ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ರಕ್ಷಕರ ಬಡ್ತಿ ರದ್ದು

ಕರ್ನಾಟಕ ಸೇವಾ ನಿಯಮಾವಳಿ ಉಲ್ಲಂಘಿಸಿ ನೀಡಿದ್ದ ಬಡ್ತಿ
Last Updated 30 ಜನವರಿ 2022, 3:21 IST
ಅಕ್ಷರ ಗಾತ್ರ

ಬೆಂಗಳೂರು: 63 ಅರಣ್ಯ ರಕ್ಷಕರನ್ನು ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ ಹುದ್ದೆಗಳಿಗೆ ಬಡ್ತಿ ನೀಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿದ್ದ ಆದೇಶವನ್ನು ಅರಣ್ಯ ಇಲಾಖೆ ರದ್ದುಪಡಿಸಿದೆ.

‘ಹೆಚ್ಚುವರಿಯಾಗಿ ಪ್ರಭಾರ ಕಾರ್ಯಭಾರ ನಿರ್ವಹಿಸುತ್ತಿದ್ದ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶ್‌ಕುಮಾರ್ಅವರು ಮೇಲಾಧಿಕಾರಿಗಳ ಅನುಮತಿ ಇಲ್ಲದೆ, ಅಂತಿಮ ಜೇಷ್ಠತಾ ಪಟ್ಟಿಯನ್ನೂ ಪ್ರಕಟಿಸಿದೆ ಬಡ್ತಿ ನೀಡಿದ್ದಾರೆ. ಪೂರ್ವಾನುಮತಿ ಪಡೆಯದೆ ಬಡ್ತಿ ನೀಡುವ ಅಧಿಕಾರ ಪ್ರಭಾರ ಹುದ್ದೆ ನಿರ್ವಹಿಸುವ ಅಧಿಕಾರಿಗೆ ಇಲ್ಲದಿದ್ದರೂ ಅಧಿಕಾರ ದುರುಪಯೋಗ ಮಾಡಿಕೊಂಡು ಬಡ್ತಿ ನೀಡಿದ್ದರು’ ಎಂದು ಬಡ್ತಿ ರದ್ದುಪಡಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ಸೇವಾ ನಿಯಮಾವಳಿ ಪ್ರಕಾರ, ಪ್ರಭಾರ ಕಾರ್ಯಭಾರ ನಿರ್ವಹಣೆ ಸಂದರ್ಭದಲ್ಲಿ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಚಲಾಯಿಸಬಹುದು. ಆದರೆ, ಒಂದು ಹುದ್ದೆಯ ಕ್ರಮ ಬದ್ಧ ಹುದ್ದೆದಾರರು ಹೊರಡಿಸಿದ ಆದೇಶಗಳನ್ನು ಪ್ರಭಾರ ಹುದ್ದೆಯಲ್ಲಿದ್ದವರುತುರ್ತು ಪರಿಸ್ಥಿತಿ ಇಲ್ಲದೆ ಮತ್ತು ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಮಾರ್ಪಡಿಸಲು ಅವಕಾಶ ಇಲ್ಲ.

‘ಆದರೆ, ಯತೀಶ್‌ಕುಮಾರ್ ಅವರು, ಈಗಾಗಲೇ ಅಂತಿಮಗೊಂಡಿದ್ದ ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರರ ಜೇಷ್ಠತಾ ಪಟ್ಟಿಯನ್ನು ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಪರಿಷ್ಕರಿಸಿದ್ದಾರೆ. ಜೇಷ್ಠತಾ ಪಟ್ಟಿ ಪರಿಷ್ಕರಿಸಲು ನ್ಯಾಯಾಲಯ, ಸರ್ಕಾರ ಅಥವಾ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಆದೇಶ ಪಡೆದಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡು ಬಡ್ತಿ ನೀಡಲಾಗಿದ್ದು, ರದ್ದುಪಡಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದಲೂ ಬಂದಿವೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

‘ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ರಜೆಯಲ್ಲಿದ್ದ ಸಂದರ್ಭದಲ್ಲಿ ಯತೀಶ್‌ಕುಮಾರ್ ಅವರಿಗೆ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಬಡ್ತಿ ನೀಡಿರುವುದು ಕ್ರಮಬದ್ಧವಲ್ಲ. ಆದ್ದರಿಂದ 63 ಅರಣ್ಯ ರಕ್ಷಕರ ಬಡ್ತಿಯನ್ನು ರದ್ದುಪಡಿಸಲಾಗಿದೆ’ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT