ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ: 13,363 ಅಭ್ಯರ್ಥಿಗಳ ಪಟ್ಟಿ ಪ್ರಕಟ

Last Updated 18 ನವೆಂಬರ್ 2022, 16:13 IST
ಅಕ್ಷರ ಗಾತ್ರ

ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, 13,363 ಅಭ್ಯರ್ಥಿಗಳು ಸ್ಥಾನಪಡೆದಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 68,849 ಅಭ್ಯರ್ಥಿಗಳು ಸಿಇಟಿ ಬರೆದಿದ್ದರು. ಅವರಲ್ಲಿ 51,098 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. 22,432 ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಆಯ್ಕೆ ಮಾಡಲಾಗಿತ್ತು. ಈಗ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ನ.23ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲೆಗಳ ಉಪ ನಿರ್ದೇಶಕರ ಕಚೇರಿಯಲ್ಲಿ ನ.19ರಿಂದ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆ ಪೂರ್ಣಗೊಂಡ ಒಂದು ತಿಂಗಳಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಂಗ್ಲಭಾಷೆಯ 1,807 ಹುದ್ದೆಗಳಲ್ಲಿ 1,768, ಗಣಿತ ಮತ್ತು ವಿಜ್ಞಾನ ವಿಷಯದ 6,500ಕ್ಕೆ 5,450 , ಸಮಾಜ ವಿಜ್ಞಾನದಲ್ಲಿ 4,693ಕ್ಕೆ 4,521 ಹಾಗೂ ಜೀವ ವಿಜ್ಞಾನದ 2 ಸಾವಿರದಲ್ಲಿ 1,624 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 1,637 ಹುದ್ದೆಗಳು ಖಾಲಿ ಉಳಿದಿವೆ. ಕಲ್ಯಾಣ ಕರ್ನಾಟಕದ 4,187 ಅಭ್ಯರ್ಥಿಗಳಿಗೆ ಅವಕಾಶ ಲಭಿಸಿದೆ.

ಪರೀಕ್ಷೆ ಬರೆದಿದ್ದ 10 ತೃತೀಯ ಲಿಂಗಿಗಳಲ್ಲಿ ಮೂವರು ಆಯ್ಕೆಯಾಗಿದ್ದಾರೆ. ಆಂಗ್ಲಭಾಷೆಯಲ್ಲಿ ಒಬ್ಬರು, ಸಮಾಜ ವಿಜ್ಞಾನದಲ್ಲಿ ಇಬ್ಬರು ಸ್ಥಾನ ಪಡೆದಿದ್ದಾರೆ. ಎಂಜಿನಿಯರಿಂಗ್‌ ಪದವಿ ಪಡೆದ 34 ಅಭ್ಯರ್ಥಿಗಳು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದರು. ಅವರಲ್ಲಿ 19 ಮಂದಿ ಆಯ್ಕೆಯಾಗಿದ್ದಾರೆ. ಖಾಲಿ ಉಳಿದ ಹದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್‌ಕುಮಾರ್ ಸಿಂಗ್, ಆಯುಕ್ತ ಆರ್‌.ವಿಶಾಲ್, ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ.ಕಾವೇರಿ, ಜಂಟಿ ನಿರ್ದೇಶಕಿ ಪ್ರೇಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT