ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಮಾಲೀಕರಿಂದ ಹಣ ವಸೂಲಿಗೆ ಹೋಗಿದ್ದಾರೆ: ಸುಮಲತಾ ವಿರುದ್ಧ ಎಚ್‌ಡಿಕೆ ಆರೋಪ

Last Updated 7 ಜುಲೈ 2021, 8:19 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದೆ ಸುಮಲತಾ ಅಂಬರೀಷ್‌ ಈಗ ಮಂಡ್ಯ ಜಿಲ್ಲೆಗೆ ಏಕೆ ಹೋಗಿದ್ದಾರೆ ಎಂಬುದು ಗೊತ್ತಿದೆ. ಕಲ್ಲು ಗಣಿ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡಲು ಹೋಗಿರಬಹುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಬಿರುಕು ಉಂಟಾಗಿದೆ ಎಂದು ಸಂಸದೆ ಹೇಳಿದ್ದರು. ಆದರೆ, ಅಣೆಕಟ್ಟೆಯಲ್ಲಿ ಬಿರುಕು ತೋರಿಸುವುದನ್ನು ಬಿಟ್ಟು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿಗೆ ಏಕೆ ಹೋಗಿದ್ದಾರೆ? ಇದು ಸಂಸದರು ಮಾಡುವ ಕೆಲಸವಾ’ ಎಂದು ಪ್ರಶ್ನಿಸಿದರು.

‘ನಾನು ಯಾವತ್ತೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸಿಲ್ಲ. ಕೆಆರ್‌ಎಸ್‌ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿಗಾರಿಕೆ ನಿಷೇಧಿಸಿದ 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆದೇಶ ಹೊರಡಿಸಿದ್ದೆ. ರಾಜ್ಯದಲ್ಲಿ ದೀರ್ಘ ಕಾಲದಿಂದ ಗಣಿಗಾರಿಕೆ ನಡೆಯುತ್ತಿದೆ. ಎಲ್ಲ ಗಣಿಗಾರಿಕೆಗಳ ಬಗ್ಗೆಯೂ ಸಿಬಿಐ ಅಥವಾ ಸಿಐಡಿಯಿಂದ ತನಿಖೆ ಮಾಡಿಸಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಲಿ’ ಎಂದು ಸವಾಲು ಹಾಕಿದರು.

ಕ್ಷಮೆ ಏಕೆ ಕೇಳಲಿ?: ‘ಸುಮಲತಾ ವಿರುದ್ಧ ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ. ಹೀಗಿರುವಾಗ ನಾನೇಕೆ ಕ್ಷಮೆ ಕೇಳಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಇವರಿಂದ ಭಾಷೆ, ಸಂಸ್ಕೃತಿ ಕಲಿಯಬೇಕಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ನೋಡಿ ಕಲಿಯಬೇಕು’ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇವರು ನಮ್ಮ ಕುಟುಂಬವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಇಂತಹ ಹೇಳಿಕೆ ನೀಡಿದ್ದಾರೆ. ನಮ್ಮ ಕುಟುಂಬ ಒಡೆಯಲು, ನನ್ನ ರಾಜಕೀಯ ಭವಿಷ್ಯ ಮುಗಿಸಲು ಬಹಳ ಜನ ಪ್ರಯತ್ನಿಸಿ, ಸೋತಿದ್ದಾರೆ. ಇವರಿಂದಲೂ ಅದು ಸಾಧ್ಯವಿಲ್ಲ’ ಎಂದರು.

ನಡವಳಿಕೆ ಬಗ್ಗೆ ಗೊತ್ತಿದೆ: ‘ಅವರ ಬಗ್ಗೆ ಏಕೆ ಕೇಳುತ್ತೀರಿ? ಆ ಹೆಣ್ಣು ಮಗಳ ನಡವಳಿಕೆ ಬಗ್ಗೆ ಎಲ್ಲ ಗೊತ್ತಿದೆ. ಅಂಬರೀಷ್‌ ಮೃತಪಟ್ಟಾಗ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದೇ ಬೇಡ ಎಂದು ಹಟ ಹಿಡಿದಿದ್ದರು. ವಿಕ್ರಂ ಆಸ್ಪತ್ರೆಯಲ್ಲೇ ನನ್ನ ಜತೆ ಹಾಗೆ ಹೇಳಿದ್ದರು. ಮುಖ್ಯಮಂತ್ರಿಯಾಗಿದ್ದ ನಾನು ಕಷ್ಟಪಟ್ಟು, ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ನಲ್ಲಿ ಪಾರ್ಥೀವ ಶರೀರ ತೆಗೆದುಕೊಂಡು ಹೋಗಿದ್ದೆ. ಈಗ ಅಂಬರೀಷ್‌ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಂಬರೀಷ್‌ ಜೀವಂತ ಇದ್ದಾಗ ಹೇಗೆ ನೋಡಿಕೊಂಡಿದ್ದರು ಎಂಬುದನ್ನು ಅವರ ಸುತ್ತ ಇದ್ದವರೇ ಹೇಳುತ್ತಾರೆ. ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋದ ಬಳಿಕ ಮಣ್ಣಿಗೆ ಹಾಕಿ, ಅಲ್ಲಿನ ಮಣ್ಣನ್ನು ಹಣೆಗೆ ಹಚ್ಚಿಕೊಂಡು ನಾಟಕ ಮಾಡಿದರು’ ಎಂದು ಕುಮಾರಸ್ವಾಮಿ ಟೀಕಿಸಿದರು.

‘ಇವರ ಸಿನಿಮಾ ರಾಜಕೀಯ ಇಲ್ಲಿ ನಡೆಯುವುದಿಲ್ಲ. ಮಂಡ್ಯದಿಂದಲೇ ರಾಜಕೀಯ ಮಾಡುತ್ತೇವೆ. ಅವರನ್ನು ಸೋಲಿಸಿ ತಕ್ಕ ಉತ್ತರ ನೀಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT