ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಸುಳಿಗೆ ಸಿಲುಕಿರುವ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯತ್ತ: ಸಿದ್ದರಾಮಯ್ಯ

ಅನಗತ್ಯ ಹುದ್ದೆಗಳ ಕಡಿತಕ್ಕೆ ತಕ್ಷಣವೇ ಕಠಿಣ ಕ್ರಮಕೈಗೊಳ್ಳಲು ಸಲಹೆ
Last Updated 25 ಸೆಪ್ಟೆಂಬರ್ 2020, 11:06 IST
ಅಕ್ಷರ ಗಾತ್ರ

ಬೆಂಗಳೂರು: ಸಾಲದ ಸುಳಿಗೆ ಸಿಲುಕಿರುವ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗುವತ್ತ ಸಾಗಿದೆ. ದಿವಾಳಿ ಆಗುವುದನ್ನು ತಡೆಯಲು ತಕ್ಷಣವೇ ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಮಸೂದೆ’ಯ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಶೇ 50 ರಷ್ಟು ಬಾಬ್ತು ಸರ್ಕಾರಿ ನೌಕರರ ಸಂಬಳ, ಸಾರಿಗೆ ಮತ್ತು ಪಿಂಚಣಿಗೆ ವೆಚ್ಚವಾಗುತ್ತಿದೆ. ಇದನ್ನು ತಗ್ಗಿಸಲು ಸರ್ಕಾರಿ ಇಲಾಖೆಗಳಲ್ಲಿನ ಅನಗತ್ಯ ಹುದ್ದೆಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಸಲಹೆ ನೀಡಿದರು.

ಕೆಲವು ಇಲಾಖೆಗಳಲ್ಲಿ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರ ಹುದ್ದೆಗಳಿವೆ. ಒಂದು ಕಡತವನ್ನು ಪರಿಶೀಲಿಸಿ ಮೇಲಿನ ಅಧಿಕಾರಿಗಳ ಹುದ್ದೆಗಳಿಗೆ ಕಳಿಸಲಿಕ್ಕೆ ಇಷ್ಟು ಹುದ್ದೆಗಳು ಏಕೆ ಬೇಕು? ವಿಭಾಗೀಯ ಆಯುಕ್ತರ ಅಗತ್ಯವೇನಿದೆ. ಆದ್ದರಿಂದ ಈ ಹುದ್ದೆಗಳನ್ನು ರದ್ದು ಮಾಡಬೇಕು. ಸಂಕಷ್ಟದ ಈ ಸಂದರ್ಭದಲ್ಲಿ ಅನಗತ್ಯವಾಗಿ ಸಂಬಳ, ಭತ್ಯೆಗಳನ್ನು ಹೆಚ್ಚಿಸಬೇಡಿ. ಕೆಲವು ನಿಗಮ– ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡದೇ ಇದ್ದಾಗ ಅಲ್ಲಿರುವ ಅಧಿಕಾರಿಗಳು ಅಧ್ಯಕ್ಷರದ್ದೂ ಸೇರಿ ಎರಡೆರಡು ವಾಹನಗಳನ್ನು ಬಳಸುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ ಸಾಲದ ಮೊತ್ತ ₹1.36 ಲಕ್ಷ ಕೋಟಿ ಇತ್ತು. ಈಗ ಅದು ₹ 3.68 ಲಕ್ಷ ಕೋಟಿಗೆ ತಲುಪಿದೆ. ₹33 ಸಾವಿರ ಕೋಟಿ ಸಾಲ ತೆಗೆದುಕೊಂಡರೆ, ₹4 ಲಕ್ಷ ಕೋಟಿ ಮೀರಲಿದೆ. ಸರ್ಕಾರ ಪಾವತಿಸಬೇಕಾದ ಅಸಲು ಮತ್ತು ಬಡ್ಡಿಯ ಪ್ರಮಾಣದ ಬಗ್ಗೆ ಯೋಚಿಸಿದ್ದೀರಾ’ ಎಂದರು.

‘ಕರ್ನಾಟಕದ ಆರ್ಥಿಕ ಶಿಸ್ತು ಇಲ್ಲಿಯವರೆಗೆ ಹಳಿ ತಪ್ಪಿರಲಿಲ್ಲ. ಈಗ ₹46 ಸಾವಿರ ಕೋಟಿ ಹಣಕಾಸು ಕೊರತೆ ಇದೆ. ₹33 ಸಾವಿರ ಕೋಟಿ ಸಾಲ ಪಡೆದರೆ, ಕೊರತೆಯ ಪ್ರಮಾಣ ₹93 ಸಾವಿರ ಕೋಟಿ ದಾಟುತ್ತದೆ. ಅಚ್ಚರಿ ಎಂದರೆ ರಾಜ್ಯದ ಬದ್ಧತಾ ವೆಚ್ಚವೇ ಶೇ 90 ರಷ್ಟಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಶೇ 10 ಕ್ಕಿಂತಲೂ ಕಡಿಮೆ ಹಣ ವೆಚ್ಚ ಮಾಡಲಾಗುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ಬಡವರಿಗೆ ಮನೆ, ರಸ್ತೆ, ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಹೇಗೆ’ ಎಂದು ಪ್ರಶ್ನಿಸಿದರು.

ಸಭಾತ್ಯಾಗದ ನಡುವೆ ಮಸೂದೆ ಅಂಗೀಕಾರ

ಕಾಂಗ್ರೆಸ್‌ ಸದಸ್ಯರ ವಿರೋಧ ಮತ್ತು ಸಭಾತ್ಯಾಗದ ಮಧ್ಯೆ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಮಸೂದೆ 2020’ಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಮಸೂದೆ ಮಂಡಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಇದೊಂದು ತೀರಾ ಸಂಕಷ್ಟದ ಸಂದರ್ಭ. ಕೋವಿಡ್‌ ಲಾಕ್‌ಡೌನ್‌ನಿಂದ ಸರ್ಕಾರದ ಆದಾಯವೇ ಶೂನ್ಯ ಮಟ್ಟಕ್ಕೆ ತಲುಪಿತ್ತು. ಕೋವಿಡ್ ಜತೆಗೆ ಮಳೆ ಮತ್ತು ಪ್ರವಾಹದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದು ವಿವರಿಸಿದರು.

ಈಗ ತೆಗೆದುಕೊಳ್ಳುವ ಸಾಲದಲ್ಲಿ ಬದ್ಧತಾ ವೆಚ್ಚಕ್ಕೂ ಸ್ವಲ್ಪ ಭಾಗ ವೆಚ್ಚ ಮಾಡಲೇಬೇಕಾದ ಸ್ಥಿತಿ ಇದೆ. ಸಾಲ ತೆಗೆದುಕೊಂಡಾದರೂ ರಾಜ್ಯವನ್ನು ನಡೆಸಬೇಕಾದ ಸ್ಥಿತಿ ಇದೆ. ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಹರ್ಷದಿಂದ ಸಾಲ ತೆಗೆದುಕೊಳ್ಳುತ್ತಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಮಾತನಾಡಿ, ಈಗ ನೀವು ತೆಗೆದುಕೊಳ್ಳುವ ಸಾಲ ರಾಜ್ಯದ 8–10 ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ. ಇದರ ಪರಿಣಾಮ ದೀರ್ಘಾವಧಿ. 10 ವರ್ಷಗಳ ಆರ್ಥಿಕ ಶಿಸ್ತು ಉಲ್ಲಂಘನೆಗೆ ಕಾರಣವಾಗುತ್ತದೆ. ಜಿಎಸ್‌ಟಿ ಮಂಡಳಿ ಸೆಸ್‌ ನಿಧಿಯಿಂದಲೇ ರಾಜ್ಯಗಳಿಗೆ ಪರಿಹಾರ ಮೊತ್ತ ಪಾವತಿಸಬಹುದು ಎಂದರು.

ಸಾಲ ತೆಗೆದುಕೊಳ್ಳುವ ಪ್ರಮಾಣ ಶೇ 5 ಕ್ಕೆ ಬದಲು ಶೇ 3.5 ಕ್ಕೆ ಸೀಮಿತಗೊಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಸರ್ಕಾರ ಇದಕ್ಕೆ ಒಪ್ಪದಿದ್ದಾಗ, ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT