ಸೋಮವಾರ, ಮೇ 23, 2022
30 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದೆ ರಹಸ್ಯ ಕಾರ್ಯಸೂಚಿ ಇಲ್ಲ: ಎಸ್. ಸುರೇಶ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷೆಗೆ ಕೇವಲ 10 ದಿನಗಳು ಬಾಕಿ ಇರುವಾಗ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಬೇಡ. ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವ ಅಗತ್ಯ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು. 

‘ಹಟಕ್ಕೆ ಬಿದ್ದು ಅಥವಾ ಪ್ರತಿಷ್ಠೆಗೆ ಪರೀಕ್ಷೆ ನಡೆಸುತ್ತಿಲ್ಲ. 8.76 ಲಕ್ಷ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವುದೇ ರಹಸ್ಯ ಕಾರ್ಯಸೂಚಿಯೂ ಇಲ್ಲ, ವಿದ್ಯಾರ್ಥಿಗಳಿಗೆ ಸಾಮಾಜಿಕ ಅನ್ಯಾಯವೂ ಆಗುವುದಿಲ್ಲ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಾವು ಎಲ್ಲರೂ ಸೇರಿ ನಮ್ಮ ಮಕ್ಕಳ ಭವಿಷ್ಯವನ್ನು ಪೊರೆಯುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಪರೀಕ್ಷಾ ಸಚಿವ ಎನ್ನುವ ಹಣೆಪಟ್ಟಿ ಕೇವಲ ಶಬ್ದಗಳ ಆಡಂಬರವಷ್ಟೇ. ಇಂತಹ ಪ್ರತಿಕೂಲ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ತನ್ನ ಎಲ್ಲ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ’ ಎಂದೂ ಅವರು ಹೇಳಿದರು.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ಮಾತು ಪ್ರತಿ ಬಾರಿಯೂ ಕೇಳಿ ಬರುತ್ತದೆ. ಆದರೆ, ಫಲಿತಾಂಶ ಬಂದಾಗ ಈ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಶಿಕ್ಷಕರೇ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲಿಸಿದ್ದಾರೆ. ಬಹು ಆಯ್ಕೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸುವ ಕುರಿತು ಮಾರ್ಗದರ್ಶನವನ್ನೂ ನೀಡಿದ್ದಾರೆ’ ಎಂದರು.

‘ಪರೀಕ್ಷೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಕರ್ತವ್ಯಕ್ಕೆ ಹಾಜರಾಗುವ ಶೇ 98ರಷ್ಟು ಶಿಕ್ಷಕರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸ್ಕೌಟ್‌ ಅಂಡ್‌ ಗೈಡ್ಸ್‌, ರೋಟರಿ ಕ್ಲಬ್‌, ಯೂಥ್‌ ಫಾರ್‌ ಸೇವಾ ಸಂಸ್ಥೆಗಳು ಸೇರಿದಂತೆ ಹಲವು ಸಂಘ–ಸಂಸ್ಥೆಗಳು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಾಗಿ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ಗಳನ್ನು ಉಚಿತವಾಗಿ ನೀಡಿವೆ’ ಎಂದು ಅವರು ತಿಳಿಸಿದರು.

‘ಕಳೆದ ವರ್ಷ ಪರೀಕ್ಷೆ ನಡೆಸಿದಾಗ ರಾಜ್ಯದಲ್ಲಿ ಕೊರೊನಾ ದೃಢಪ್ರಮಾಣ ದರ ಶೇ 13.2ರಷ್ಟಿದ್ದರೆ, ಈ ವರ್ಷ 1.7ರ ಆಸುಪಾಸಿನಲ್ಲಿದೆ. ಈ ಬಾರಿಯ ಪರೀಕ್ಷೆ ಕಳೆದ ಬಾರಿಗಿಂತ ಹೆಚ್ಚು ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಪರೀಕ್ಷಾ ಕೊಠಡಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ.  ಒಂದು ಕೊಠಡಿಯಲ್ಲಿ ಕೇವಲ 12 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಒಂದು ಡೆಸ್ಕ್ ಗೆ ಒಬ್ಬನೇ / ಒಬ್ಬಳೇ ಪರೀಕ್ಷಾರ್ಥಿ ಇರಲಿದ್ದಾರೆ’ ಎಂದರು. 

ವಿಶ್ವಾಸದಲ್ಲಿ ವಿದ್ಯಾರ್ಥಿಗಳು: ‘34 ಶೈಕ್ಷಣಿಕ ಜಿಲ್ಲೆಗಳ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಬೆಳಿಗ್ಗೆ ಸಂವಾದ ನಡೆಸಿದ್ದೇನೆ. 1000ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಪರೀಕ್ಷೆ ಬರೆಯಲು ಉತ್ಸುಕರಿರುವುದಾಗಿ ಹೇಳಿದ್ದಾರೆ’ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

*
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನಮ್ಮ ಸಂಸ್ಥೆಯಿಂದ ಉಚಿತವಾಗಿ ಮಾಸ್ಕ್‌ ವಿತರಿಸಲಾಗುವುದು. 10 ಸಾವಿರ ಸ್ವಯಂ ಸೇವಕರು ಪರೀಕ್ಷಾ ಕಾರ್ಯಕ್ಕೆ ನೆರವು ನೀಡಲಿದ್ದಾರೆ.
-ಪಿ.ಜಿ.ಆರ್. ಸಿಂಧ್ಯ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು