರುವುದು ಬಿಟ್ಟರೆ ಜೆಡಿಎಸ್‌ನ ಇತರ ನಾಯಕರು ಎಲ್ಲೂ ಪ್ರಚಾರಕ್ಕೆ ಇಳಿದಿಲ್ಲ. ಚುನಾವಣೆ ಸಮೀಪಿಸುತ್ತಿದ್ದರೂ ಪಕ್ಷದಲ್ಲಿ ಉತ್ಸಾಹ, ಚಟುವಟಿಕೆಗಳು ಕಂಡುಬರುತ್ತಿಲ್ಲ. ಆಂತರಿಕ ಭಿನ್ನಮತ ನಿವಾರಿಸುವುದು ಹಾಗೂ ಪ್ರಮುಖರು ಪಕ್ಷ ತೊರೆಯದಂತೆ ನೋಡಿಕೊಳ್ಳುವುದು ಜೆಡಿಎಸ್ ನಾಯಕರಿಗೆ ಸವಾಲಾಗಿದೆ. ಜತೆಗೆ ತಾಲ್ಲೂಕಿನಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬ ಸವಾಲು ಎದುರಾಗಿದೆ.

ಕಾಂಗ್ರೆಸ್‌ನತ್ತ ವಲಸೆ: ಕಾಂಗ್ರೆಸ್‌ ನಿಯೋಜಿತ ಅಭ್ಯರ್ಥಿ ಟಿ.ಬಿ.ಜಯಚಂದ್ರ ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಜೆಡಿಎಸ್ ಪ್ರಮುಖ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ಸು ಕಂಡಿದ್ದಾರೆ. ನಾಯಕರು ಹಾಗೂ ಕಾರ್ಯಕರ್ತರ ಪಡೆಯ ಬಲವನ್ನು ಹೆಚ್ಚಿಸಿಕೊಂಡು ಪ್ರಚಾರ ಬಿರುಸು ಪಡೆದುಕೊಳ್ಳುವಂತೆ ಮಾಡಿದ್ದಾರೆ.

ಹೆಚ್ಚಿದ ಬಿಜೆಪಿ ಬಲ: ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸಹ ಈಗಾಗಲೇ ತನ್ನ ಬಲ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದೆ. ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ಪಕ್ಷಕ್ಕೆ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಸಂಘಟನೆ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಬೂತ್ ಮಟ್ಟದಲ್ಲಿ ಇರುವ ಕಾರ್ಯಕರ್ತರನ್ನೇ ಒಗ್ಗೂಡಿಸಿ, ಸಂಘಟಿಸುವುದು ಹಾಗೂ ಹೊಸದಾಗಿ ಕಾರ್ಯಕರ್ತರನ್ನು ಸೇರ್ಪಡೆಮಾಡಿಕೊಂಡು ಪಕ್ಷಕ್ಕೆ ಚೈತನ್ಯ ತುಂಬುವ ಕೆಲಸವನ್ನು ಮುಖಂಡರು ಮಾಡಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಮೇಲೆತ್ತುವ ಕೆಲಸ ನಡೆದಿದೆ. ಹಾಗಾಗಿಯೇ ಕೇಸರಿ ಬಾವುಟ ಹಾರಿಸುವ ಉತ್ಸಾಹದಿಂದ ಬಿಜೆಪಿ ನಾಯಕರು ಹೆಜ್ಜೆ ಹಾಕಿದ್ದಾರೆ.

ಅಮ್ಮಾಜಮ್ಮಗೆ ಕೋವಿಡ್‌ ದೃಢ


ಅಮ್ಮಾಜಮ್ಮ

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿ ಅವರ ಹೆಸರನ್ನು ಪಕ್ಷದ ವರಿ‌ಷ್ಠರು ಮಂಗಳವಾರ ಪ್ರಕಟಿಸಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆಗೆ ಒಳಗಾದಾಗ ಅಮ್ಮಾಜಮ್ಮ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರು ಇನ್ನೂ ನಾಲ್ಕೈದು ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು