ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಳ್ಳುತ್ತಲೇ ನಮ್ಮ ಹಗರಣ ನೆನಪಾಯಿತೇ? ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು. ನಮ್ಮ (ಕಾಂಗ್ರೆಸ್‌) ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ ಮೂರು ವರ್ಷ ಸಾಕಾಗಲಿಲ್ಲವೇ? ನಿಮ್ಮ (ಬಿಜೆಪಿ) ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಆಡಳಿತಾವಧಿಯ ಅಕ್ರಮಗಳ ತನಿಖೆಗೆ ನಡೆಸುವಂತೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಸಚಿವ ಅಶ್ವತ್ಥ ನಾರಾಯಣ ಅವರು ಇತ್ತೀಚೆಗೆ ಹೇಳಿದ್ದರು. ಇದಕ್ಕೆ ತಿರಗೇಟು ನೀಡಿ ಸಿದ್ದರಾಮಯ್ಯ ಅವರು ಶುಕ್ರವಾರ ಸರಣಿ ಟ್ವೀಟ್‌ ಮಾಡಿದ್ದಾರೆ.

‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯ ಹಗರಣಗಳನ್ನು ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಿರುವ ಸಚಿವ ಅಶ್ವತ್ಥನಾರಾಯಣ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇದೇ ರೀತಿ ಪಿಎಸ್ಐ ನೇಮಕಾತಿ ಹಗರಣದಲ್ಲಿ ಅವರ ಮೇಲಿನ ಆರೋಪಗಳ ಬಗ್ಗೆಯೂ ತನಿಖೆಗೆ ಒತ್ತಾಯಿಸಿ ಪತ್ರ ಬರೆಯಲು ಕೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು. ನಮ್ಮ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ ಮೂರು ವರ್ಷ ಸಾಕಾಗಲಿಲ್ಲವೇ? ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ? ರಾಜ್ಯ ಬಿಜೆಪಿ ಸರ್ಕಾರದ ಸಾಲು ಸಾಲು ಹಗರಣಗಳನ್ನು ಬಯಲಿಗೆಳೆಯದಂತೆ ತಡೆಯಲು ನೀವು ಮಾಡುತ್ತಿರುವ ಬೆದರಿಕೆ ರೂಪದ ಆರೋಪಗಳಿಗೆ ನಾವು ಬಗ್ಗುವವರಲ್ಲ. ಈ ರೀತಿಯ ಈ ಬ್ಲಾಕ್ ಮೇಲ್ ತಂತ್ರದಿಂದ ನಮ್ಮ ಬಾಯಿ ಮುಚ್ಚಿಸಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಅಶ್ವತ್ಥನಾರಾಯಣ’ ಎಂದು ಅವರು ಹೇಳಿದ್ದಾರೆ.

‘ನಿಮ್ಮ (ಬಿಜೆಪಿ) ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತನಿಖೆಗಾಗಿ ಇಡೀ ವಿಧಾನಸೌಧವನ್ನೇ ತನಿಖಾ ಸಂಸ್ಥೆಗಳಿಗೆ ಬಿಟ್ಟುಕೊಡಬೇಕಾಗಬಹುದು ಅಶ್ವತ್ಥನಾರಾಯಣ. ಸಚಿವರು ಬೇರೇನೂ ಕೆಲಸ ಮಾಡದೆ ತನಿಖಾಧಿಕಾರಿಗಳ ಮುಂದೆ ನಿತ್ಯ ವಿಚಾರಣೆಗೆ ಹಾಜರಿ ಹಾಕಬೇಕಾಗಬಹುದು. ಇದಕ್ಕಿಂತ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು’ ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT