ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ವಿತರಿಸಲು ವಿವಿಧ ತಾಲ್ಲೂಕುಗಳಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಆಹಾರಧಾನ್ಯಗಳು ಕೊಳೆಯುತ್ತಿವೆ.
‘ಪ್ರಜಾವಾಣಿ‘ಗೆ ಲಭ್ಯವಾದ ಮಾಹಿತಿ ಪ್ರಕಾರ ಗೋದಾಮುಗಳಲ್ಲಿ 43,258 ಟನ್ ಅಕ್ಕಿ, 1,716 ಟನ್ ಗೋಧಿ, 12,046 ಟನ್ ತೊಗರಿ ಬೇಳೆ, 16,786 ಲೀಟರ್ ಅಡುಗೆ ಎಣ್ಣೆ, 1,594 ಕಿಲೊ ಹಾಲಿನ ಪುಡಿ ದಾಸ್ತಾನಿದೆ.
‘ಹೆಚ್ಚಿನ ಮಳೆ ಮತ್ತು ವಾತಾವರಣದಲ್ಲಿರುವ ತೇವಾಂಶದ ಪರಿಣಾಮ ಈ ಆಹಾರಧಾನ್ಯಗಳು ಬಳಕೆಗೆ ಯೋಗ್ಯವಿಲ್ಲದಷ್ಟು ಹಾಳಾಗಿರುವ ಸಾಧ್ಯತೆಗಳಿವೆ’ ಎಂದು ಕೆಎಫ್‌ಸಿಎಸ್‌ಸಿ ಅಧಿಕಾರಿಯೊಬ್ಬರು ತಿಳಿಸಿದರು.
ಕೋವಿಡ್ ಕಾರಣಕ್ಕೆ ಶಾಲೆಗಳಿಗೆ ರಜೆ ನೀಡಿದ್ದರಿಂದ ಮಧ್ಯಾಹ್ನ ಉಪಾಹಾರ ಸ್ಥಗಿತಗೊಳಿಸಿ, ಆಹಾರಧಾನ್ಯಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು.
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ (ಪಿಎಂಜಿಕೆವೈ) ಎಲ್ಲ ಕುಟುಂಬಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪಡಿತರ ವಿತರಿಸುತ್ತಿರುವುದರಿಂದ ಮಧ್ಯಾಹ್ನ ಬಿಸಿಯೂಟ ಯೋಜನೆ ಸ್ಥಗಿತಗೊಳಿಸುವಂತೆ ಆರ್ಥಿಕ ಇಲಾಖೆ ಆಗಸ್ಟ್ 25ರಂದು ಸೂಚಿಸಿತ್ತು. ಆದರೆ, ಅಷ್ಟರಲ್ಲೇ ಮಧ್ಯಾಹ್ನ ಉಪಾಹಾರ ಯೋಜನೆಯ ರಾಜ್ಯದ ಅಧಿಕಾರಿಗಳು, ಜಿಲ್ಲಾವಾರು ಅಗತ್ಯವಿರುವ ಆಹಾರಧಾನ್ಯಗಳ ಪಟ್ಟಿ ಕ್ರೋಡೀಕರಿಸಿ, ಧಾನ್ಯ ಪೂರೈಸುವಂತೆ ಕೆಎಫ್‌ಸಿಎಸ್‌ಸಿಗೆ ಸೂಚಿಸಿದ್ದರು. ಎಲ್ಲ ತಾಲ್ಲೂಕುಗಳಲ್ಲಿರುವ ಗೋದಾಮು ಗಳಿಗೆ ಕೆಎಫ್‌ಸಿಎಸ್‌ಸಿ ಧಾನ್ಯ ಪೂರೈಸಿದೆ.
‘ಮಾರ್ಚ್ 14ರಿಂದ ಏಪ್ರಿಲ್ 10ರವರೆಗಿನ 21 ಶಾಲಾ ದಿನಗಳ ಆಹಾರಧಾನ್ಯವನ್ನು ವಿತರಿಸಲಾಗಿದೆ. ಈ ಶೈಕ್ಷಣಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಏಪ್ರಿಲ್ 11ರಿಂದ ಮೇ 28ರವರೆಗಿನ 37 ದಿನಗಳಿಗೆ ಬಿಸಿಯೂಟದ ಬದಲು ಆಹಾರಧಾನ್ಯವನ್ನು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗಳಿಗೆ ಕರೆಸಿ ವಿತರಿಸಲಾಗಿದೆ’ ಎಂದು ಮಧ್ಯಾಹ್ನ ಉಪಾಹಾರ ಯೋಜನೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಿತರಿಸಲು ಜಿಲ್ಲಾವಾರು ಅಗತ್ಯವಿರುವ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಲಾಗಿದೆ. ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋದಾಮುಗಳಿಂದ ನಿಗದಿತ ಅವಧಿಯೊಳಗೆ ಎತ್ತುವಳಿ ಮಾಡದಿದ್ದರೆ ಆ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡಿದ್ದ ಆಹಾರಧಾನ್ಯಗಳನ್ನು ಹಿಂತೆಗೆದು
ಕೊಳ್ಳಲಾಗುತ್ತದೆ. ಹೀಗಾಗಿ, ಎಲ್ಲ ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹದವರು ಎತ್ತುವಳಿ ಮಾಡಿಕೊಂಡಿದ್ದಾರೆ’ ಎಂದರು.
‘ಎತ್ತುವಳಿ ಮಾಡಿದ ಆಹಾರಧಾನ್ಯಗಳನ್ನು ಮಕ್ಕಳಿಗೆ ವಿತರಿಸಿಲ್ಲ. ಹೀಗಾಗಿ, ಗೋದಾಮುಗಳಲ್ಲಿ ಉಳಿದಿದೆ. ಪಿಡಿಎಸ್ ಮತ್ತು ಪಿಎಂಜಿಕೆವೈ ಅಡಿ ವಿತರಿಸಲು ಅಗತ್ಯ
ವಾದ ಆಹಾರಧಾನ್ಯಗಳ ಜತೆಗೆ ಶಾಲಾ ಮಕ್ಕಳಿಗೆ ವಿತರಿಸಬೇಕಾದ ಆಹಾರಧಾನ್ಯಗಳನ್ನೂ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವುದರಿಂದ ಸ್ಥಳಾವಕಾಶದ ಕೊರತೆ ಉಂಟಾಗುವುದರ ಜತೆಗೆ ಒಟ್ಟಿಗೆ ಇಟ್ಟಿರುವುದಿಂದ ಹಾಳಾಗುತ್ತಿದೆ. ತಕ್ಷಣವೇ ವಿತರಿಸು ವಂತೆ ಕೆಲವು ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಶಿಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ’ ಎಂದೂ ತಿಳಿಸಿದರು.
***
ಜೂನ್‌ನಿಂದ ಅಕ್ಟೋಬರ್‌ವರೆಗೆ ಮಧ್ಯಾಹ್ನ ಉಪಾಹಾರ ಯೋಜನೆಯ ಅನುಷ್ಠಾನಕ್ಕೆ ಅನುದಾನ ಬಿಡುಗಡೆಯಾಗಿದ್ದು, ಆಹಾರಧಾನ್ಯ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು
- ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.