ಬುಧವಾರ, ಜನವರಿ 27, 2021
16 °C

‘ಸ್ವಚ್ಚ ಭಾರತ್‌’ ಶೇ 10ರಷ್ಟು ಪ್ರಗತಿ: ಸಚಿವ ಕೆ.ಸಿ.ನಾರಾಯಣ ಗೌಡ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಈವರೆಗೆ ಶೇ 10ರಷ್ಟು ಕೆಲಸವೂ ಆಗಿಲ್ಲ. ಸಾಕಷ್ಟು ಅನುದಾನ ಇದ್ದರೂ ಈ ವಿಳಂಬ ಏಕೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಅಧಿಕಾರಿಗಳನ್ನು ಪೌರಾಡಳಿತ ಸಚಿವ ಕೆ.ಸಿ.ನಾರಾಯಣ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.‌

ಇಲಾಖೆಯ ಪ್ರಗತಿ ಪರಿಶೀಲನೆ ಸೋಮವಾರ ನಡೆಸಿದ ಸಚಿವರು, ‘15 ದಿನಗಳಲ್ಲಿ ಪ್ರಗತಿ ತೋರಿಸದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಪ್ಲಾಸ್ಟಿಕ್ ನಿಷೇಧವಾಗಿ 5 ವರ್ಷವಾದರೂ ನಿಷೇಧ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಒಳಚರಂಡಿಗಳಲ್ಲಿ ಪ್ಲಾಸ್ಟಿಕ್ ಕಸ ತುಂಬಿಕೊಂಡಿದೆ. ಇದಕ್ಕೆಲ್ಲ ಯಾರು ಹೊಣೆ. ನಿಷೇಧ ಇದ್ದರೂ ಇಷ್ಟೊಂದು ಪ್ಲಾಸ್ಟಿಕ್ ಬಳಕೆಯಾಗಲು ಕಾರಣವೇನು’ ಎಂದೂ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.

‘ಪ್ಲಾಸ್ಟಿಕ್ ನೀರಿನ ಬಾಟಲಿ ಸೇರಿದಂತೆ ನಿತ್ಯ ಬಳಕೆಯ ಪ್ಲಾಸ್ಟಿಕ್ ನಿಷೇಧ ಆಗಬೇಕು. ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳದ ಕಾರಣ ಅವ್ಯಾಹತವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ತಕ್ಷಣ ಇದು ನಿಲ್ಲಬೇಕು. ಪ್ಲಾಸ್ಟಿಕ್ ವಸ್ತು ಉತ್ಪಾದಿಸುವ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.

‘ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸುವ ಕಾರ್ಯ ಆಗುತ್ತಿಲ್ಲ. ಕೆಲವೆಡೆ ಕಸ ಸುರಿಯಲಾಗುತ್ತಿದೆ, ಸಂಸ್ಕರಣೆ ಆಗುತ್ತಿಲ್ಲ. ಕಸ ಹಾಕಲು ಜಾಗದ ಸಮಸ್ಯೆ ಇರುವುದು ಗೊತ್ತಿದ್ದೂ ಪರಿಹರಿಸಿಲ್ಲ. ಸಭೆಗಳಲ್ಲಿ ಸೂಚನೆ ನೀಡಿದರೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಿಲ್ಲ. ಈ ವರ್ತನೆ ಸಹಿಸಲು ಸಾಧ್ಯವಿಲ್ಲ’ ಎಂದು ಸಚಿವರು ಎಚ್ಚರಿಕೆ ನೀಡಿದರು.

‘ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಮಳಿಗೆಗಳ ಬಾಡಿಗೆ ಪರಿಷ್ಕರಿಸಬೇಕಿದೆ. ಪ್ರತಿ ನಗರದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪಿಸಬೇಕು. ಸ್ಮಶಾನಕ್ಕೆ ಸ್ಥಳ ಗುರುತಿಸಬೇಕು’ ಎಂದು ಸೂಚಿಸಿದರು.

ಜಾರಿಯಾಗದ ಆನ್‌ಲೈನ್ ವಹಿವಾಟು: ‘ರೇಷ್ಮೆ ಮಾರುಕಟ್ಟೆಗಳಲ್ಲಿ ಆನ್‌ಲೈನ್‌ ವಹಿವಾಟು ಇನ್ನೂ ಸರಿಯಾಗಿ ಜಾರಿಯಾಗಿಲ್ಲ. ರೀಲರ್ಸ್ ಹಾಗೂ ರೈತರು ಆನ್‌ಲೈನ್‌ ವ್ಯವಹಾರಕ್ಕೆ ಸಿದ್ದರಿದ್ದಾರೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದು ಜಾರಿಯಾಗಿಲ್ಲ. ಜನವರಿ ಅಂತ್ಯದೊಳಗೆ ಆನ್‌ಲೈನ್‌ ವಹಿವಾಟು ಜಾರಿಯಾಗಬೇಕು’ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು