ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ; ಹೈದರಾಬಾದ್‌ನಲ್ಲಿ ಯುವತಿ ಪತ್ತೆ?

Last Updated 14 ಮಾರ್ಚ್ 2021, 20:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿಯನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಹೊರ ರಾಜ್ಯದಲ್ಲಿ ಪತ್ತೆ ಹಚ್ಚಿದ್ದು, ಅವರನ್ನು ಬೆಂಗಳೂರಿಗೆ ಕರೆತರುತ್ತಿರುವುದಾಗಿ ಗೊತ್ತಾಗಿದೆ.

ಪ್ರಕರಣ ಸಂಬಂಧ ವಿಚಾರಣೆ ಚುರುಕುಗೊಳಿಸಿರುವ ಎಸ್‌ಐಟಿ ತಂಡ, ಶಿಕ್ಷಕಿ ಹಾಗೂ ವರದಿಗಾರರು ಸೇರಿ 10 ಮಂದಿಯ ವಿಚಾರಣೆಯನ್ನು ಈಗಾಗಲೇ ನಡೆಸಿದೆ. ಹಲವರ ಮನೆ ಹಾಗೂ ಕಚೇರಿಯಲ್ಲೂ ಪರಿಶೀಲನೆ ನಡೆಸಿ ಕಂಪ್ಯೂಟರ್ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಿದೆ.

ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿರುವ ತಂಡ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರರ ಪತ್ತೆಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾದಲ್ಲಿ ಶೋಧ ನಡೆಸುತ್ತಿದೆ.

ಶನಿವಾರವಷ್ಟೇ ವಿಡಿಯೊ ಹರಿಬಿಟ್ಟಿದ್ದ ಯುವತಿ, ಹೈದರಾಬಾದ್‌ನಲ್ಲಿರುವ ಮಾಹಿತಿ ಎಸ್‌ಐಟಿ ತಂಡಕ್ಕೆ ಸಿಕ್ಕಿತ್ತು. ಮಹಿಳಾ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವೊಂದು ಹೈದರಾಬಾದ್‌ಗೆ ಹೋಗಿ ಯುವತಿಯನ್ನು ಪತ್ತೆ ಮಾಡಿರುವುದಾಗಿ ಗೊತ್ತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಎಸ್‌ಐಟಿ ತಂಡದ ಮುಖ್ಯಸ್ಥ ಸೌಮೆಂದು ಮುಖರ್ಜಿ, ‘ಐಎಸ್‌ಟಿ ತನಿಖೆ ನಡೆಸುತ್ತಿದೆ. ಪ್ರಕರಣದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ನೀಡಲಾಗದು’ ಎಂದರು.

ಮಡಿವಾಳದಲ್ಲಿ ವಿಚಾರಣೆ: ‘ಸಿ.ಡಿ ಬಿಡುಗಡೆ ನಂತರ ಯುವತಿ, ಹೈದರಾಬಾದ್‌ಗೆ ಹೋಗಿ ಮನೆಯೊಂದರಲ್ಲಿ ಉಳಿದುಕೊಂಡಿದ್ದರು. ಯುವತಿ ಹಾಗೂ ಇಬ್ಬರು ಯುವಕರು ಎಸ್‌ಐಟಿಗೆ ಸಿಕ್ಕಿದ್ದಾರೆ. ಮೂವರನ್ನೂ ಮಡಿವಾಳದಲ್ಲಿರುವ ವಿಶೇಷ ವಿಚಾರಣಾ ಕೊಠಡಿಗೆ ಕರೆತರಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಯುವತಿಗೆ ಪೊಲೀಸ್ ನೋಟಿಸ್:

ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರಿನ ವಿಚಾರಣೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಪ್ರಕರಣದ ಸಂಬಂಧ ಹೇಳಿಕೆ ನೀಡುವಂತೆ ಯುವತಿಗೆ ನೋಟಿಸ್‌ ನೀಡಿದ್ದಾರೆ. ಇ–ಮೇಲ್ ಮೂಲಕ ನೋಟಿಸ್ ಪ್ರತಿ ರವಾನಿಸಿದ್ದಾರೆ. ಜೊತೆಗೆ, ಸಿಬ್ಬಂದಿಯೊಬ್ಬರು ವಿಜಯಪುರ ಜಿಲ್ಲೆಯಲ್ಲಿರುವ ಅವರ ಅಜ್ಜಿಯ ಮನೆ ಬಾಗಿಲಿಗೂ ನೋಟಿಸ್ ಪ್ರತಿ ಅಂಟಿಸಿ ಬಂದಿದ್ದಾರೆ.

‘ದೂರು ಹಿಂಪಡೆಯುವ ಬಗ್ಗೆ ದಿನೇಶ್ ಪತ್ರ ಬರೆದಿದ್ದರು. ಅದಕ್ಕೆ ಅವಕಾಶವಿಲ್ಲ. ತನಿಖೆ ಮುಂದುವರಿಸಲಾಗಿದೆ. ಯುವತಿಯೇ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಹೀಗಾಗಿ, ಹೇಳಿಕೆ ನೀಡಲು ಕೋರಿ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಪ್ರಕರಣದಲ್ಲಿ ನಿಮ್ಮ ಹೇಳಿಕೆ ಅತ್ಯಗತ್ಯವಾಗಿದೆ. ನೋಟಿಸ್‌ ತಲುಪಿದ ಕೂಡಲೇ ಕಬ್ಬನ್‌ ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್ ಅವರನ್ನು ಮೊಬೈಲ್ ನಂಬರ್ ಅಥವಾ ಇ–ಮೇಲ್ ಮೂಲಕ ಸಂಪರ್ಕಿಸಿ. ತಾವು (ಯುವತಿ) ನಿಗದಿಪಡಿಸಿದ ದಿನಾಂಕ, ಸಮಯ, ಸ್ಥಳಕ್ಕೆ ಬಂದು ಹೇಳಿಕೆ ಪಡೆಯಲಾಗುವುದು. ತಮ್ಮ ಮನವಿಯಂತೆ ಸೂಕ್ತ ರಕ್ಷಣೆಯನ್ನೂ ಒದಗಿಸಲಾಗುವುದು’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಸ್‌ಐಟಿ ಅಧಿಕಾರಿಗಳು ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರಲ್ಲಿ ಯುವತಿಯ ತಂದೆಯ ಕುಟುಂಬದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT