ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾಜಿಕ ನ್ಯಾಯ’ ಭಾಷಣದ ಸರಕು: ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಪರೋಕ್ಷ ಟೀಕೆ

ಸಂಜೀವಿನಿ ಸಾಮರ್ಥ್ಯ, ಜೀವನೋಪಾಯ ವರ್ಷ: 2022–23ಕ್ಕೆ ಮುಖ್ಯಮಂತ್ರಿ ಚಾಲನೆ
Last Updated 11 ಆಗಸ್ಟ್ 2022, 12:38 IST
ಅಕ್ಷರ ಗಾತ್ರ

ಮಂಡ್ಯ: ‘ಸಾಮಾಜಿಕ ನ್ಯಾಯ ಎಂಬುದು ಭಾಷಣದ ಸರಕಾಗಿದೆ, ಮಾತಿನಿಂದ ಯಾರನ್ನೂ ಮರಳು ಮಾಡಲು ಸಾಧ್ಯವಿಲ್ಲ. ನಾಮಕಾವಸ್ತೆ ಯೋಜನೆಗಳಿಂದ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ನಗರದ ಮಂಡ್ಯ ವಿವಿ ಆವರಣದಲ್ಲಿ ಗುರುವಾರ ‘ಸಂಜೀವಿನಿ ಸಾಮರ್ಥ್ಯ, ಜೀವನೋಪಾಯ ವರ್ಷ: 2022–23’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘60 ತಿಂಗಳ ಅಧಿಕಾರದಲ್ಲಿ 59 ತಿಂಗಳು ಅಭಿವೃದ್ಧಿ ಕೆಲಸ ಮಾಡಬೇಕು, 1 ತಿಂಗಳು ಮಾತ್ರ ರಾಜಕಾರಣ ಮಾಡಬೇಕು. ನಾವು ನುಡಿದಂತೆ ನಡೆಯುತ್ತಿದ್ದೇವೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದೇವೆ’ ಎಂದರು.

‘ಹೆಣ್ಣು ಮಕ್ಕಳಿಗೆ ದುಡಿಯುವ ಅವಕಾಶ ನೀಡುವ ಉದ್ದೇಶದಿಂದ ರಾಜ್ಯದ ಪ್ರತಿ ಹಳ್ಳಿಯ ಒಂದು ಮಹಿಳಾ ಸ್ವಸಹಾರ ಸಂಘಕ್ಕೆ ₹ 1.50 ಲಕ್ಷ ಧನಸಹಾಯ ನೀಡಲಾಗುವುದು. ಅದಕ್ಕಾಗಿ ₹ 500 ಕೋಟಿ ಮೀಸಲಿಡಲಾಗಿದೆ. ಯುವಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಅಡಿ ಪ್ರತಿ ಹಳ್ಳಿಯ ಒಂದು ಯುವ ಸಂಘಟನೆಗೂ ₹ 1.50 ಲಕ್ಷ ನೀಡಲಾಗುವುದು’ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ ‘ಮಹಿಳಾ ಸಂಘಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ನೀಡಲು ಅಮೆಜಾನ್‌ ಕಂಪನಿ ವಾರ್ಷಿಕ ₹ 80 ಸಾವಿರ ಕೋಟಿ ಮೌಲ್ಯದ ಮಾರುಕಟ್ಟೆ ಒದಗಿಸಲು ಮುಂದೆ ಬಂದಿದೆ. ಫ್ಲಿಕ್‌ ಕಾರ್ಟ್, ಮಿಶೋ ಕಂಪನಿಗಳು ಕೂಡ ಮಾರುಕಟ್ಟೆ ಒದಗಿಸಲು ಮುಂದಾಗಿವೆ’ ಎಂದರು.

****

ಎಸಿಬಿ ವಜಾ:ತಜ್ಞರೊಂದಿಗೆ ಚರ್ಚಿಸಿ ಕ್ರಮ

‘ಹೈಕೋರ್ಟ್‌ ಎಸಿಬಿ ರಚನೆ ವಜಾ ಮಾಡಿರುವ ವಿಷಯ ತಿಳಿದಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಕೋರ್ಟ್ ಆದೇಶ ನೋಡಿದ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯ ಹಿಂದೆ ಇರುವವರ ಮಾಹಿತಿ ಶೀಘ್ರ ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT