ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳೇ ಅಂಧಕಾರದಲ್ಲಿವೆ: ಅರುಣ್ ಸಿಂಗ್ ಲೇವಡಿ

ಗದಗ: ‘ಕಾಂಗ್ರೆಸ್ ಸರ್ಕಾರ ಇದ್ದ ರಾಜ್ಯಗಳು ಅಂಧಕಾರದಲ್ಲಿ ಮುಳುಗಿವೆ. ಮೊದಲು ಆ ರಾಜ್ಯಗಳಲ್ಲಿ ಎಷ್ಟು ಗಂಟೆ ವಿದ್ಯುತ್ ಕೊಡುತ್ತಾರೆ ಎಂಬುದನ್ನು ರಾಜ್ಯದ ಕಾಂಗ್ರೆಸ್ ಮುಖಂಡರು ತಿಳಿದುಕೊಳ್ಳಲಿ. ರಾಜಸ್ಥಾನದಲ್ಲಿ ರಾತ್ರಿ ವೇಳೆ ಮಾತ್ರ ವಿದ್ಯುತ್ ಇರುತ್ತದೆ. ಪರೀಕ್ಷೆ ಬರೆಯೋ ವಿದ್ಯಾರ್ಥಿಗಳು ಓದಲಿಕ್ಕೆ ಅನುಕೂಲ ಆಗುವಷ್ಟು ವಿದ್ಯುತ್ ಅನ್ನೂ ನೀಡುತ್ತಿಲ್ಲ’ ಎಂದು ಭಾರತೀಯ ಜನತಾ ಪಕ್ಷದ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಕಿಡಿಕಾರಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್ ಭರವಸೆಗೆ ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
‘ರಾಜಸ್ಥಾನ ಹಾಗೂ ಚತ್ತೀಸ್‌ಗಡದ ಪರಿಸ್ಥಿತಿ ನೋಡಿದರೆ ಹೆದರಿಕೆ ಬರುತ್ತದೆ. ಇಂತಹವರು ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಅಂಧಕಾರಕ್ಕೆ ದೂಡುತ್ತಾರೆ. 10 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ’ ಎಂದು ಹರಿಹಾಯ್ದರು.
‘ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಕಾಮನ್ ಮ್ಯಾನ್ ಸಿಎಂ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. 40 ಪರ್ಸೆಂಟ್ ಆರೋಪ ಕಾಂಗ್ರೆಸ್‌ನ ಸೃಷ್ಟಿ. ರಾಜ್ಯದ ಮುಖ್ಯಮಂತ್ರಿಗೆ ಅವಮಾನಿಸುವುದು ರಾಜ್ಯದ ಜನರಿಗೆ ಅವಮಾನಿಸಿದಂತೆ. ರಾಜ್ಯದ ಜನರು ಸಿಎಂ ಪರವಾಗಿದ್ದಾರೆ. ನರೇಂದ್ರ ಮೋದಿ, ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದ್ದೇವೆ’ ಎಂದು ತಿಳಿಸಿದರು.
‘ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ರೂಪದಲ್ಲಿ ಉಪಯೋಗಿಸಿಕೊಳ್ಳಲು ಯೋಚಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಉಳಿದಿಲ್ಲ. ಈಗಾಗಿ ಸುಳ್ಳುಗಳನ್ನು ಹೇಳಿಕೊಂಡು ಅಧಿಕಾರಕ್ಕೆ ಬರುವ ಯೋಜನೆ ರೂಪಿಸಿಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಅಂತರದಲ್ಲಿ ಸೋಲು ಕಾಣಲಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.