ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್‌.ಸಿ, ಎಸ್.ಟಿ ನೌಕರರ ಬಡ್ತಿಗೆ ಶಾಶ್ವತ ಸಮಿತಿ ರಚಿಸಿ’:ಸಿದ್ದರಾಮಯ್ಯ ಪತ್ರ

ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ
Last Updated 22 ಡಿಸೆಂಬರ್ 2020, 6:47 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌.ಟಿ) ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳ ನಿವಾರಣೆಗೆ ಹಿರಿಯ ಸಚಿವರ ನೇತೃತ್ವದಲ್ಲಿ ಶಾಶ್ವತ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಪರಿಶಿಷ್ಟ ಜಾತಿ ಪತ್ತು ಪಂಗಡದ ನೌಕರರ ಸಂಘದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು. ‘ಅನ್ಯಾಯಕ್ಕೆ ಒಳಗಾಗಿರುವ ನೌಕರರ ಹಿತ ಕಾಪಾಡಬೇಕು’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಎಸ್‌.ಸಿ, ಎಸ್‌.ಟಿ ಸರ್ಕಾರಿ ನೌಕರರ ಬಡ್ತಿ ವಿಚಾರವು ಅನೇಕ ವರ್ಷಗಳಿಂದ ಬಿಡಿಸಲಾಗದ ಸಮಸ್ಯೆಯಾಗಿತ್ತು. ಹಿಂದೆ ಇದ್ದ ಕಾಯ್ದೆಗಳಲ್ಲಿನ ಕೆಲವು ನ್ಯೂನತೆಗಳಿಂದಾಗಿ ನ್ಯಾಯಾಲಯಗಳು ಕೂಡಾ ಈ ಸಮಸ್ಯೆಯನ್ನು ಪರಿಹರಿಸಲು ಹಲವು ವರ್ಷಗಳನ್ನು ತೆಗೆದುಕೊಂಡಿದ್ದವು. ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದಾಗಿ ಹಿಂಬಡ್ತಿ ಹೊಂದುವ ಭೀತಿಯಿಂದ ಈ ವರ್ಗಗಳ 15 ಕ್ಕೂ ಹೆಚ್ಚು ನೌಕರರು ಆತ್ಮಹತ್ಯೆ ಮಾಡಿಕೊಂಡರು ಮತ್ತು ಅನ್ಯಾಯದ ಸಾವಿಗೀಡಾದರು’.

‘ಈ ವರ್ಗಗಳ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ 2017ರಲ್ಲಿ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಡ್ತಿ ಸಂರಕ್ಷಣಾ ಕಾಯ್ದೆ’ ಜಾರಿಗೆ ತರಲಾಯಿತು. ಈ ಕಾಯ್ದೆಗೆ ರಾಷ್ಟ್ರಪತಿಗಳೂ ಅಂಕಿತ ಹಾಕಿದರು. ಸುಪ್ರೀಂ ಕೋರ್ಟ್‌ ಕೂಡಾ ಈ ಕಾಯ್ದೆಯನ್ನು ಎತ್ತಿ ಹಿಡಿಯಿತು. ಇದರಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ನೌಕರರು ತುಸುಮಟ್ಟಿಗೆ ನಿರಾಳವಾದರು. ಆದರೆ, ಪ್ರಸ್ತುತ ನಿಮ್ಮ ಸರ್ಕಾರದ ಅವಧಿಯಲ್ಲಿ ಈ ಸಮುದಾಯಗಳ ಹಾಗೂ ಹಿಂದುಳಿದ ವರ್ಗಗಳ ನೌಕರರ ಕುರಿತಾದ ನಿರ್ಲಕ್ಷ್ಯ ಧೋರಣೆಯಿಂದಾಗಿ ಮತ್ತು ಹಲವು ಇಲಾಖೆಗಳ ಅಧಿಕಾರಿಗಳ ಉದ್ಧಟತನದಿಂದಾಗಿ ಮತ್ತೆ ಅದೇ ರೀತಿಯ ಸಮಸ್ಯೆಗಳು ಉದ್ಭವಿಸುತ್ತಿವೆ. ಮುಖ್ಯವಾಗಿ ಲೋಕೋಪಯೋಗಿ, ಜಲಸಂಪನ್ಮೂಲ, ಅಬಕಾರಿ, ಪೊಲೀಸ್, ಅರಣ್ಯ ಸಾರಿಗೆ, ನಗರಾಭಿವೃದ್ಧಿ, ಔಷಧ ನಿಯಂತ್ರಣ, ಕೆಪಿಟಿಸಿಎಲ್, ಅಗ್ನಿ ಶಾಮಕ, ಕೃಷಿ, ಶಿಕ್ಷಣ ಮುಂತಾದ ಇಲಾಖೆಗಳಲ್ಲಿ ಕಿರಿಯರಿಗೆ ಬಡ್ತಿ ನೀಡಿ, ಹಿರಿಯರನ್ನು ಕಡೆಗಣಿಸಲಾಗಿದೆ’ ಎಂದೂ ಪತ್ರದಲ್ಲಿ ದೂರಿದ್ದಾರೆ.

‘ಉದಾಹರಣೆಗೆ ಜಲಸಂಪನ್ಮೂಲ ಇಲಾಖೆಯಲ್ಲಿ 2009ರಲ್ಲಿ ನೇಮಕವಾದವರನ್ನು ಬಿಟ್ಟು 2003 ಮತ್ತು 2007 ರ ಬ್ಯಾಚ್‍ಗಳಲ್ಲಿ ನೇಮಕಗೊಂಡ ಎಂಜಿನಿಯರುಗಳಿಗೆ ಬಡ್ತಿ ನೀಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳು ಉದ್ಭವವಾಗಿವೆ. ನೇರ ನೇಮಕಾತಿ ಆದವರಿಗೆ ಮತ್ತು ಬ್ಯಾಕ್‍ಲಾಗ್ ಮೂಲಕ ನೇಮಕಾತಿ ಆದವರಿಗೂ ಹಲವು ಸಮಸ್ಯೆಗಳಿವೆ. ಎಸ್‌.ಸಿ, ಎಸ್‌.ಟಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ನೇಮಕಾತಿಯಲ್ಲಿ ಮೆರಿಟ್‍ನ ಕಾರಣಕ್ಕೆ ಸಾಮಾನ್ಯ ಕೋಟಾದಡಿ ಆಯ್ಕೆ ಆಗಿದ್ದರೆ ಅಂಥವರಿಗೆ ಬಡ್ತಿ ನಿರಾಕರಿಸುವುದು ಅಸಂವಿಧಾನಿಕ ವರ್ತನೆಯಾಗುತ್ತದೆ’

‘ಆದ್ದರಿಂದ, ಈ ಕುರಿತು ಗಮನ ಹರಿಸಬೇಕಾದ ಅಗತ್ಯವಿದೆ. ಈ ವರ್ಗಗಳ ನೌಕರರ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ಮಟ್ಟದಲ್ಲಿ ಹಿರಿಯ ಸಚಿವರ ಮುಂದಾಳತ್ವದಲ್ಲಿ ಶಾಶ್ವತ ಸಮಿತಿ ರಚಿಸಿ, ಕಾಲ ಕಾಲಕ್ಕೆ ಉದ್ಭವವಾಗುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಪ್ರಸ್ತುತ ಉದ್ಭವವಾಗಿರುವ ಸಮಸ್ಯೆಗಳ ಕುರಿತು ಈ ಸಮುದಾಯಗಳ ನೌಕರರ ಸಂಘದ ಪದಾಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆದು ಸಹಾನುಭೂತಿಯಿಂದ ಪರಿಶೀಲಿಸಿ ಅನ್ಯಾಯಕ್ಕೊಳಗಾಗಿರುವ ನೌಕರರ ಹಿತರಕ್ಷಣೆ ಮಾಡಬೇಕು ಮತ್ತು ಬಾಕಿ ಇರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದೂ ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT