ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕ ಪರಿಷ್ಕರಣೆ: ಇನ್ನಷ್ಟು ವಿಲ ವಿಲ ಒದ್ದಾಡಬೇಕು– ಸಿ.ಟಿ.ರವಿ ತಿರುಗೇಟು

ಸರ್ಕಾರ ಹೇಡಿತನದಿಂದ ವರ್ತಿಸುವ ಪ್ರಶ್ನೆಯೇ ಇಲ್ಲ: ಸ್ಪಷ್ಟನೆ
Last Updated 11 ಜೂನ್ 2022, 15:48 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನೈಜ ಭಾರತೀಯತೆ ಪರಿಚಯಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಇದರಿಂದ ಈಗಾಗಲೇ ಕೆಲವರು ವಿಲ ವಿಲ ಒದ್ದಾಡುತ್ತಿದ್ದಾರೆ. ಹಾಗಾಗಿ, ಎಲ್ಲಿ ಹಿಡಿಯಬೇಕೋ ಅಲ್ಲೇ ಹಿಡಿದಿದ್ದೇವೆ ಎಂದರ್ಥ. ಮರ್ಮಾಘಾತ ಎನ್ನುತ್ತೇವಲ್ಲ ಅದು ಆಗುತ್ತಿದೆ. ಇನ್ನಷ್ಟು ಬಲವಾಗಿ ಹಿಡಿಯಬೇಕು. ಅವರು ಇನ್ನಷ್ಟು ಒದ್ದಾಡ ಬೇಕು.....’

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ್ದು ಹೀಗೆ.

ಸಿಟಿಜನ್ಸ್‌ ಕೌನ್ಸಿಲ್‌ನ ಮಂಗಳೂರು ಘಟಕವು ಇಲ್ಲಿ ಶನಿವಾರ ಏರ್ಪಡಿಸಿದ್ದ ‘ಪಠ್ಯ ರಾಜಕಾರಣ– ಸತ್ಯ– ಮಿಥ್ಯ’ ಸಂವಾದದಲ್ಲಿ ಮಾತನಾಡಿದ ಅವರು, ‘ಸರ್ಕಾರ ಈ ವಿಚಾರದಲ್ಲಿ ಹೇಡಿತನದಿಂದ ವರ್ತಿಸುವ ಪ್ರಶ್ನೆಯೇ ಇಲ್ಲ. ಕೇವಲ ಅಧಿಕಾರ ಹಿಡಿಯಲು ನಾವು ಸರ್ಕಾರದ ಭಾಗವಾಗಿದ್ದಲ್ಲ. ನಮಗೆ ವೈಚಾರಿಕ ಉದ್ದೇಶ ಇದೆ. ಅದನ್ನು ಈಡೇರಿಸಲೆಂದೇ ಸರ್ಕಾರದ ಭಾಗ ಆಗಿದ್ದೇವೆ’ ಎಂದು ಸ್ಪಷ್ಟ ಪಡಿಸಿದರು.

‘ಪಠ್ಯ ಪರಿಷ್ಕರಣೆಗೆ ಅವರನ್ನು ಏಕೆ ಸೇರಿಸಿಕೊಂಡಿದ್ದು, ಇದನ್ನು ಏಕೆ ಸೇರಿಸಿದ್ದು ಎಂದು ಕೆಲವರು ಕೇಳುತ್ತಾರೆ. ಹಾಗೆ ಕೇಳುವವರು ಕೂಪಮಂಡೂಕಗಳು. ಸತ್ಯ ಹೊರಬಾರದಂತೆ ಮತ್ತು ಭಾರತೀಯರು ಅಭಿಮಾನಪಡದಂತೆ ನೋಡಿಕೊಳ್ಳುವುದೇ ಅವರ ಉದ್ದೇಶ. ಅವರ ಹುನ್ನಾರ ಅರ್ಥಮಾಡಿಕೊಂಡು ಈ ವೈಚಾರಿಕ ಯುದ್ಧದಲ್ಲಿ ಸತ್ಯ ಹಾಗೂ ಭಾರತೀಯತೆ ಗೆಲ್ಲುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಕಾರಾತ್ಮಕ ಅಭಿಪ್ರಾಯ ಸೃಷ್ಟಿಸುವುದರ ವಿರುದ್ಧ ಹೋರಾಡಬೇಕಿದೆ. ಇದು ಭಾರತೀಕರಣ ಮತ್ತು ತುಕ್ಡೇ ಗ್ಯಾಂಗ್‌ ನಡುವಿನ ಸಂಘರ್ಷ. ರಾಷ್ಟ್ರೀಕರಣದ ಚಿಂತನೆ ಹಾಗೂ ವೈಚಾರಿಕತೆ ಮೂಲಕ ಅದನ್ನು ಎದುರಿಸಬೇಕು. ಇದರ ವಿರುದ್ಧ ದೀರ್ಘ ಕಾಲ ಹೋರಾಟ ಮಾಡಬೇಕಿದೆ. ಇಂಥ ಎಲ್ಲ ಕಾಯಿಲೆಗಳಿಗೂ ನಮ್ಮಲ್ಲಿರುವ ರಾಮಬಾಣ ಭಾರತೀಯತೆ’ ಎಂದರು.

‘ನಮಗೆ ಸಂಬಂಧವೇ ಇಲ್ಲದ ಲೆನಿನ್‌ ಬಗ್ಗೆ ಮಾರ್ಕ್ಸ್‌ ಬಗ್ಗೆ ಪುಸ್ತಕಗಟ್ಟಲೆ ಬರೆದರೂ ನಾವು ಓದಬೇಕಂತೆ. ಭಾರತಕ್ಕೆ ಸ್ವಾತಂತ್ರ್ಯವೇ ಸಿಗದ ಕಾಲದಲ್ಲಿ ಇಡೀ ದೇಶದಲ್ಲಿ ರಾಷ್ಟ್ರೀಯತೆ ಭಾವನೆಯನ್ನು ಹಿಂದುತ್ವದ ಮೂಲಕ ಡಾ.ಹೆಡಗೇವಾರ್‌ ಅವರು ಜಾಗೃತಿ ಗೊಳಿಸಿದರು. ಇದನ್ನು ತಿಳಿದುಕೊಳ್ಳುವುದಕ್ಕಾದರೂ ಅವರ ಬಗ್ಗೆ ಓದಬೇಕಲ್ಲವೇ. ವಿರೋಧ ಮಾಡಬೇಕು ಎಂದಾದರೂ ಆ ವಿಚಾರವನ್ನು ಅಧ್ಯಯನ ಮಾಡಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌, ಕಮ್ಯುನಿಷ್ಟ್‌ ಹಾಗೂ ಮತಾಂತರ ಮಾಫಿಯಾ ಸೇರಿ ದೇಶದ ನೈಜ ಇತಿಹಾಸವನ್ನು ಮರೆಮಾಚಿವೆ. ಮತಗಳನ್ನು ಪಡೆಯುವುದಷ್ಟೇ ಕಾಂಗ್ರೆಸ್‌ನ ರಾಜಕೀಯ ಕಾರ್ಯಸೂಚಿ. ರಾಷ್ಟ್ರೀಯತೆಯ ನೆಲೆಯು ಕಮ್ಯುನಿಸಂ ಕಳೆಯನ್ನು ಬೆಳೆಯಲು ಬಿಡುವುದಿಲ್ಲ. ಹಾಗಾಗಿ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸುವುದೇ ಕಮ್ಯುನಿಷ್ಟರ ಕಾರ್ಯಸೂಚಿ. ನಮ್ಮತನದ ಬಗ್ಗೆ ಅಭಿಮಾನ ಪ‍ಡುವ ಸಂಗತಿಗಳನ್ನು ಮರೆಮಾಚುವುದು ಮತಾಂತರ ಮಾಫಿಯಾದ ಉದ್ದೇಶ. ಈ ಮೂವರು ಸೇರಿ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸಲು ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿದರು.

‘ಅಜಂತಾ, ಎಲ್ಲೋರಾ, ಬೇಲೂರು ಹಳೆಬೀಡಿನಂತಹ ಶಿಲ್ಪವನ್ನು ಕಾಡುಜನ ನಿರ್ಮಾಣ ಮಾಡಲು ಸಾಧ್ಯವಾಗುತ್ತಿತ್ತಾ. ಪ್ರಾಚೀನ ಸಂಸ್ಕೃತಿ ಪರಂಪರೆ ಜ್ಞಾನ ಕಲಿಸುವಾಗ ಇವರು ವಿಲವಿಲ ಒದ್ದಾಡುತ್ತಾರೆ. ಗಣಿತ ಜ್ಞಾನ, ನಮ್ಮ ತರ್ಕ, ಶರೀರಶಾಸ್ತ್ರ, ವಾಸ್ತುಶಿಲ್ಪ, ಶಿಲ್ಪಕಲೆ ಇದನ್ನೆಲ್ಲ ಕಲಿಸಿದರೆ ಭಾರತ ಎದ್ದು ನಿಲ್ಲುತ್ತದೆ ಎಂಬ ಆತಂಕ ಅವರದು’ ಎಂದರು.

ಹಿಂದುತ್ವ ಮತ್ತಷ್ಟು ಗಟ್ಟಿ: ‘ಹಿರಣ್ಯ ಕಷ್ಯಪುವಿನ ಮನೆಯಲ್ಲೇ ಪ್ರಹ್ಲಾದ ಹುಟ್ಟಿದ್ದು. ನಮ್ಮನ್ನು ಎಷ್ಟೇ ತುಳಿಯಲು ಪ್ರಯತ್ನ ಮಾಡಿದರೂ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ. ನಮ್ಮನ್ನು ತುಳಿಯಬೇಕು ಎನ್ನುವವರ ಮನೆಯಲ್ಲೇ ಹಿಂದುತ್ವ ಜಾಗೃತಿ ಆಗುತ್ತದೆ’ ಎಂದು ಸಿ.ಟಿ.ರವಿ ಹೇಳಿದರು.

‘ದೇಶದ ಮೇಲೆ ಆಕ್ರಮಣ ಮಾಡಿದ ಅಲೆಕ್ಸಾಂಡರ್‌ ಅನ್ನು ಗ್ರೇಟ್‌ ಅಂತ ದಶಕಗಳ ಕಾಲ ಹೇಳಿಕೊಟ್ಟರು. ಇದರಿಂದ ಮಕ್ಕಳಲ್ಲಿ ಯಾವ ಭಾವನೆ ಮೂಡುತ್ತದೆ. ರಾಮಾಯಣ ಮಹಾಭಾರತದ ಕುರಿತು, ರಾಣಪ್ರತಾಪ. ಶಿವಾಜಿ, ಪೃಥ್ವಿರಾಜ ಮೊದಲಾದವರ ಬಗ್ಗೆ ಪಠ್ಯಗಳಲ್ಲಿ ಎಷ್ಟು ಹೇಳಿಕೊಟ್ಟಿದ್ದಾರೆ. ಶಿವಾಜಿಯನ್ನು ಬೇರೆ ಯಾವುದಾದರೂ ದೇಶದಲ್ಲಿ ಹುಟ್ಟಿದ್ದಿದ್ದರೆ ಆತನನ್ನು ಜಾಗತಿಕ ನಾಯಕನನ್ನಾಗಿ ನೋಡುತ್ತಿದ್ದರು. ಆದರೆ ನಾವು ಅವನನ್ನು ಪುಕ್ಕಲ ಎಂದು ಬಿಂಬಿಸಿದ್ದೇವೆ. ಮಹಾನ್‌ ಪರಂಪರೆ ಬಗ್ಗೆ ತಿಳಿಸಿ ರಾಷ್ಟ್ರೀಯ ಭಾವನೆ ಬಳೆಯಲು ಬಿಡದಿದ್ದರೆ ದೇಶ ಉಳಿಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಇಂತಹ ತಪ್ಪುಗಳನ್ನು ಸರಿ ಮಾಡಿದರೆ ಕೋಮುವಾದಿಗಳು, ಕೇಸರೀಕರಣ ಎನ್ನುತ್ತಾರೆ. ಭಾರತೀಯತೆ ಆಧರಿಸಿ ದೇಶ ಮತ್ತೆ ಮೇಲೇಳುವಂತೆ ಮಾಡಬೇಕಿದೆ. ಈ ಸಲುವಾಗಿಯೇ ಪಠ್ಯಗಳ ದುರಸ್ತಿ ಕೆಲಸಕ್ಕೆ ಕೈ ಹಾಕಿದ್ದೇವೆ. ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಅಷ್ಟರಲ್ಲೇ ಇಷ್ಟೆಲ್ಲಾ ನಡೆದಿದೆ’ ಎಂದರು.

‘ನಾರಾಯಣ ಗುರುಗಳ ಪಠ್ಯ ತೆಗೆದರು ಎಂದು ತಗಾದೆ ತಗೆದವರಿಗೆ ಅವರ ಮೇಲೆ ನಿಜವಾದ ಭಕ್ತಿ ಇಲ್ಲ. ನಾರಾಯಣ ಗುರು ನಮಗೆ ಪ್ರಾಥಃ ಸ್ಮರಣೀಯರು’ ಎಂದರು.

‘ರಾಷ್ಟ್ರೀಯತೆಗಾಗಿ ಅಸ್ಮಿತೆ ತ್ಯಾಗ ಮಾಡಬೇಕಿದೆ’

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ.ಪಿ.ಎಲ್‌.ಧರ್ಮ, ‘ಅಸ್ಮಿತೆಗಳಿಲ್ಲದೇ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಿಲ್ಲ. ದೇಶ ಕಟ್ಟುವ ಸಂದರ್ಭದಲ್ಲಿ ನಮಗೆ ಬಹುತ್ವವಾದ ಹಾಗೂ ಅಸ್ಮಿತೆಗಳು ಬೇಕಾಗಿದ್ದವು. ಎಲ್ಲ ಸಂದರ್ಭಗಳಲ್ಲೂ ನಮಗೆ ಬಸವಣ್ಣ, ಅಂಬೇಡ್ಕರ್‌, ಕುವೆಂಪು ಬೇಕಾಗಿದ್ದರು. ಆದರೆ, ಈಗ ನಾವು ಒಳ್ಳೆಯ ಹಂತ ತಲುಪಿದ್ದು,ಒಂದಷ್ಟು ಸುಖಸಂಪತ್ತು ಬಂದಿದೆ. ಈಗ ಎಲ್ಲ ಅಸ್ಮಿತೆಗಳನ್ನು ತ್ಯಾಗ ಮಾಡಬೇಕಿದೆ. ಎಲ್ಲ ತರಹದ ಬಹುತ್ವವಾದವನ್ನು ಮನಸ್ಸೊಳಗಡೆ ಇಟ್ಟುಕೊಂಡು ಈಗ ನಾವು ರಾಷ್ಟ್ರೀಯತೆಯೇ ನಮ್ಮ ಆಸ್ತಿ ಎಂದು ಬಿಂಬಿಸಬೇಕಿದೆ’ ಎಂದರು.

‘ರಾಷ್ಟ್ರೀಯತೆಗೆ ಗಟ್ಟಿಗೊಳಿಸಲು ಪಠ್ಯಗಳು ಅಡಿಪಾಯ ಆಗಬೇಕು. ಈ ಅಡಿಪಾಯವನ್ನು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದಾಗಬೇಕು‘ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ‘ಅಂಬೇಡ್ಕರ್‌ ಅವರ ಸಂವಿಧಾನ ಶಿಲ್ಪಿ ವಿಶೇಷಣ ಕೈಬಿಟ್ಟಿದ್ದು, ಚಿ.ಉದಯ ಶಂಕರ್‌ ಹೆಸರಿನ ಬದಲು ಆರ್‌.ಎನ್‌.ಜಯಗೋಪಾಲ್‌ ಎಂದು ನಮೂದಾಗಿದ್ದೆಲ್ಲವೂ ಉದ್ದೇಶಪೂರ್ವಕ ಕೃತ್ಯಗಳಲ್ಲ. ಗಾಂಧೀಜಿ, ಅಂಬೇಡ್ಕರ್‌ ಹಾಗೂ ವಿವೇಕಾನಂದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎಂಬುದು ವಿದ್ಯಾರ್ಥಿಗಳಿಗೂ ತಿಳಿದೇ ತಿಳಿಯುತ್ತದೆ’ ಎಂದರು.

ಸಿಟಿಜನ್ಸ್‌ ಕೌನ್ಸಿಲ್‌ನ ಮಂಗಳೂರು ಘಟಕದ ಅಧ್ಯಕ್ಷ ಎಂ.ಚಿದಾನಂದ ಕೆದಿಲಾಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT