ಭಾನುವಾರ, ಸೆಪ್ಟೆಂಬರ್ 19, 2021
29 °C

ಗುಂಡು ಹಾರಿಸಿ ವ್ಯಾಪಾರಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಪಟ್ಟಣದ ಬಟ್ಟೆ ಅಂಗಡಿಯ ವ್ಯಾಪಾರಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗುಂಡಿನ ಸದ್ದು ಕೇಳಿ ಪಟ್ಟಣ ಬೆಚ್ಚಿಬಿದ್ದಿದೆ.

ಮೂಲ್‌ಸಿಂಗ್‌ (35) ಕೊಲೆಯಾದ ವ್ಯಾಪಾರಿ. ಹೊಸದುರ್ಗ ರಸ್ತೆಯ ಅನ್ನಪೂರ್ಣೇಶ್ವರಿ ಹೋಟೆಲ್‌ ಸಮೀಪ ‘ಪ್ರಿಯದರ್ಶಿನಿ ಟೆಕ್ಸ್‌ಟೈಲ್‌’ ಎಂಬ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು.

ಅಂಗಡಿಯ ಬಾಗಿಲು ಮುಚ್ಚಲು ಮೂಲ್‌ಸಿಂಗ್‌ ಸಿದ್ದರಾಗಿದ್ದರು. ರಾತ್ರಿ 9.30ರ ಸುಮಾರಿಗೆ ಅಂಗಡಿಯ ಮುಂಭಾಗದಲ್ಲಿ ಇಟ್ಟಿದ್ದ ಬಟ್ಟೆಗಳನ್ನು ಒಳಗೆ ಎತ್ತಿ ಇಡುವಾಗ ಗುಂಡು ಹಾರಿಸಲಾಗಿದೆ. ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವ್ಯಾಪಾರಿಯ ಕೊಲೆಗೆ ದುಷ್ಕರ್ಮಿಗಳು ಬಹುದಿನಗಳಿಂದ ಹೊಂಚು ಹಾಕಿರುವ ಸಾಧ್ಯತೆ ಇದೆ. ಕೆಸರಗಟ್ಟೆ ಕೆರೆ ಪಕ್ಕದಲ್ಲೇ ಬಟ್ಟೆ ಅಂಗಡಿ ಇರುವುದರಿಂದ ವ್ಯಾಪಾರಿ ಹೊರಗೆ ಬರುವ ಸಮಯಕ್ಕೆ ದುಷ್ಕರ್ಮಿಗಳು ಕಾದಿದ್ದಾರೆ. ಗುಂಡು ಹಾರಿಸಿ ಕಾಲ್ನಡಿಗೆಯಲ್ಲಿಯೇ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ವಿವರಿಸಿದ್ದಾರೆ.

2018ರ ನ.28ರಂದು ರಾಮಗಿರಿಯಲ್ಲಿ ನಡೆದ ಚಿನ್ನದ ವ್ಯಾಪಾರಿ ಕಲ್ಯಾಣ ಸಿಂಗ್‌ ಕೊಲೆ ಪ್ರಕರಣದಲ್ಲಿ ಮೂಲ್‌ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದರು. ಬಾಡಿಗೆ ಮನೆಯ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಮೂಲ್‌ಸಿಂಗ್ ಹಾಗೂ ಇಬ್ಬರು ಸಹೋದರರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಮೂಲ್‌ಸಿಂಗ್‌ ಜಾಮೀನು ಮೇಲೆ ಹೊರಗೆ ಬಂದಿದ್ದನು. ಕಲ್ಯಾಣ್‌ಸಿಂಗ್‌ ಹತ್ಯೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ರವೀಶ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿದು ಪಟ್ಟಣದ ಜನರು ಶೂಟ್‌ಔಟ್‌ ನಡೆದ ಸ್ಥಳದಲ್ಲಿ ಜಮಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು