ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ವ್ಯಕ್ತಿಯ ಶವ ಹಸ್ತಾಂತರ: ಡಿಕೆಶಿ ಮನವಿಗೆ ಸ್ಪಂದಿಸಿದ ತೆಲಂಗಾಣ ಸರ್ಕಾರ

Last Updated 30 ಮೇ 2021, 21:04 IST
ಅಕ್ಷರ ಗಾತ್ರ

ಬೆಂಗಳೂರು: ಹೈದರಾಬಾದಿನ ಆಸ್ಪತ್ರೆಯಲ್ಲಿ ಬಿಲ್ ಕಟ್ಟಲಾಗದೆ ಪರದಾಡುತ್ತಿದ್ದ ಮಂಡ್ಯ ಮೂಲದ ಕುಟುಂಬವೊಂದರ ನೆರವಿಗೆ ಧಾವಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ್ದ ಮನವಿಗೆ ತೆಲಂಗಾಣ ಸರ್ಕಾರ ತಕ್ಷಣ ಸ್ಪಂದಿಸಿದೆ. ಹೀಗಾಗಿ, ಮಂಡ್ಯದ ವ್ಯಕ್ತಿಯೊಬ್ಬರ ಶವವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಹೈದರಾಬಾದ್‌ನ ಮೆಡಿಕೊವರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಡ್ಯದ ಮಂಜುನಾಥ್ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅವರ ಚಿಕಿತ್ಸೆ ವೆಚ್ಚ ₹ 7.50 ಲಕ್ಷ ಆಗಿತ್ತು. ಮಂಜುನಾಥ್ ಅವರ ಪತ್ನಿ ಶಶಿಕಲಾ ಅವರಿಗೆ ₹ 2 ಲಕ್ಷ ಮಾತ್ರ ಕಟ್ಟಲು ಸಾಧ್ಯವಾಗಿತ್ತು. ಉಳಿದ ಹಣ ಕಟ್ಟದೆ ಶವ ನೀಡುವುದಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪಟ್ಟು ಹಿಡಿದಿತ್ತು. ಹೀಗಾಗಿ ಶಶಿಕಲಾ ಅವರು ದಿಕ್ಕು ತೋಚದಂತಾಗಿದ್ದರು.

ಈ ವಿಷಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಬಂದಿತ್ತು.

ಭಾನುವಾರ ಸಂಜೆ ತೆಲಂಗಾಣ ಮುಖ್ಯಮಂತ್ರಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಶಿವಕುಮಾರ್, ‘ಶಶಿಕಲಾ ಮಂಜುನಾಥ್ ಅವರ ಕುಟುಂಬ ಸಂಕಷ್ಟದಲ್ಲಿದೆ. ಮೆಡಿಕವರ್ ಆಸ್ಪತ್ರೆ ಆಡಳಿತ ಮಂಡಳಿ ಮಂಜುನಾಥ್ ಅವರ ಶವ ನೀಡುತ್ತಿಲ್ಲ. ಶಶಿಕಲಾ ಅವರಿಗೆ ನೆರವು ನೀಡಬೇಕು’ ಎಂದು ಮನವಿ ಮಾಡಿದ್ದರು.

ಅರ್ಧ ಗಂಟೆಯಲ್ಲಿ ಸ್ಪಂದಿಸಿದ ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ‘ಶಿವಕುಮಾರ್ ಅವರೇ, ನಾವು ಆ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ. ಅವರನ್ನು ಸಂಪರ್ಕಿಸಲು ವಿವರ ನೀಡಿ. ಅಧಿಕಾರಿಗಳು ಆಸ್ಪತ್ರೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವರು’ ಎಂದಿದ್ದರು.

ಅದರಂತೆ, ಶಶಿಕಲಾ ಅವರ ದೂರವಾಣಿ ಸಂಖ್ಯೆ ನೀಡಲಾಗಿದ್ದು, ತೆಲಂಗಾಣ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದರಿಂದ ಮಂಜುನಾಥ್ ಅವರ ಶವವನ್ನು ಕುಟುಂಬ ಸದಸ್ಯರಿಗೆ ಆಸ್ಪತ್ರೆ ಆಡಳಿತ ಮಂಡಳಿ ಹಸ್ತಾಂತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT