ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮಸೂದೆಗಳಿಂದ ರೈತರಿಗೆ ಭಾರಿ ಅನುಕೂಲ: ಅಖಿಲ ಭಾರತ ರೈತ ಸಂಘಗಳ ಒಕ್ಕೂಟ

Last Updated 23 ಸೆಪ್ಟೆಂಬರ್ 2020, 7:26 IST
ಅಕ್ಷರ ಗಾತ್ರ

ನವದೆಹಲಿ: ಹೊಸದಾಗಿ ಅನುಮೋದನೆ ಪಡೆಯಲಾಗಿರುವ ಕೃಷಿ ಮಸೂದೆಗಳಿಂದ ರೈತರಿಗೆ ಭಾರಿ ಅನುಕೂಲವಿದೆ ಎಂದು ಅಖಿಲ ಭಾರತ ರೈತ ಸಂಘಗಳ ಒಕ್ಕೂಟ (ಎಫ್‌ಎಐಎಫ್‌ಎ) ತಿಳಿಸಿದೆ.

ರೈತರು ರಾಜ್ಯದಾದ್ಯಂತ, ರಾಜ್ಯದ ಗಡಿಗಳನ್ನು ಮೀರಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಮಸೂದೆಗಳಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ತಮ್ಮ ಉತ್ಪನ್ನಗಳಿಗೆ ತಾವೇ ಮಾರಾಟಗಾರರಾಗಲು ರೈತರಿಗೆ ಅವಕಾಶವಿದೆ. ಆ ಮೂಲಕ ಅವರ ಸಬಲೀಕರಣಕ್ಕೆ ಯತ್ನಿಸಲಾಗಿದೆ. ರೈತರ ಸಮೃದ್ಧಿ ಹಾಗೂ ಆದಾಯ ದ್ವಿಗುಣಗೊಳಿಸುವ ವಿಚಾರವನ್ನು ಮಸೂದೆಗಳು ಖಾತರಿಪಡಿಸಲಿವೆ. ಹೊಸ ಮಸೂದೆಗಳನ್ನು ಮಂಡಿಸಿರುವ ನರೇಂದ್ರ ಮೋದಿ ಸರ್ಕಾರದ ನಡೆ ಸ್ವಾಗತಾರ್ಹ ಎಂದು ಒಕ್ಕೂಟ ಹೇಳಿದೆ.

ಅಖಿಲ ಭಾರತ ರೈತ ಸಂಘಗಳ ಒಕ್ಕೂಟವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌ನ ರೈತರು, ವಾಣಿಜ್ಯ ಬೆಳೆಗಾರರು ಮತ್ತು ಕೃಷಿ ಕಾರ್ಮಿಕರ ಸಂಘಗಳನ್ನು ಪ್ರತಿನಿಧಿಸುತ್ತದೆ.

‘ದೂರದೃಷ್ಟಿಯ ಈ ಎರಡು ಮಸೂದೆಗಳು ರೈತ ಸಮುದಾಯಕ್ಕೆ ಸುಸ್ಥಿರ ಮತ್ತು ಲಾಭದಾಯಕ ಭವಿಷ್ಯವನ್ನು ಖಾತರಿಪಡಿಸುತ್ತದೆ’ ಎಂದು ಒಕ್ಕೂಟದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ರೈತರ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ’ ಮತ್ತು ‘ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆ’ಗಳಿಗೆ ಸಂಸತ್‌ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆಯೇ ಅನುಮೋದನೆ ಪಡೆಯಲಾಗಿದೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಹಾಗೂ ಎಡಪಕ್ಷಗಳು ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

‘ರೈತರಿಗೆ ಉತ್ತಮ ಆದಾಯ ದೊರೆಯಲಿದೆ’

‘ಹೊಸ ಮಸೂದೆಗಳಿಂದ ರೈತರು ರಾಜ್ಯದಾದ್ಯಂತ, ಹೊರ ರಾಜ್ಯಗಳಲ್ಲಿ ತಮ್ಮಿಷ್ಟದಂತೆ ಕೃಷಿ ಉತ್ಪನ್ನಗಳ ಖರೀದಿ ಹಾಗೂ ಮಾರಾಟ ಮಾಡಲು ಅವಕಾಶ ದೊರೆಯಲಿದೆ. ಇದು ಸರ್ಕಾರದ ಸಮಯೋಚಿತ ನಿರ್ಧಾರ. ರೈತರಿಗೆ ಉತ್ತಮ ಆದಾಯ ದೊರೆಯಲಿದ್ದು, ಮಾರಾಟ ಮಾಡುವ ಕೃಷಿ ಉತ್ಪನ್ನಗಳ ಬೆಲೆ ಮೇಲೆ ಅವರದ್ದೇ ನಿಯಂತ್ರಣ ಇರಲಿದೆ. ಭಾರತದ ಕೃಷಿ ನೇತೃತ್ವದ ಅಭಿವೃದ್ಧಿ ಕಾರ್ಯಸೂಚಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಮಸೂದೆಗಳು ದೂರದೃಷ್ಟಿಯಿಂದ ಕೂಡಿದ್ದಾಗಿವೆ’ ಎಂದು ಅಖಿಲ ಭಾರತ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ವಿ.ಜವರೇಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT