ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಚುನಾವಣೆ ಬಳಿಕ ರಾಜ್ಯ ಪ್ರವಾಸ: ಬಿ.ಎಸ್‌.ಯಡಿಯೂರಪ್ಪ

ವಿವಿಧ ಜಿಲ್ಲೆಗಳಲ್ಲಿ ಬಿಜೆಪಿಯ ಜನಸ್ವರಾಜ್ ಸಮಾವೇಶ
Last Updated 19 ನವೆಂಬರ್ 2021, 19:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಧಾನಪರಿಷತ್‌ ಚುನಾವಣೆ ಬಳಿಕ ರಾಜ್ಯದಾದ್ಯಂತ ಓಡಾಡಿ ಪಕ್ಷವನ್ನು ಮರುಸಂಘಟನೆ ಮಾಡುತ್ತೇನೆ. ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಹೇಳಿದರು.

ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ವರಾಜ್ ಸಮಾವೇಶ ಉದ್ಘಾಟಿಸಿದ ಅವರು ‘ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಬಗ್ಗೆ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಕಡಿಮೆಯಾಗುತ್ತಿದೆ. ಜನರಿಂದ ಆಯ್ಕೆಯಾಗಿ ಬಂದವರು ಜನರ ನಡುವೆ ಇದ್ದರೆ ಮಾತ್ರ ಅವರಿಗೆ ಗೌರವ, ಬೆಲೆ ಸಿಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಕಿವಿಮಾತು ಹೇಳಿದರು.

‘ಹಣಬಲ, ತೋಳ್ಬಲ ಹಾಗೂ ಜಾತಿಯ ವಿಷಬೀಜವನ್ನು ಬಿತ್ತಿ ವಾಮಮಾರ್ಗದಲ್ಲಿ ಕಾಂಗ್ರೆಸ್‌ ಉಪಚುನಾವಣೆ ಗೆದ್ದಿದೆ. ಇದು ಸಾರ್ವತ್ರಿಕ ಚುನಾವಣೆಯ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಮುಂದಿನ 20 ವರ್ಷ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರಲಿದೆ’ ಎಂದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ‘ಪರಿಶಿಷ್ಟರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುವುದಿಲ್ಲ. ನಮ್ಮ ಪಕ್ಷ ಪರಿಶಿಷ್ಟರಿಗೆ ಅತ್ಯುನ್ನತ ಸ್ಥಾನಮಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ವರ್ಗಗಳ ಜನಪ್ರತಿನಿಧಿಗಳಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದರು.

‘ಉಪಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಪಡೆದಿದ್ದಕ್ಕೆ ಕಾಂಗ್ರೆಸ್‌ ಅಹಂಕಾರದಿಂದ ಬೀಗುತ್ತಿದೆ. ಅವರಿಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ತಕ್ಕ ತಿರುಗೇಟು ನೀಡುತ್ತೇವೆ. 15ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ, ಸಚಿವರಾದ ಗೋವಿಂದ ಕಾರಜೋಳ, ಶಂಕರಪಾಟೀಲ ಮುನೇನಕೊಪ್ಪ, ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ, ಶಾಸಕರಾದ ಸಿ.ಎಂ. ನಿಂಬಣ್ಣನವರ, ಅಮೃತ ದೇಸಾಯಿ ಇನ್ನಿತರರಿದ್ದರು.

ಉಡುಪಿ ವರದಿ: ಉಡುಪಿಯಲ್ಲಿ ಜನಸ್ವರಾಜ್‌ ಸಮಾವೇಶದಲ್ಲಿಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿ
ಸಿದ್ದರು. ಸಭೆಯಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸಪೂಜಾರಿ, ‘ಚುನಾವಣೆ
ಗಳಿಗೂ, ಕೃಷಿ ಕಾಯ್ದೆ ಹಿಂಪಡೆದಿರುವುದಕ್ಕೂ ಸಂಬಂಧವಿಲ್ಲ’ ಎಂದರು.

ಇಂಧನ ಸಚಿವ ಸುನಿಲ್ ಕುಮಾರ್,ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT