ಸೋಮವಾರ, ಆಗಸ್ಟ್ 15, 2022
27 °C

ಲಾಕ್‌ಡೌನ್ ನಿರ್ಬಂಧ ಸಡಿಲಿಕೆ: ಪ್ರಮುಖ ದೇವಸ್ಥಾನಗಳಲ್ಲಿ ಇಂದಿನಿಂದ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೋಮವಾರದಿಂದ (ಜು. 5) ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಉಡುಪಿಯ ಕೃಷ್ಣ ಮಠ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ.

ಶೃಂಗೇರಿ ಶಾರದಾಂಬೆ ದೇಗುಲ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನ, ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪ, ಸಂಗಮೇಶ್ವರ ದೇವಾಲಯ, ಬಾದಾಮಿಯ ಬನಶಂಕರಿ ದೇವಸ್ಥಾನ, ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನಗಳಲ್ಲೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದರ್ಶನಕ್ಕೆ ಬರುವ ಭಕ್ತರು ಕೋವಿಡ್‌ ನಿಯಮಾವಳಿ ಪಾಲಿಸುವುದು ಕಡ್ಡಾಯ ಎಂದು ಎಲ್ಲ ದೇವಸ್ಥಾನಗಳ ಸಮಿತಿಗಳು ತಿಳಿಸಿವೆ.

ಸದ್ಯಕ್ಕೆ ದರ್ಶನವಿಲ್ಲ: ಉಡುಪಿಯ ಕೃಷ್ಣಮಠದಲ್ಲಿ ಸದ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಒಂದು ವಾರ ಪರಿಸ್ಥಿತಿ ನೋಡಿಕೊಂಡು ದೇವಸ್ಥಾನದ ಬಾಗಿಲು ತೆರೆಯಬೇಕೆ, ಬೇಡವೆ ಎಂಬ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಸ್ಥಾನ– ಸಾರ್ವಜನಿಕ ದರ್ಶನ ನಿಷೇಧ ಮುಂದುವರಿಕೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಜೋಗುಳಭಾವಿ ಸತ್ತೆಮ್ಮದೇವಿ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭಾನುವಾರ ಆದೇಶಿಸಿದ್ದಾರೆ.

ಯಲ್ಲಮ್ಮ ದೇವಸ್ಥಾನಕ್ಕೆ ನೆರೆಯ ಮಹಾರಾಷ್ಟ್ರದ ಭಕ್ತರು ಹೆಚ್ಚಾಗಿ ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ದರ್ಶನ ನಿಷೇಧ ಮುಂದುವರಿಸಲಾಗಿದೆ. ಆ ರಾಜ್ಯದಲ್ಲಿ ಕೋವಿಡ್ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಮೈಸೂರು ಅರಮನೆ, ಮೃಗಾಲಯ ವೀಕ್ಷಣೆಗೆ ಮುಕ್ತ: ಮೈಸೂರು ಅರಮನೆ ಹಾಗೂ ಚಾಮರಾಜೇಂದ್ರ ಮೃಗಾಲಯವು ಜುಲೈ 5 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

‘ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ಅರಮನೆಯನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು. ಪ್ರವಾಸಿಗರು ಅರಮನೆಯ ವೆಬ್‌ಸೈಟ್‌ನಲ್ಲಿ (www.mysorepalace.gov.in) ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಬಹುದು. ಅರಮನೆ ದ್ವಾರದ ಬಳಿಯ ಟಿಕೆಟ್‌ ಕೌಂಟರ್‌ನಲ್ಲೂ ಟಿಕೆಟ್‌ ಖರೀದಿಸಬಹುದು’ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೃಗಾಲಯ, ಕಾರಂಜಿ ಕೆರೆ ಮುಕ್ತ: ‘ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಯನ್ನು ಸೋಮವಾರದಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರ ಸಹ ಆರಂಭಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು