ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ಕ್ಕೆ ಕರ್ನಾಟಕ ಬಂದ್‌ಗೆ ರಾಜ್ಯ ರೈತ ಸಂಘ ಕರೆ

Last Updated 23 ಸೆಪ್ಟೆಂಬರ್ 2020, 21:56 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಹೊರಡಿಸಿರುವ ಸುಗ್ರೀವಾಜ್ಞೆ ಮತ್ತು ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಇದೇ 28ರ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

‘ದಲಿತ, ಕಾರ್ಮಿಕ ಹಾಗೂ ರೈತ ಸಂಘಗಳು ಸೇರಿದಂತೆ 32ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ರೈತ ಮತ್ತು ಕಾರ್ಮಿಕ ವಿರೋಧಿಯಾಗಿರುವ ಈ ಸುಗ್ರೀವಾಜ್ಞೆಗಳನ್ನು, ಈಗಾಗಲೇ ಮಂಡಿಸಿರುವ ಮಸೂದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಲಾಗುವುದು’ ಎಂದು ಐಕ್ಯ ಹೋರಾಟ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯ ಗುರುಪ್ರಸಾದ್ ಕೆರೆಗೋಡು ತಿಳಿಸಿದರು.

‘28ರ ಬಂದ್‌ಗೂ ಮೊದಲು, 25ಕ್ಕೆ ರಾಜ್ಯದಾದ್ಯಂತ ರಸ್ತೆ ತಡೆ ನಡೆಸಲಾಗುವುದು. ಅಂದು, ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ವಿವಿಧ ಸಂಘಟನೆಗಳ ಐದು ಸಾವಿರಕ್ಕೂ ಹೆಚ್ಚು ಜನ ಸೇರಿ ಬೃಹತ್‌ ಪ್ರತಿಭಟನೆ ಮಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘26ಕ್ಕೆ ಅಧಿವೇಶನ ಮುಕ್ತಾಯವಾಗುವ ಕಾರಣದಿಂದ 25ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಂತರವೂ ಈ ಸುಗ್ರೀವಾಜ್ಞೆಗಳನ್ನು ವಾಪಸ್‌ ಪಡೆಯದಿದ್ದಲ್ಲಿ 28ಕ್ಕೆ ರಾಜ್ಯ ಬಂದ್ ಮಾಡುತ್ತೇವೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

‘ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿ ತೀರ್ಮಾನ ತೆಗೆದುಕೊಳ್ಳುವ ಉದ್ದೇಶದಿಂದ ಸುಮ್ಮನಿದ್ದೆವು. ಈಗ, ಎಪಿಎಂಸಿ ಮಸೂದೆಯನ್ನು ಮಂಡಿಸಿರುವುದರಿಂದ ಹೋರಾಟ ಅನಿವಾರ್ಯವಾಗಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಬಂದ್‌ಗೆ ಕರೆ ನೀಡಬೇಕೆ, ಬೇಡವೇ ಎಂಬುದರ ಬಗ್ಗೆ ಕೆಲವು ರೈತ ಮುಖಂಡರಲ್ಲಿ ಬುಧವಾರ ಸಂಜೆಯವರೆಗೂ ಗೊಂದಲವಿತ್ತು. ವಿಧಾನಸಭೆಯಲ್ಲಿ ಎಪಿಎಂಸಿ ಮಸೂದೆ ಮಂಡನೆಯಾಗುತ್ತಿದ್ದಂತೆ, 28ರ ಬಂದ್‌ ಕುರಿತು ಒಮ್ಮತದ ನಿರ್ಧಾರ ಕೈಗೊಂಡರು.

ರೈತ‌ ಮುಖಂಡರಲ್ಲಿ ಮೂಡದ ಒಮ್ಮತ

ಸೆ. 25ಕ್ಕೆ ನಡೆಸುವ ಪ್ರತಿಭಟನೆಯ ಸ್ವರೂಪದ‌ ಬಗ್ಗೆ ರೈತ ಮುಖಂಡರಲ್ಲಿಯೇ ಗೊಂದಲ ಉಂಟಾಗಿತ್ತು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, 25ಕ್ಕೆ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, 'ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ 25ಕ್ಕೆ ಪ್ರತಿಭಟನೆ ನಡೆಸಲಾಗುವುದು. ರಸ್ತೆ ತಡೆ ನಡೆಸಿ, ಜೈಲ್ ಭರೋ ಚಳವಳಿ ನಡೆಯುತ್ತದೆ' ಎಂದು ಹೇಳಿದ್ದರು.

'26ಕ್ಕೆ ಅಧಿವೇಶನ ಮುಗಿಯಲಿದೆ. ಹೀಗಾಗಿ 25ಕ್ಕೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. 28ರ ರಾಜ್ಯ ಬಂದ್ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ'ಎಂದಿದ್ದರು.

ಕೊನೆಗೂ ಮೂಡಿದ ಒಮ್ಮತ

ಇದೀಗ28ಕ್ಕೆ ಕರ್ನಾಟಕ ಬಂದ್ ಮಾಡಲು ಎಲ್ಲ ರೈತ ಮುಖಂಡರ‌ ಒಮ್ಮತ ಸೂಚಿಸಿದ್ದಾರೆ.ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 32ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT