ಸೋಮವಾರ, ಅಕ್ಟೋಬರ್ 18, 2021
25 °C
ವಾಣಿಜ್ಯ ಉತ್ಸವದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ

ಕೃಷಿ ಉತ್ಪನ್ನ ರಫ್ತಿಗೆ ಪ್ರತ್ಯೇಕ ಕೋಶ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಕೈಗಾರಿಕೆ ಇಲಾಖೆಯಿಂದ ಪ್ರತ್ಯೇಕ ಕೋಶ ತೆರೆಯುವ ಅಗತ್ಯವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

75ನೇ ಸ್ವಾತಂತ್ರ್ಯೋತ್ಸವದ ನೆನಪಿನ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ವಾಣಿಜ್ಯ ಉತ್ಸವದಲ್ಲಿ ಅವರು ಮಾತನಾಡಿದರು.

‘ಐ.ಟಿ, ಬಿ.ಟಿ ವಲಯದ ಬಗ್ಗೆ ಕೈಗಾರಿಕಾ ಇಲಾಖೆ ಹೆಚ್ಚು ಗಮನ ಹರಿಸುತ್ತಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತಿಗೂ ಆದ್ಯತೆ ನೀಡಬೇಕು. ಆಹಾರ ಸಂಸ್ಕರಣೆ ಮಾಡುವ ಮೂಲಕ ಮೌಲ್ಯವರ್ಧನೆ ಮಾಡಿದರೆ ದೇಶ ಮತ್ತು ಹೊರ ದೇಶಗಳ ಮಾರುಕಟ್ಟೆಗಳಲ್ಲಿ ರಾಜ್ಯದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಬರಲಿದೆ’ ಎಂದರು.

ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ 135 ಕೋಟಿ ಜನರಿಗೆ ಸಾಕಾಗುವಷ್ಟು ಮಾತ್ರವಲ್ಲ ರಫ್ತು ಮಾಡಲು ಸಾಧ್ಯವಾಗುವಷ್ಟು ಆಹಾರ ಉತ್ಪಾದನೆಯಾಗುತ್ತಿದೆ. ಆಹಾರ ಉತ್ಪಾದಿಸದ ದೇಶಗಳಿಗೆ ರಫ್ತು ಮಾಡಲು ಹೆಚ್ಚು ಅವಕಾಶ ಇದೆ. ಅದಕ್ಕೆ ಬೇಕಿರುವ ತಯಾರಿಗಳನ್ನು ರೈತರು ಸಂಘಟಿತರಾಗಿ ಮಾಡಿಕೊಳ್ಳಬೇಕು. ಕೃಷಿ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಲಿದೆ ಎಂದು ಹೇಳಿದರು.

‘ಭಾರತದ ಮನವಿ ಮೇರೆಗೆ 2023ನ್ನು ಅಂತರ ರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಸಿರಿಧಾನ್ಯಗಳ ನಾಡು ಎಂದು ಕರೆಸಿಕೊಳ್ಳುವ ಕರ್ನಾಟಕದಲ್ಲಿ ಸಿರಿಧಾನ್ಯಗಳ ರಫ್ತು ಪ್ರಮಾಣ ಹೆಚ್ಚಾಗಬೇಕಿದೆ’ ಎಂದರು.

‘ಜಾಗತಿಕವಾಗಿ ಉತ್ತಮ ವ್ಯಾಪಾರ ಸಂಬಂಧ ಕಾಯ್ದುಕೊಂಡಿರುವ ಕರ್ನಾಟಕವು ಕಾಫಿ, ಸಾಂಬಾರು ಪದಾರ್ಥಗಳು, ರೇಷ್ಮೆ, ಗೋಡಂಬಿ, ಕರಕುಶಲ ವಸ್ತುಗಳಿಗೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಂಜಿನಿಯರಿಂಗ್ ಸರಕುಗಳು, ಸಿದ್ಧ ಉಡುಪುಗಳು, ಚರ್ಮದ ಸರಕು, ರಾಸಾಯನಿಕಗಳು, ಖನಿಜ ಮತ್ತು ಅದಿರುಗಳ ರಫ್ತಿನಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರ ಜತೆಗೆ, ಕೃಷಿ ಉತ್ಪನ್ನಗಳ ರಫ್ತಿಗೆ ಉದ್ಯಮಿಗಳು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್, ‘ರಫ್ತು ಹೆಚ್ಚಳಕ್ಕೆ ಇರುವ ಅವಕಾಶ ಮತ್ತು ಸವಾಲುಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಈ ಉತ್ಸವ ಆಯೋಜಿಸಲಾಗಿದೆ. ಅಧಿಕಾರಿಗಳಷ್ಟೇ ಅಲ್ಲದೆ ಉದ್ಯಮಿಗಳೇ ಅಧಿವೇಶನಗಳನ್ನು ಮುನ್ನಡೆಸಲಿದ್ದಾರೆ. ಎರಡು ದಿನದ ಈ ಉತ್ಸವದಲ್ಲಿ ಬುಧವಾರ ಕೃಷಿ ಉತ್ಪನ್ನಗಳ ರಫ್ತಿನ ಕುರಿತು ಹೆಚ್ಚಿನ ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.