ಗುರುವಾರ , ಏಪ್ರಿಲ್ 22, 2021
29 °C

ಬಾಹ್ಯಾಕಾಶ ಸಂಬಂಧಿತ ಚಟುವಟಿಕೆ: ಸ್ಪೇಸ್ ಇಂಡಿಯಾದಿಂದ ₹ 10 ಸಾವಿರ ಕೋಟಿ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಸ್ರೊದ ವಾಣಿಜ್ಯ ಅಂಗ ಸಂಸ್ಥೆಯಾದ ‘ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌’ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಸಂಬಂಧಿತ ಉಡಾವಣೆ, ಕಾರ್ಯಚರಣೆ, ನಿರ್ವಹಣೆ ಮತ್ತು ಸೇವಾ ಚಟುವಟಿಕೆಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ ₹ 10,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ.

ಮುಂದಿನ ವರ್ಷದಿಂದ ಐದು ವರ್ಷಗಳವರೆಗೆ ತಲಾ ₹ 2,000 ಕೋಟಿ ಹೂಡಿಕೆ ಮಾಡಲಾಗುವುದು. ಇದಕ್ಕಾಗಿ ಷೇರು ಮಾರುಕಟ್ಟೆಯ ಮೂಲಕ ಹಣ ಸಂಗ್ರಹಿಸುವ ಉದ್ದೇಶವಿದೆ ಎಂದು ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ.ನಾರಾಯಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂತರರಾಷ್ಟ್ರೀಯ ಉಪಗ್ರಹಗಳ ಉಡಾವಣೆಗೆ ಬೇಡಿಕೆ ಹೆಚ್ಚುತ್ತಿದ್ದು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ತೂಕದ (1000 ಕೆ.ಜಿ ಒಳಗಿನದು) ಉಪಗ್ರಹಗಳ ಉಡಾವಣೆಗೆ ಭಾರತವೇ ನೆಚ್ಚಿನ ತಾಣವಾಗಿದೆ. ಇತರ ದೇಶಗಳ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಸಿದರೆ ವೆಚ್ಚ ಅತಿ ಕಡಿಮೆ ಗುಣಮಟ್ಟ ಅತ್ಯುತ್ತಮವಾದುದು ’ ಎಂದು ಅವರು ಹೇಳಿದರು.

2 ವರ್ಷಗಳಲ್ಲಿ 4 ಅಂತರರಾಷ್ಟ್ರೀಯ ಉಡಾವಣೆ: ಮುಂಬರುವ ಎರಡು ವರ್ಷಗಳಲ್ಲಿ ಎನ್‌ಎಸ್‌ಐಆಲ್‌ ನಾಲ್ಕು ಮಹತ್ವದ ಪಿಎಸ್‌ಎಲ್‌ವಿ ಉಡಾವಣಾ ಸೇವೆಯ ಜವಾಬ್ದಾರಿಯನ್ನು ಹೊತ್ತಿದೆ. 2022 ರಲ್ಲಿ ಎರಡು ಸಮರ್ಪಿತ ಉಪಗ್ರಹಗಳ ಉಡಾವಣೆ ನಡೆಯಲಿದ್ದು, ಅವು ಯಾವ ದೇಶದ ಉಪಗ್ರಹಗಳು ಎಂಬುದನ್ನು ಬಹಿರಂಗಗೊಳಿಸಲು ನಾರಾಯಣನ್‌ ಒಪ್ಪಲಿಲ್ಲ.

ಹೊಸ ಬಾಹ್ಯಾಕಾಶ ನೀತಿಯು ದೇಶದ ಬಾಹ್ಯಾಕಾಶ ವಿಜ್ಞಾನವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲಿದೆ. ಈ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗುವುದರ ಜತೆಗೆ ವಿಶ್ವದಲ್ಲಿ ಬಾಹ್ಯಾಕಾಶ ಸೇವೆಯ ಪ್ರಮುಖ ದೇಶವಾಗಿ ಹೊರ ಹೊಮ್ಮಲಿದೆ. ಮುಖ್ಯವಾಗಿ, ಉಡಾವಣೆಯ ಸೇವೆಯ ಜತೆಗೆ ಬೇಡಿಕೆ ಆಧರಿಸಿ ಬಾಹ್ಯಾಕಾಶ ಸೇವೆಗಳನ್ನು ಒದಗಿಸಲಿದ್ದೇವೆ. ಸದ್ಯಕ್ಕೆ ಪೂರೈಕೆ ಆಧಾರಿತ ಸೇವೆ ನೀಡಲಾಗುತ್ತಿದೆ. ಹೊಸ ನೀತಿಗೆ ಅನುಗುಣವಾಗಿ ಪರಿವರ್ತನೆ ತರಲು ಹಲವು ಬಳಕೆದಾರರ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಎನ್‌ಎಸ್‌ಐಎಲ್‌ ಮೂಲಕವೇ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆಗೆ ಸಂಬಂಧಿಸಿದಂತೆ ಬಳಕೆದಾರರ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗುವುದು. ಆರಂಭದಲ್ಲಿ ದೂರಸಂಪರ್ಕ ವಲಯದ ಗ್ರಾಹಕರಿಗೆ ಸೇವೆ ಒದಗಿಸಲಾಗುವುದು ಎಂದು ವಿವರಿಸಿದರು.

ಹೊಸ ಬಾಹ್ಯಾಕಾಶ ಸುಧಾರಣಾ ನೀತಿಯ ಭಾಗವಾಗಿ ಇತರ ದೇಶಗಳು ಉಪಗ್ರಹ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟರೆ, ಉಪಗ್ರಹಗಳನ್ನೂ ನಿರ್ಮಿಸಿಕೊಡಲಿದ್ದೇವೆ. ಹೆಚ್ಚಿನ ದೇಶಗಳಿಂದ ಉಪಗ್ರಹ ನಿರ್ಮಾಣಕ್ಕಾಗಿ ಹೆಚ್ಚಿನ ಬೇಡಿಕೆ ಸಿಗಲಿದೆ ಎಂಬ ವಿಶ್ವಾಸವಿದೆ. ಆದರೆ, ಅದಕ್ಕೂ ಮೊದಲು ದೇಶೀ ಮಾರುಕಟ್ಟೆಯಲ್ಲಿ ಪೂರೈಕೆ ಆಧಾರಿತ ಸೇವೆಯನ್ನು ಕೈಬಿಟ್ಟು ಬೇಡಿಕೆ ಆಧಾರಿತ ಸೇವೆಗೆ ಹೊರಳಲು ಎನ್‌ಎಸ್‌ಐಎಲ್‌ ತನ್ನ ಗಮನ ಕೇಂದ್ರೀಕರಿಸಲಿದೆ ಎಂದು ನಾರಾಯಣನ್‌ ತಿಳಿಸಿದರು.

ಪಿಎಸ್‌ಎಲ್‌ವಿ(ಪೋಲಾರ್‌ ಸ್ಯಾಟಲೈಟ್ ಲಾಂಚ್‌ ವೆಹಿಕಲ್) ಉಡಾವಣೆ ವಾಹನದ ನಿರ್ಮಾಣಕ್ಕೆ ಭಾರತೀಯ ಕೈಗಾರಿಕಾ ಪಾಲುದಾರರನ್ನು ಗುರುತಿಸುವ ಪ್ರಯತ್ನ ನಡೆದಿದೆ. ಮುಂದಿನ ಆರರಿಂದ ಎಂಟು ತಿಂಗಳುಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಶೇ 30 ರಷ್ಟು ಬೆಳವಣಿಗೆ
‘ಎನ್‌ಎಸ್‌ಐಎಲ್‌ ಮೊದಲ ವರ್ಷ ₹ 300 ಕೋಟಿ ಆದಾಯ ಗಳಿಸಿತ್ತು. 2020–21 ನೇ ಸಾಲಿನಲ್ಲಿ ₹ 400 ಕೋಟಿ ಆದಾಯ ಗಳಿಸಿದೆ. ಶೇ 30 ರಷ್ಟು ಬೆಳವಣಿಗೆ ಇದೆ. ಮುಂದಿನ ದಿನಗಳಲ್ಲಿ ಇಸ್ರೊ ಉಪಗ್ರಹಗಳ ಸೇವೆಯನ್ನು ನಾವೇ ನಿರ್ವಹಿಸುವುದಕ್ಕೆ ಅಗತ್ಯ ತಯಾರಿ ನಡೆಸಿದ್ದೇವೆ. ಈ ಸಂಬಂಧ ಇಸ್ರೊ ಜತೆ ಮಾತುಕತೆಗಳು ನಡೆದಿವೆ’ ಎಂದು ನಾರಾಯಣನ್‌ ತಿಳಿಸಿದರು.

ಇಲ್ಲಿಯರವರೆಗೆ 342 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಶೇ 75 ರಿಂದ ಶೇ 80 ರಷ್ಟು ಉಪಗ್ರಹಗಳು ಅಮೆರಿಕದ್ದು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು