ಶುಕ್ರವಾರ, ಏಪ್ರಿಲ್ 23, 2021
30 °C

ಸಿಗಂದೂರು ಶಾಪ | ಸಿ.ಎಂ ಯಡಿಯೂರಪ್ಪಗೆ ಡಿನೋಟಿಫೈ ಕಂಟಕ -ಗೋಪಾಲಕೃಷ್ಣ ಬೇಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಿಗಂದೂರು ದೇವಿಯ ಶಾಪದ ಫಲವಾಗಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಿನೋಟಿಫೈ ಕಂಟಕ ಎದುರಾಗಿದೆ. ಜ.16ರ ಸಂಕ್ರಮಣದ ನಂತರ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಿಗಂದೂರು ವಿಷಯಕ್ಕೆ ಕೈ ಹಾಕಿದರೆ ಮುಖ್ಯಮಂತ್ರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಲಹೆ ನೀಡಿದ್ದೆ. ಮಾತು ಲೆಕ್ಕಿಸದೇ ಅವರು ಸಲಹಾ ಸಮಿತಿ ರಚನೆಗೆ ಸಮ್ಮತಿಸಿದ್ದರು. ಈಗ ಡಿನೋಟಿಫೈ ರೂಪದಲ್ಲಿ ಅವರಿಗೆ ಶಾಪ ತಟ್ಟಿದೆ. ಶೀಘ್ರ ತಮ್ಮ ಸ್ಥಾನ ತೊರೆಯಲಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭವಿಷ್ಯ ನುಡಿದರು. 

ಇಂತಹ ಆರೋಪಗಳು ಬಂದಾಗ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿದರೆ  ದಾಖಲೆಗಳನ್ನು ತಿದ್ದುವ ಸಾಧ್ಯತೆ ಇರುತ್ತದೆ. ರಾಜೀನಾಮೆ ಕೊಡುವಂತೆ ಅವರ ಪಕ್ಷದವರೇ ಒತ್ತಡ ಹಾಕಲಿದ್ದಾರೆ. ಕೆಳಗಿಳಿಸುವ ಸಂಚು ಅವರ ಪಕ್ಷದಲ್ಲೇ ನಡೆದಿದೆ. ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಯತ್ನಾಳ್ ಅವರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೊಸ ಪಕ್ಷ ಕಟ್ಟುವ ಸೂಚನೆಗಳು ಹೊರ ಬೀಳುತ್ತಿವೆ. ಸಂಕ್ರಮಣದ ನಂತರ ಹೊಸ ಸುದ್ದಿ ಜನರಿಗೆ ದೊರಕಲಿದೆ ಎಂದರು.

ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಮುಖ್ಯಮಂತ್ರಿಗೆ ನೆನಪಿನ ಶಕ್ತಿ ಇಲ್ಲವಾಗಿದೆ. ವಯಸ್ಸೂ ದಾಟಿದೆ. ಹಾಗಾಗಿ, ಅವರು ಸುಗಮ ಆಡಳಿತ ನಿರ್ವಹಣೆಯ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಅವರ ಪತನ ಖಚಿತ ಎಂದು ಕುಟುಕಿದರು.

ಹೊಸ ವರ್ಷದ ಆಚರಣೆ ರದ್ದು ಮಾಡುವ ನಿರ್ಧಾರದ ಹಿಂದೆ ಆರ್‌ಎಸ್‌ಎಸ್ ಅಜೆಂಡಾ ಇದೆ. ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲೇ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಆಗ ಯಾವ ನಿಯಮವೂ ಕಾಣಲಿಲ್ಲ. ಈಗ ಹೊಸ ವರ್ಷ ಆಚರಣೆಗೆ ಏಕೆ ವಿರೋಧ? ರಾಮ ಜಯಂತಿಗೆ ಸಮ್ಮತಿಸುವ ಬಿಜೆಪಿ ಮುಖಂಡರಿಗೆ ಕ್ರಿಸ್‌ಮಸ್‌, ಹೊಸವರ್ಷ ಏಕೆ ಅಪಥ್ಯ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಹುಲ್ತಿಕೊಪ್ಪ ಶ್ರೀಧರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು