ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ತಡೆ ಕಾನೂನು ತಿದ್ದುಪಡಿಗೆ ಶಿಫಾರಸು: ಮಾಧುಸ್ವಾಮಿ ಭರವಸೆ

ವಿಧಾನ ಪರಿಷತ್‌ನಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ
Last Updated 24 ಸೆಪ್ಟೆಂಬರ್ 2021, 16:54 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ತಡೆಯಲು ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ ರಾಜ್ಯ ಕಾನೂನು ಆಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆಗೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಉತ್ತರ ನೀಡಿದ ಅವರು, ‘ಅತ್ಯಾಚಾರ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಪೂರಕವಾಗಿ 2006ರಲ್ಲಿ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳಿಗೆ ಹಲವು ತಿದ್ದುಪಡಿ ತರಲಾಗಿತ್ತು. ಇನ್ನಷ್ಟು ತಿದ್ದುಪಡಿಗಳನ್ನು ತರುವಂತೆ ಶಿಫಾರಸು ಮಾಡಲಾಗುವುದು’ ಎಂದರು.

ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಕೇಂದ್ರ ಸರ್ಕಾರವೇ ಈ ಕೆಲಸ ಮಾಡಬೇಕು. ಅದಕ್ಕೆ ಪೂರಕವಾಗಿ ಕಾನೂನು ಆಯೋಗದ ಮೂಲಕ ಶಿಫಾರಸುಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರದ ಸಹಮತ ಇದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಭವಿಷ್ಯ ಇರುವುದಿಲ್ಲ ಎಂಬ ಸಂದೇಶ ಕಾನೂನಿನ ಮೂಲಕವೇ ರವಾನೆಯಾಗಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಕೆಲಸ ಮಾಡಲಿದೆ ಎಂದರು.

ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾ ತಂಡದ ಪರ ಮಹಿಳಾ ವಕೀಲರನ್ನೇ ನೇಮಿಸಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗೂ ಹೆಚ್ಚಾಗಿ ಮಹಿಳಾ ಪೊಲೀಸ್‌ ಅಧಿಕಾರಿಗಳನ್ನೇ ನಿಯೋಜಿಸಲಾಗುತ್ತಿದೆ ಎಂದು ಮಾಧುಸ್ವಾಮಿ ಹೇಳಿದರು.

ಕಠಿಣ ಶಿಕ್ಷೆ ಆಗಲೇಬೇಕು: ಬಿಜೆಪಿಯ ಭಾರತಿ ಶೆಟ್ಟಿ ಮಾತನಾಡಿ, ‘ಬೇರೆ ಎಲ್ಲ ವಿಚಾರಗಳಲ್ಲೂ ನಾವು ಬೇಕಾದಾಗ ಕಾನೂನು ತಿದ್ದುಪಡಿ ಮಾಡುತ್ತೇವೆ. ಅತ್ಯಾಚಾರ, ದೌರ್ಜನ್ಯದ ವಿಚಾರದಲ್ಲಿ ಏಕೆ ಆಗುವುದಿಲ್ಲ? ಏಕಾಂತ ವಾಸ, ಮರಣ ದಂಡನೆಗೆ ಪೂರಕವಾಗಿ ಕಾನೂನು ತಿದ್ದುಡಿ ಮಾಡಲೇಬೇಕು’ ಎಂದು ಆಗ್ರಹಿಸಿದರು.

‘ಅಭಿಯೋಜನಾ ನಿರ್ದೇಶನಾಲಯವನ್ನು ಪೊಲೀಸ್‌ ಇಲಾಖೆಯ ಬದಲಿಗೆ ಕಾನೂನು ಇಲಾಖೆ ವ್ಯಾಪ್ತಿಗೆ ತರಬೇಕು’ ಎಂದು ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ ಸಲಹೆ ನೀಡಿದರು.

‘ಪೊಲೀಸರಿಂದ ಲೋಪವಾಗಿಲ್ಲ’

‘ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಕೇಂದ್ರ ಸರ್ಕಾರ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಓಪಿ) ಪ್ರಕಾರವೇ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಪ್ರದೇಶದ ವ್ಯಾಪ್ತಿಯ ಬದಲು ಬೇರೆ ಠಾಣೆಗೆ ಆಸ್ಪತ್ರೆಯಿಂದ ಸಂದೇಶ ರವಾನೆಯಾಗಿತ್ತು. ಇದರಿಂದಾಗಿ ಎಫ್‌ಐಆರ್‌ ದಾಖಲಿಸುವುದು ತುಸು ವಿಳಂಬವಾಗಿತ್ತು’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

‘ಮೈಸೂರು ಪೊಲೀಸರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಸಂತ್ರಸ್ತೆಯನ್ನು ಮನವೊಲಿಸಿ, ಕರೆತಂದು ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದಾರೆ. ಎಲ್ಲ ಆರೋಪಿಗಳನ್ನೂ ಬಂಧಿಸಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬುದು ಸರ್ಕಾರದ ನಿಲುವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT