ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದರೆ ಬಡಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ: ಸಿದ್ದರಾಮಯ್ಯ

Last Updated 3 ಮಾರ್ಚ್ 2021, 14:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರನ್ನು ಶೋಷಿಸುತಿದೆ. ಇವರ ಆಡಳಿತದಲ್ಲಿ ಕೆಲವೇ ಶ್ರೀಮಂತರು ಚೆನ್ನಾಗಿದ್ದಾರೆ. ವಿರೋಧ ಪಕ್ಷವಾಗಿ ನಾವು ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಅಥವಾ ಸರ್ಕಾರದ ಗಮನಕ್ಕೆ ತರುವ ದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಆದ್ದರಿಂದು ಇದು ನಮಗೆ ಸಂಘರ್ಷದ ವರ್ಷಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮಾತು ಎತ್ತಿದರೆ ಯಡಿಯೂರಪ್ಪ ಖಜಾನೆಯಲ್ಲಿ ದುಡ್ಡು ಇಲ್ಲ. ಕೆಲಸ ಮಾಡಲು ಆಗಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಕೊರೊನಾ ಕಾರಣ ಕೊಡುತ್ತಿದ್ದಾರೆ. ಕೊರೊನಾ ಬರಿ ಕರ್ನಾಟಕಕ್ಕೆ ಬಂದಿದ್ದಲ್ಲ.ಕೊರೊನಾ ಬಂದಿದ್ದರಿಂದ ನಮ್ಮಲ್ಲಿ ಹಣ ಇಲ್ಲ. ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕ, ರಷ್ಯಾ, ಇಂಗ್ಲೆಂಡ್ ಹೇಳಿವೆಯೇ ಎಂದು ಪ್ರಶ್ನಿಸಿದರು.

ಮೂರು ಸಾವಿರ ಕೋಟಿ ಲೂಟಿ: ಕೊರೊನಾಕ್ಕೆ ರಾಜ್ಯ ಸರ್ಕಾರ ಆರು ಸಾವಿರ ಕೋಟಿ ಖರ್ಚು ಮಾಡಿದೆವು ಎಂದು ಹೇಳಿತು‌. ಆದರೆ ಇದರಲ್ಲಿ ಮೂರು ಸಾವಿರ ಕೋಟಿ ಲೂಟಿ ಹೊಡೆದರು. ನಾನು ದಾಖಲೆ ಸಮೇತ ವಿಧಾಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದೆ. ಯಡಿಯೂರಪ್ಪ ಮಾತನಾಡಲೇ ಇಲ್ಲ. ಸಚಿವ ಸುಧಾಕರ್ ಯಾವುದನ್ನೂ ಒಪ್ಪಿಕೊಳ್ಳಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಈ ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ ಲಂಚ ತಗೊಂಡ. ಅವನ ಮಗ ವಿಜಯೇಂದ್ರ ಆರ್ ಟಿಜಿಎಸ್ ಮೂಲಕ ಲಂಚ ತಗೊತಿದ್ದಾನೆ ಎಂದು ಕಟುವಾಗಿ ಟೀಕಿಸಿದರು.

ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ: ಬಡವರು ಹಸಿದು ಮಲಗಬಾರದು. ಅದಕ್ಕಾಗಿ ಅಕ್ಕಿ ಕೊಟ್ಟೆವು. ನಾವು ಮುಂದೆ ಅಧಿಕಾರಕ್ಕೆ ಬಂದರೆ ಬಡಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ನಾವು ಎತ್ತಿನಹೊಳೆ ಯೋಜನೆ ಜಾರಿ ಮಾಡಿದೆವು. ಯೋಜನೆಯನ್ನು ಜೆಡಿಎಸ್ ವಿರೋಧಿಸಿತು. ಅವರು ಮಣ್ಣಿನ ಮಕ್ಕಳಾ ಎಂದು ಜನರನ್ನು ಪ್ರಶ್ನಿಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದ್ದಿರಿ‌. ಆದರೆ ಮತ್ತೆ ಆ ಕೆಲಸ ಮಾಡಬೇಡಿ. ನರೇಂದ್ರ ಮೋದಿ ಅಚ್ಚೇ ದಿನ ಆಗಯಾ ಎಂದರು. ಯಾವಾಗ ಬರುತ್ತದೆ ಅಚ್ಚೇದಿನ್ ಮೋದಿ ಅವರೇ ಎಂದು ಕುಟುಕಿದರು. ಅಕ್ಕಿ, ಗೋಧಿ, ತೊಗರಿ, ಪೆಟ್ರೋಲ್ ಬೆಲೆ ಹೆಚ್ಚಿದೆ. ಇದಕ್ಕೆ ಪರಿಹಾರ ಎಂದರೆ ನರೇಂದ್ರ ಮೋದಿ, ಯಡಿಯೂರಪ್ಪನ ಸರ್ಕಾರ ಕಿತ್ತೊಗೆಯಬೇಕು ಎಂದರು.

ಯಾರು ಕೆಲಸ ಮಾಡುತ್ತಾರೆ ಅವರಿಗೆ ನೀವು ಕೂಲಿ ಕೊಡಬೇಕು. ನಾವು ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ನಮಗೆ ಆಶೀರ್ವದಿಸುವ ಸಂಕಲ್ಪ ಮಾಡಿ ಎಂದು ಮನವಿ ಮಾಡಿದರು. ಕೆಲಸ ಕೇಳಿದರೆ ಪ್ರಧಾನಿ ಪಕೋಡ ಮಾರಿ ಎನ್ನುವರು. ಅವರ ಸುಳ್ಳುಗಳನ್ನು ನಂಬಬೇಡಿ. ಕೊಟ್ಟ ಮಾತಿನಂತೆ ನಡೆದ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT