ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಾಡಿನ ಜನರಿಗೆ ಕಾಡುವ ರೆಸಾರ್ಟ್‌ಗಳು

ಕಣಕುಂಬಿ, ಜಾಂಬೋಟಿ ಅರಣ್ಯ ಪ್ರದೇಶದಲ್ಲಿವೆ 60ಕ್ಕೂ ಹೆಚ್ಚು ವಾಣಿಜ್ಯ ಸ್ಥಳಗಳು
Last Updated 30 ನವೆಂಬರ್ 2022, 4:03 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಹಾಗೂ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್‌, ಹೋಟೆಲ್‌, ಧಾಬಾಗಳ ಹಾವಳಿ ಹೆಚ್ಚಾಗಿದ್ದು ವನ ಹಾಗೂ ವನ್ಯಜೀವಿಗಳು ಆತಂಕಕ್ಕೆ ಸಿಲುಕಿವೆ.

ಬೆಳಗಾವಿ– ಚೋರ್ಲಾ ರಾಜ್ಯ ಹೆದ್ದಾರಿಗುಂಟ ಸಾಗಿದರೆ ಗೋವಾ ಗಡಿ ಮುಟ್ಟುವಷ್ಟರಲ್ಲಿ 60ಕ್ಕೂ ಹೆಚ್ಚು ಹೋಟೆಲ್‌, ರೆಸಾರ್ಟ್‌ಗಳು ಸಿಗುತ್ತವೆ. ಮೋಜಿಗಾಗಿ, ಗೋವಾ ಪ್ರವಾಸಕ್ಕೆ ಬರುವ ಬಹಳಷ್ಟು ಜನ ರೆಸಾರ್ಟ್‌ಗಳಿಗೇ ಲಗ್ಗೆ ಇಡುತ್ತಿದ್ದಾರೆ.

‘ಈ ಧಾಬಾ, ರೆಸಾರ್ಟ್‌ಗಳ ಆಹಾರ ತ್ಯಾಜ್ಯವನ್ನು ಬಹುಪಾಲು ಕಡೆ ಕಾಡಿನಲ್ಲಿಯೇ ಸುರಿಯಲಾಗುತ್ತಿದೆ. ಈ ತಿನಿಸಿಗೆ ಆಕರ್ಷಿತರಾಗಿ ಪ್ರಾಣಿ, ಪಕ್ಷಿಗಳು ರಸ್ತೆಗೆ ಬರುತ್ತಿವೆ. ಮಾಂಸಾಹಾರ ತ್ಯಾಜ್ಯ, ಮದ್ಯದ ಬಾಟಲಿಗಳು, ವ್ಯರ್ಥ ಆಹಾರ ಪದಾರ್ಥ, ಪ್ಲಾಸ್ಟಿಕ್‌ ಚೀಲಗಳು ಪ್ರಾಣಿ– ಪಕ್ಷಿಗಳಿಗೆ ಕಂಟಕವಾಗಿ ಪರಿಣಮಿಸಿವೆ’ ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ.

‘ಹಲವು ಧಾಬಾಗಳು ಖಾಸಗಿ ಸ್ವತ್ತಿನಲ್ಲಿದ್ದರೂ ಪರವಾನಗಿ ಪಡೆದಿಲ್ಲ. ಇಂಥ ಕಡೆ ಅಕ್ರಮವಾಗಿ ಮದ್ಯ ಮಾರಲಾಗುತ್ತದೆ. ಗೋವಾ ಹಾಗೂ ಬೆಳಗಾವಿ ಕಡೆಯಿಂದ ಬರುವ ಯುವಜನರು ರಾತ್ರಿಯಿಡೀ ಅಬ್ಬರದ ಸಂಗೀತ ಹಾಕಿ ಮೋಜು ಮಸ್ತಿ ಮಾಡುತ್ತಾರೆ.ಅಕ್ರಮವಾಗಿ ಚಾರಣಕ್ಕೆ ಕರೆದುಕೊಂಡು ಹೋಗುವ ‘ಆಫರ್‌’ ಕೂಡ ಇದೆ. ಇದರಿಂದ ವನ್ಯಜೀವಿಗಳಿಗೆ ಮಾತ್ರವಲ್ಲ; ಗ್ರಾಮಸ್ಥರಿಗೂ ತೊಂದರೆಯಾಗುತ್ತಿದೆ’ ಎನ್ನುವುದು ಅಮಟೆ ನಿವಾಸಿ ಲಕ್ಷ್ಮೀ ಹಾಗೂ ಇತರರ ಗೋಳು.

ಕೆಲವು ರೆಸಾರ್ಟ್‌ಗಳ ಮಾಲೀಕರು ನೀರಿಗಾಗಿ ನೈಸರ್ಗಿಕ ನಾಲೆಗಳನ್ನೇ ತಿರುಗಿಸಿದ್ದಾರೆ. ಇದಕ್ಕೆ ಭೂ ಪರಿವರ್ತನಾ ಆದೇಶ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಿಂದ ಪರವಾನಗಿ ಪಡೆದಿಲ್ಲ ಎಂಬುದು ಗ್ರಾಮಸ್ಥರ ದೂರು.

ಕೆಲವು ರೆಸಾರ್ಟ್‌ ಮಾಲೀಕರು ಕಳಸಾ ಬಂಡೂರಿ ಯೋಜನೆಯ ವಿರೋಧಿ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಪರಿಸರದ ಮೇಲಿನ ಕಾಳಜಿಯಿಂದಲ್ಲ; ತಮ್ಮ ರೆಸಾರ್ಟ್‌ಗಳಿಗೆ ನೀರಿನ ಅಭಾವವಾಗುತ್ತದೆ ಎಂಬ ಸ್ವಾರ್ಥದಿಂದ ಎನ್ನುವುದು ಗ್ರಾಮಸ್ಥರ ಮಾಹಿತಿ.

ಚಿಖಲೆ ಗ್ರಾಮದ ಬಳಿ ಅನಧಿಕೃತವಾಗಿಕಟ್ಟಿದ್ದ ರೆಸಾರ್ಟ್‌ನ್ನು 2016ರಲ್ಲಿ ನೆಲಸಮ ಮಾಡಲಾಗಿತ್ತು. ಅದಾದ ಬಳಿಕ ಅರಣ್ಯಾಧಿಕಾರಿಗಳು ದಾಳಿ ಮಾಡಿದ ಉದಾಹರಣೆ ಇಲ್ಲ.

*

ಕಚೇರಿ ಹಿಂದೆಯೇ ರೆಸಾರ್ಟ್‌

ಕಣಕುಂಬಿ ವಲಯ ಅರಣ್ಯ ಅಧಿಕಾರಿ ಕಚೇರಿ ಹಿಂದೆಯೇ ದೊಡ್ಡ ರೆಸಾರ್ಟ್ ಕಟ್ಟಲಾಗಿದೆ. ಇದು ಖಾಸಗಿ ಜಮೀನಿನಲ್ಲಿದ್ದರೂ ಇದಕ್ಕೆ ಹೋಗುವ ದಾರಿ ಮೀಸಲು ಅರಣ್ಯದಲ್ಲಿದೆ. ಇಂಥ ಸೂಕ್ಷ್ಮ ಪ್ರದೇಶದಲ್ಲಿ ಜನಸಂದಣಿ, ವಾಣಿಜ್ಯ ಚಟುವಟಿಕೆ ನಿಷೇಧವೆಂಬ ಎಂಬ ನಿಯಮ ಗಾಳಿಗೆ ತೂರಲಾಗಿದೆ.

ಈಗ ಕಣಕುಂಬಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಪಕ್ಕದಲ್ಲೇ ಇನ್ನೊಂದು ಹೋಟೆಲ್ ಕಟ್ಟಲಾಗಿದೆ. ಗ್ರಾಮೀಣ ರಸ್ತೆ, ಸೇತುವೆ ಮಾಡಲು ಕಾಯ್ದೆ ನೆಪ ಹೇಳುವ ಸರ್ಕಾರ, ವಾಣಿಜ್ಯಕ್ಕೆ ಹೇಗೆ ಬೇಕಾಬಿಟ್ಟಿ ಅನುಮತಿ ನೀಡಲು ಸಾಧ್ಯ ಎಂಬುದು ಜನರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT