ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸೋಮಶೇಖರ್‌ ಮಗನಿಗೆ ಬ್ಲ್ಯಾಕ್‌ಮೇಲ್‌: ಮೂವರು ಸಿಸಿಬಿ ವಶಕ್ಕೆ

Last Updated 11 ಜನವರಿ 2022, 4:20 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಪುತ್ರ ನಿಶಾಂತ್‌ ಅವರನ್ನು ಬೆದರಿಸಿ ₹1 ಕೋಟಿ ಮೊತ್ತಕ್ಕೆ ಬೇಡಿಕೆ ಇಟ್ಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ರಾಹುಲ್‌ ಭಟ್‌ನನ್ನು (31) ಆರ್‌.ಟಿ.ನಗರದಲ್ಲಿ ಬಂಧಿಸಲಾಗಿತ್ತು. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಮಗಳಿಗೆ ತನಿಖೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ನಿಶಾಂತ್‌ಗೆ ಕಳುಹಿಸಲಾಗಿದೆ ಎನ್ನಲಾದ ಅಶ್ಲೀಲ ವಿಡಿಯೊ ಹಾಗೂ ರಾಹುಲ್‌ನಿಂದ ಜಪ್ತಿ ಮಾಡಿರುವ ಮೂರು ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ರಾಹುಲ್‌ 2021ರ ಡಿಸೆಂಬರ್‌ 20ರಂದು ದುಬೈಗೆ ಪ್ರಯಾಣ ಕೈಗೊಂಡಿದ್ದ. ಆ ಸಮಯದಲ್ಲೇ ನಿಶಾಂತ್‌ಗೆ ಅಶ್ಲೀಲ ವಿಡಿಯೊ ಕಳುಹಿಸಿರುವ ಸಾಧ್ಯತೆ ಇದೆ. ಆ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ರಾಹುಲ್‌,ಶಾಸಕರ ಮಗಳು ಹಾಗೂ ಶಂಕಿತ ಇತರ ಆರೋಪಿಗಳೆಲ್ಲಾ ಪರಿಚಿತರು. ಹಿಂದೆ ಜೊತೆಯಾಗಿಯೇ ವ್ಯಾಸಂಗ ಮಾಡಿದ್ದರು. ಅವರ ನಡುವೆ ಯಾವ ವಿಚಾರಕ್ಕೆ ಮನಸ್ತಾಪ ಬಂದಿದೆಯೊ ಗೊತ್ತಿಲ್ಲ. ಈ ವಿಡಿಯೊವನ್ನು ನಿಶಾಂತ್‌ಗೆ ಏಕೆ ಕಳುಹಿಸಿದ್ದಾರೆ ಎಂಬುದೂ ತಿಳಿದಿಲ್ಲ. ಈ ಕುರಿತು ರಾಹುಲ್‌ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಪ್ರಕರಣವೊಂದರ ತನಿಖೆ ಕೈಗೊಂಡಾಗ ಅನುಮಾನ ಬಂದವರನ್ನೆಲ್ಲಾ ಕರೆದು ವಿಚಾರಣೆ ನಡೆಸುವುದು ಸಾಮಾನ್ಯ. ಅದೇ ರೀತಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರ ಹೇಳಿಕೆಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಂಟಿ ಪೊಲೀಸ್‌ ಕಮಿಷನರ್‌ ರಮಣ್‌ ಗುಪ್ತ ಹೇಳಿದ್ದಾರೆ.

‘ನಿಶಾಂತ್‌ಗೆ ಕಳುಹಿಸಲಾಗಿರುವ ವಿಡಿಯೊದಲ್ಲಿರುವ ಯುವತಿಯನ್ನು ಗುರುತಿಸಲಾಗಿದೆ. ಆಕೆ ರೂಪದರ್ಶಿ ಎಂಬುದು ಗೊತ್ತಾಗಿದೆ. ವಿಚಾರಣೆಗೆ ಹಾಜರಾಗುವಂತೆ ಆಕೆಗೂ ಶೀಘ್ರವೇ ಸಮನ್ಸ್‌ ನೀಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT