ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಮಂದಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ

Last Updated 7 ಜನವರಿ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮಹೇಶ್‌ ಕಾಕಡೆ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಪ್ರೊ. ಸುಧೀರ್‌ ಕೃಷ್ಣಸ್ವಾಮಿ ಸೇರಿದಂತೆ ಆರು ಮಂದಿ ಸಾಧಕರಿಗೆ ಇನ್ಫೊಸಿಸ್‌ ಸೈನ್ಸ್‌ ಪೌಂಡೇಷನ್‌ನ 2022ನೇ ಸಾಲಿನ ಇನ್ಫೊಸಿಸ್‌ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.

ಮಹೇಶ್‌ ಕಾಕಡೆ ಅವರಿಗೆ ಬೀಜಗಣಿತ ಸಂಖ್ಯಾಸೂತ್ರಕ್ಕೆ ಸಂಬಂಧಿಸಿದ ಸಂಶೋಧನೆ ಹಾಗೂ ಸುಧೀರ್ ಅವರಿಗೆ ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆ ಕುರಿತ ಬರವಣಿಗೆಗಳಿಗಾಗಿ ಪ್ರಶಸ್ತಿ ನೀಡಲಾಯಿತು. ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ವಿಜ್ಞಾನ ವಿಭಾಗದಲ್ಲಿ ಖರಗ್‌ಪುರ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್‌ ಸುಮನ್‌ ಚಕ್ರವರ್ತಿ, ಜೀವವಿಜ್ಞಾನ ವಿಭಾಗದಲ್ಲಿ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ನ ನ್ಯೂರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ವಿದಿತಾ ವೈದ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭೌತವಿಜ್ಞಾನ ವಿಭಾಗದಲ್ಲಿ ಪುಣೆಯ ನ್ಯಾಷನಲ್‌ ಸೆಂಟರ್‌ ಫಾರ್‌ ರೇಡಿಯೊ ಆಸ್ಟ್ರಾನಮಿಯ ಪ್ರಾಧ್ಯಾಪಕ ನಿಸ್ಸಿಂ ಕಾನೇಕರ್‌ ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ ಯೇಲ್‌ ವಿಶ್ವವಿದ್ಯಾಲಯದ ಆರ್ಥಿಕ ಬೆಳವಣಿಗೆ ಕೇಂದ್ರದ ನಿರ್ದೇಶಕಿ ರೋಹಿಣಿ ‍ಪಾಂಡೆ ಅವರಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮೆರಿಕದ ಬರ್ಕ್ಲಿಯ ಸೈಮನ್ಸ್‌ ಇನ್‌ಸ್ಟಿಟ್ಯೂಟ್‌ ಫಾರ್‌ ದಿ ಥಿಯರಿ ಆಫ್‌ ಕಂಪ್ಯೂಟಿಂಗ್‌ನ ನಿರ್ದೇಶಕಿ ಪ್ರೊ. ಶಾಫಿ ಗೋಲ್ಡ್‌ವಾಸರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ‘ಕ್ರಿಪ್ಟೋಗ್ರಫಿ ಮತ್ತು ಮಷೀನ್‌ ಲರ್ನಿಂಗ್‌’ ಕುರಿತು ಉಪನ್ಯಾಸ ನೀಡಿದ ಶಾಫಿ, ‘ಈಗ ಖಾಸಗಿತನಕ್ಕೆ ಧಕ್ಕೆಯಾಗದಂತೆ ಮಾಹಿತಿಯನ್ನು ಸಂರಕ್ಷಿಸಿಟ್ಟುಕೊಳ್ಳುವುದೇ ದೊಡ್ಡ ಸವಾಲು. ವೈಯಕ್ತಿಕ ಮಾಹಿತಿಗಳ ಮೇಲೆ ನಾವು ಎಷ್ಟು ಹಿಡಿತ ಹೊಂದಿದ್ದೇವೆ ಎಂಬುದರ ಆಧಾರದಲ್ಲಿ ಇದು ನಿರ್ಧಾರವಾಗುತ್ತದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ಅಧ್ಯಕ್ಷ ಎಸ್‌. ಗೋಪಾಲಕೃಷ್ಣನ್‌, ‘ಮನುಕುಲದ ಒಳಿತಿಗೆ ಪೂರಕವಾದ ಸಂಶೋಧನೆಗಳನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಇನ್ಫೊಸಿಸ್‌ ಮಾಡುತ್ತಿದೆ’ ಎಂದು ಹೇಳಿದರು.

ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿ ಎನ್‌.ಆರ್‌. ನಾರಾಯಣಮೂರ್ತಿ ಅವರು ಪ್ರೊ. ಶಾಫಿ ಗೋಲ್ಡ್‌ವಾಸರ್‌ ಅವರನ್ನು ಪರಿಚಯಿಸಿದರು. ಫೌಂಡೇಷನ್‌ನ ಟ್ರಸ್ಟಿ ಮತ್ತು ಇನ್ಫೊಸಿಸ್‌ ಲಿಮಿಟೆಡ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಲ್‌ ಪಾರೇಖ್‌, ಆರು ವಿಭಾಗಗಳ ಪ್ರಶಸ್ತಿ ಆಯ್ಕೆ ಸಮಿತಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಒಂದು ಲಕ್ಷ ಡಾಲರ್‌ ಮೊತ್ತ

ಇನ್ಫೊಸಿಸ್‌ ಪ್ರಶಸ್ತಿ ಪುರಸ್ಕೃತರಿಗೆ ಚಿನ್ನದ ಪದ, ಪ್ರಶಸ್ತಿ ಪತ್ರ ಮತ್ತು ಒಂದು ಲಕ್ಷ ಡಾಲರ್‌ ಮೊತ್ತವನ್ನು ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT