ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪದೇಶಿಸಲು ಬಿಜೆಪಿಗೆ ಯಾವ ನೈತಿಕತೆ ಇದೆ: ಸಿದ್ದರಾಮಯ್ಯ ಪ್ರಶ್ನೆ

ಪೊಲೀಸ್ ಇಲಾಖೆಯ ದುರ್ಬಳಕೆ ಆರೋಪ
Last Updated 17 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು:‘ಶಿರಾದಲ್ಲಿ ಬಿಜೆಪಿಯವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಕೋವಿಡ್ ನಿಯಮಗಳಿಗೆ ವಿರುದ್ಧವಲ್ಲವೇ. ತಾವು ಜಾರಿಗೆ ತಂದಿರುವ ನಿಯಮಗಳನ್ನು ತಾವೇ ಧಿಕ್ಕರಿಸಿದ್ದಾರೆ. ಇನ್ನು ಬೇರೆಯವರಿಗೆ ಉಪದೇಶ ನೀಡಲು ಯಾವ ನೈತಿಕತೆ ಇದೆ’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಆರ್‌.ಆರ್‌. ನಗರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸುವ ದಿನ ನಾನು 11.45ಕ್ಕೆ ಹೋಗಿದ್ದೆ. ಆದರೆ, 11.15ರ ಸಮಯ ನಮೂದಿಸಿದ್ದಕ್ಕೆ ನನ್ನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇದು ಪೊಲೀಸ್ ಇಲಾಖೆಯ ದುರ್ಬಳಕೆಯಲ್ಲದೆ ಇನ್ನೇನು. ರಾಜಕೀಯ ದುರುದ್ದೇಶದಿಂದ ಕೂಡಿದ ಇಂಥ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ’ ಎಂದರು.

‘ಇಂದಿರಾ ಕ್ಯಾಂಟೀನ್ ಅನ್ನು ಬಿಜೆಪಿ ಸರ್ಕಾರ ಮುಚ್ಚಲು ಹೊರಟಿದೆ. ದುಡ್ಡಿಲ್ಲ, ಕೊರೊನಾ ಇದೆ ಎಂದು ಜನರ ಎದುರು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು’ ಎಂದೂ ಹೇಳಿದರು.

‘ಇಷ್ಟು ದಪ್ಪ ಚರ್ಮದ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರವಿಲ್ಲ. ಎಲ್ಲರೂ ಹಣ ಮಾಡಲು ಕುಳಿತು ಬಿಟ್ಟಿದ್ದಾರೆ. ಚುನಾವಣೆ ಬಂದಾಗ ದುಡ್ಡು ಖರ್ಚು ಮಾಡಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಆದರೆ, ಈ ಬಾರಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ’ ಎಂದರು.

ಆರ್‌.ಆರ್‌. ನಗರ ಮತದಾರರಲ್ಲಿದೆ ಆಕ್ರೋಶ: ಡಿಕೆಶಿ

ಬೆಂಗಳೂರು: ತಮ್ಮ ಮತಗಳಿಂದ ಗೆದ್ದ ಅಭ್ಯರ್ಥಿ, ತನ್ನನ್ನು ಮಾರಾಟ ಮಾಡಿಕೊಂಡಿದ್ದಕ್ಕೆ ಆಕ್ರೋಶಗೊಂಡಿರುವ ಆರ್‌.ಆರ್. ನಗರ ಕ್ಷೇತ್ರದ ಮತದಾರರು, ನ. 3ರಂದು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ವಕ್ತಾರರು ಮತ್ತು ಆರ್‌.ಆರ್‌. ನಗರ ಕ್ಷೇತ್ರದ ವೀಕ್ಷಕರ ಸಭೆಗೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಸಕಾರಾತ್ಮಕ ವಾತಾವರಣವಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ’ ಎಂದರು.

ಆಗದಿದ್ದರೆ ಅಧಿಕಾರ ಬಿಡಿ: ‘ಪ್ರವಾಹಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಭೇಟಿ ನೀಡಲು ನನಗೆ ವಯಸ್ಸಾಗಿದೆ, ಕೋವಿಡ್ ಇದೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣೀರು ಹಾಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಜನರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದರೆ, ಸಚಿವ ಸ್ಥಾನ ಬಿಡಬೇಕು. ಅಧಿಕಾರ ಬಿಟ್ಟು ಮನೆ ಸೇರಿಕೊಂಡರೆ ಉತ್ತಮ. ಸ್ವಂತ ಹಿತಕ್ಕಾಗಿ ರಾಜ್ಯ ಹಾಗೂ ರಾಜ್ಯದ ಜನರನ್ನು ಬಲಿ ಕೊಡಲು ಸಾಧ್ಯವಿಲ್ಲ’ ಎಂದರು.

ಕುಸುಮಾ ಪರ ಪ್ರಚಾರ: ಆರ್‌.ಆರ್‌. ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ಪರ ಎಚ್ಎಂಟಿ ಬಡಾವಣೆಯ ಜೆಪಿ ಪಾರ್ಕ್‌ನಲ್ಲಿ ‌ ಶಿವಕುಮಾರ್‌ ಅವರು ಕಾರ್ಯಕರ್ತರ ಸಭೆ ನಡೆಸಿದರು. ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ ಇದ್ದರು.

ಪರಿಷತ್‌ ಚುನಾವಣೆಗೆ ‘ನೋಟಾ’ ಇಲ್ಲ

ಕಲಬುರ್ಗಿ: ಈಗ ನಡೆಯುತ್ತಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾರರು ‘ನೋಟಾ’ (None of the above-NOTA)ಕ್ಕೆ ಮತ ಚಲಾಯಿಸಲು ಅವಕಾಶ ಇಲ್ಲ.

‘ರಾಜ್ಯಸಭೆ ಮತ್ತು ವಿಧಾನ ಪರಿಷತ್‌ ಚುನಾವಣೆಗಳ ನಾಮಪತ್ರಗಳಲ್ಲಿ ನೋಟಾ ಆಯ್ಕೆಗೆ ಇದ್ದ ಅವಕಾಶವನ್ನು ಕೇಂದ್ರ ಚುನಾವಣಾ ಆಯೋಗ 2018ರಲ್ಲೇ ಹಿಂಪಡೆದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪತ್ರ ಬರೆದು ತಿಳಿಸಿದ್ದಾರೆ. ಹೀಗಾಗಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಯ ಮತದಾನದಲ್ಲಿ ನೋಟಾ ಆಯ್ಕೆಗೆ ಅವಕಾಶ ಇರುವುದಿಲ್ಲ’ ಎಂದು ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಾ.ಎನ್‌.ವಿ. ಪ್ರಸಾದ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಬಯಸದ ಮತದಾರರು, ‘ಈ ಮೇಲಿನ ಯಾರಿಗೂ ನನ್ನ ಮತ ಇಲ್ಲ’ ಎಂಬ ‘ನೋಟಾ’ಕ್ಕೆ ಮತ ಚಲಾಯಿಸಲು ಅವಕಾಶ ಇತ್ತು.

17 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ

ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು 17 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಎಲ್ಲ ನಾಮಪತ್ರಗಳು ಕ್ರಮ ಬದ್ದವಾಗಿವೆ.

ಮೂರು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಅಮ್ಮಾಜಮ್ಮ (ಜೆಡಿಎಸ್), ಟಿ.ಬಿ.ಜಯಚಂದ್ರ (ಕಾಂಗ್ರೆಸ್), ಡಾ.ಸಿ.ಎಂ.ರಾಜೇಶ್ ಗೌಡ (ಬಿಜೆಪಿ) ಅವರ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಿರೀಶ್ (ಭಾರತ ಕಮ್ಯುನಿಸ್ಟ್ ಪಕ್ಷ), ಬಿ.ಟಿ. ಓಬಳೇಶಪ್ಪ (ಕರ್ನಾಟಕ ರಾಷ್ಟ್ರ ಸಮಿತಿ), ತಿಮ್ಮಕ್ಕ ( ರೈತ ಭಾರತ ಪಕ್ಷ), ಪ್ರೇಮಕ್ಕ (ರಿಪಬ್ಲಿಕ್ ಸೇನೆ), ಪಕ್ಷೇತರ ಅಭ್ಯರ್ಥಿಗಳಾದ ಅಂಬ್ರೋಸ್ ಡಿ ಮೆಲ್ಲೋ, ಎಂ.ಎಲ್.ಎ.ಆರ್.ಕಂಪಣ್ಣ, ಎಂ.ಗುರುಸಿದ್ದಪ್ಪ, ಜಯಣ್ಣ ವೈ ಉರುಫ್ ಜಯಣ್ಣ, ತಿಮ್ಮರಾಜಗೌಡ, ಎಲ್.ಕೆ. ದೇವರಾಜು, ಜಿ.ಎಸ್.ನಾಗರಾಜು, ನಿಸಾರ್ ಅಹಮದ್, ಸಾದಿಕ್ ಪಾಷ ಅವರ ನಾಮಪತ್ರಗಳು ಕ್ರಮಬದ್ದವಾಗಿವೆ.

ಮೂರು ಪಕ್ಷಗಳ ವಿರುದ್ಧ ದೂರು ದಾಖಲು

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಕೋವಿಡ್–19 ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ಮೂರು ರಾಜಕೀಯ ಪಕ್ಷಗಳ ವಿರುದ್ಧ ದೂರು ದಾಖಲಾಗಿದೆ.

‘ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಕೋವಿಡ್–19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಈ ಕಾರ್ಯಕ್ರಮಗಳಿಗೆ ಅನುಮತಿ ಪಡೆದ ಆಯಾ ಪಕ್ಷಗಳ ತಾಲ್ಲೂಕು ಘಟಕಗಳ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕು’ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಶಿರಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ರ‍್ಯಾಲಿ ನಡೆಸುತ್ತೇವೆ ಎಂದು ಶಿರಾ ನಗರ ಬಿಜೆಪಿ ಅಧ್ಯಕ್ಷ ಎಂ.ವಿಜಯರಾಜ್, ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಆರ್‌.ಮಂಜುನಾಥ್, ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು.

ಆದರೆ, ಈ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ 100ಕ್ಕೂ ಹೆಚ್ಚು ಜನರು ಸೇರಿದ್ದರು. ಮಾಸ್ಕ್ ಧರಿಸಿರಲಿಲ್ಲ. ಸ್ಯಾನಿಟೈಸರ್ ಬಳಸಿಲ್ಲ. ಥರ್ಮಲ್ ಸ್ಕ್ರೀನಿಂಗ್ ಸಹ ನಡೆಸಿಲ್ಲ. ಈ ಕುರಿತ ವಿಡಿಯೊ ದಾಖಲೆಗಳು ಚುನಾವಣಾ ಶಾಖೆಯಲ್ಲಿ ಲಭ್ಯ ಇವೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುನಿರತ್ನ ನಾಮಪತ್ರ ತಿರಸ್ಕರಿಸುವಂತೆ ಕಾಂಗ್ರೆಸ್‌, ಜೆಡಿಎಸ್‌ ಆಗ್ರಹ

ಬೆಂಗಳೂರು: ಆರ್.ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಸಲ್ಲಿಸಿರುವ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲ. ಹೀಗಾಗಿ, ಅವರ ನಾಮಪತ್ರ ತಿರಸ್ಕರಿಸುವಂತೆ ಕ್ಷೇತ್ರದ ಚುನಾವಣಾಧಿಕಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ದೂರು ಸಲ್ಲಿಸಿವೆ.

ಮುನಿರತ್ನ ಅವರು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಕ್ರಮಬದ್ಧವಾಗಿರದ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ದೂರಿನಲ್ಲಿ ಮನವಿ ಮಾಡಿವೆ.

ನ. 3ರಂದು ಆರ್.ಆರ್ ನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಕಣದಲ್ಲಿ ಇದ್ದಾರೆ.

ಮೂವರ ನಾಮಪತ್ರ ತಿರಸ್ಕೃತ: ಆರ್‌.ಆರ್‌. ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆಯಿತು.

ಆರ್‌.ಆರ್‌. ನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಶಿವಲಿಂಗಯ್ಯ ಸಿ., ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಎನ್. ಸಂಪತ್ ಮತ್ತು ಕರುನಾಡು ಪಕ್ಷದ ಎಚ್‌.ಎಂ. ಕಿಶೋರ್‌ ಗೌಡ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿವೆ. ಇಲ್ಲಿ ಕಣದಲ್ಲಿ ಒಟ್ಟು 20 ಅಭ್ಯರ್ಥಿಗಳು ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT