ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲುಗಳ ಸುಳಿಯಲ್ಲಿ ಆತಿಥ್ಯ ಉದ್ಯಮ

ಚೇತರಿಸಿಕೊಳ್ಳುತ್ತಿರುವ ಹೋಟೆಲ್‌ಗಳಿಗೆ ಹೊರೆಯಾದ ದರ ಏರಿಕೆ l ಕೋವಿಡ್ ಪೂರ್ವದ ಸ್ಥಿತಿಗೆ ತಲುಪಲು ಬೇಕು ಇನ್ನಷ್ಟು ಕಾಲಾವಕಾಶ
Last Updated 22 ಫೆಬ್ರುವರಿ 2021, 2:47 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ನಗರವು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಲು ಅಲ್ಲಿನ ಆತಿಥ್ಯ ಉದ್ಯಮದ ಪಾತ್ರವೂ ಪ್ರಮುಖವಾದುದು. ಕೋವಿಡ್‌ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಈ ಉದ್ದಿಮೆ ವಲಯವು, ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಹಲವಾರು ಸವಾಲುಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಈ ಉದ್ದಿಮೆಯು ಕೋವಿಡ್‌ ಪೂರ್ವದ ಸ್ಥಿತಿಗೆ ತಲುಪಲು ಇನ್ನಷ್ಟು ದಿನಗಳು ಬೇಕಿವೆ.

ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಐಟಿ–ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಿರುವುದು, ಸಭೆ–ಸಮಾರಂಭಗಳು ಮೊದಲಿನಂತೆ ನಡೆಯದಿರುವುದು, ವಿವಾಹ ಸೇರಿದಂತೆ ವಿವಿಧ ಶುಭ ಸಮಾರಂಭಗಳ ಸರಳ ಆಚರಣೆ, ಕಳೆಗುಂದಿದ ಪ್ರವಾಸೋದ್ಯಮ ಸೇರಿದಂತೆ ಕೋವಿಡ್‌ ನಂತರದ ವಿವಿಧ ಬೆಳವಣಿಗಳು ನಗರದಲ್ಲಿ ಆತಿಥ್ಯ ಉದ್ಯಮದ ಚೇತರಿಕೆಗೆ ಅಡ್ಡಿಯಾಗಿವೆ. ಈ ನಡುವೆ, ಈ ಉದ್ಯಮದಲ್ಲೇ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಮಂದಿ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ.

ವಾಣಿಜ್ಯ ವ್ಯವಹಾರದ ಸಂಬಂಧ ಇಲ್ಲಿಗೆ ಅನ್ಯರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ತಾರಾ ಹೋಟೆಲ್‌ಗಳು ನಲುಗಿ ಹೋಗಿವೆ. ನಗರದ ಹೋಟೆಲ್‌ಗಳಲ್ಲಿ ಕೆಲಸ ಕಂಡುಕೊಂಡಿದ್ದ ಉತ್ತರ ಭಾರತದ ಕಾರ್ಮಿಕರು ಕೋವಿಡ್‌ ಬಳಿಕ ತಮ್ಮ ಊರುಗಳಿಗೆ ನಿರ್ಗಮಿಸಿದ್ದು, ಇನ್ನೂ ಮರಳಿಲ್ಲ. ಇದರ ಪರಿಣಾಮ ದರ್ಶಿನಿಗಳಲ್ಲಿ ಕೋವಿಡ್‌ ಪೂರ್ವಕ್ಕೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ಶೇ 40ರಷ್ಟು ಇಳಿಕೆಯಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್‌ಗಳಿಗೆ ಬರುವವರ ಸಂಖ್ಯೆ ಕೆಲ ದಿನಗಳಿಂದ ಏರಿಕೆ ಕಾಣುತ್ತಿದ್ದು, ಶೇ 50ರಿಂದ ಶೇ 60ರಷ್ಟು ವಹಿವಾಟು ನಡೆಯುತ್ತಿದೆ. ಇದು ಹೋಟೆಲ್‌ ಉದ್ಯಮಿಗಳಲ್ಲಿ ಸ್ವಲ್ಪಮಟ್ಟಿನ ಆಶಾವಾದವನ್ನು ಮೂಡಿಸಿದೆ. ನಗರದ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಚೇತೋಹಾರಿ ಬೆಳವಣಿಗೆ ಎನ್ನುತ್ತಾರೆ ಹೋಟೆಲ್‌ ಉದ್ಯಮಿಗಳು.

ಬಾಗಿಲು ಮುಚ್ಚಿದ ಹೋಟೆಲ್‌ಗಳು: ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚಲಾಗಿತ್ತು. ಬಳಿಕ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆಗಲೂ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಲಿಲ್ಲ. ಇದರಿಂದಾಗಿ ಬಾಡಿಗೆ ಪಾವತಿ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸಲಾಗದೆಯೇ ನಗರದಲ್ಲಿ ನೂರಾರು ಹೋಟೆಲ್‌ಗಳು ಶಾಶ್ವತವಾಗಿ ಬಾಗಿಲು ಮುಚ್ಚಿದವು. ಈ ಸಂದರ್ಭದಲ್ಲಿ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಿಸದಿರುವುದು ಹಾಗೂ ವಿವಿಧ ಶುಲ್ಕಗಳಿಗೆ ವಿನಾಯಿತಿ ನೀಡದಿರುವುದು ಹೋಟೆಲ್‌ ಉದ್ಯಮಿಗಳ ಬೇಸರಕ್ಕೆ ಕಾರಣವಾಗಿದೆ.

‘ದೇಶದಲ್ಲಿಯೇ ನಗರವು ಆತಿಥ್ಯದಲ್ಲಿ ಹೆಸರುವಾಸಿಯಾಗಿದೆ. ಆತಿಥ್ಯ ಉದ್ಯಮಕ್ಕೆ ಕೋವಿಡ್‌ ಸಾಕಷ್ಟು ಹೊಡೆತ ನೀಡಿದೆ. ಹಲವಾರು ಹೋಟೆಲ್‌ಗಳು ನಷ್ಟ ಭರಿಸಲಾರದೆಯೇ ಬಾಗಿಲು ಮುಚ್ಚಿವೆ. ಆದರೆ, ಸರ್ಕಾರವು ಯಾವುದೇ ರೀತಿಯ ನೆರವು ನೀಡದಿರುವುದು ಬೇಸರವನ್ನುಂಟು ಮಾಡಿದೆ. ನಮಗೆ ಪ್ರತ್ಯೇಕ ಪ್ಯಾಕೇಜ್ ನೀಡಬೇಕಿರಲಿಲ್ಲ. ಬದಲಾಗಿ, ನಾವು ಕಟ್ಟಬೇಕಾದ ಶುಲ್ಕದಲ್ಲಿ ವಿನಾಯಿತಿ ನೀಡಿದ್ದರೂ ತಕ್ಕ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದೇವು. ಅದೇ ರೀತಿ, ನಮ್ಮ ಕಾರ್ಮಿಕರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷಪಿ.ಸಿ.ರಾವ್.

‘ಉತ್ತರ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ ಬಳಿಕ ಊರಿಗೆ ತೆರಳಿದವರಲ್ಲಿ ಶೇ 10ರಷ್ಟು ಮಂದಿ ಮಾತ್ರ ವಾಪಸ್‌ ಬಂದಿದ್ದಾರೆ. ಸದ್ಯಕ್ಕೆ ಇನ್ನುಳಿದವರನ್ನು ಕರೆಯುವ ಪರಿಸ್ಥಿತಿಯಲ್ಲಿಯೂ ನಾವು ಇಲ್ಲ. ಈ ಉದ್ಯಮ ಮೊದಲಿನ ಸ್ಥಿತಿಗೆ ಬರಲು ಇಲ್ಲಿಗೆ ಈ ಹಿಂದಿನಂತೆ ವಿದೇಶಿ ಪ್ರತಿನಿಧಿಗಳು ಬರಬೇಕು. ಹಿರಿಯರು ಮತ್ತು ಮಕ್ಕಳಲ್ಲಿ ಶೇ 20ರಷ್ಟು ನಮ್ಮ ಗ್ರಾಹಕರು. ಅವರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ಗಳಿಗೆ ಬರಬೇಕು. ಮದುವೆ ಸೇರಿದಂತೆ ಶುಭ ಸಮಾರಂಭಗಳು ಕೋವಿಡ್‌ ಪೂರ್ವದ ಸ್ಥಿತಿಗೆ ತಲುಪಬೇಕು. ನಿರ್ಬಂಧ ಸಡಿಲಿಸಿರುವ ಜತೆಗೆ ಕೋವಿಡ್‌ಗೆ ಲಸಿಕೆ ಬಂದ ಕಾರಣ ಏಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು’ ಎಂದು ತಿಳಿಸಿದರು.

ಸಂಕಷ್ಟದಲ್ಲಿ ತಾರಾ ಹೋಟೆಲ್‌ಗಳು: ಕೋವಿಡ್‌ ಬಳಿಕ ವ್ಯಾಪಾರ ವ್ಯವಹಾರದ ಸಂಬಂಧ ಸಿಲಿಕಾನ್ ಸಿಟಿಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಾಣಿಜ್ಯೋದ್ಯಮಿಗಳ ಸಭೆಗಳು ಕೂಡ ಅಷ್ಟಾಗಿ ನಡೆಯುತ್ತಿಲ್ಲ. ಅದೇ ರೀತಿ, ಸಭೆ–ಸಮಾರಂಭಗಳಿಗೆ ವಿಧಿಸಿದ ನಿರ್ಬಂಧಗಳು ಪೂರ್ಣ ಪ್ರಮಾಣದಲ್ಲಿ ತೆರವಾಗದ ಕಾರಣ ತಾರಾ ಹೋಟೆಲ್‌ಗಳು ಸೊರಗಿವೆ. ಬೆರಳಣಿಕೆಯಷ್ಟು ಕೊಠಡಿಗಳು ಮಾತ್ರ ಭರ್ತಿಯಾಗುತ್ತಿವೆ. ಅಶೋಕ, ಶಾಂಗ್ರೀಲಾ, ದಿ ಪಾರ್ಕ್‌ ಸೇರಿದಂತೆ ಬಹುತೇಕ ತಾರಾ ಹೋಟೆಲ್‌ಗಳು 2020ರ ಡಿಸೆಂಬರ್‌ನಲ್ಲಿ ಪುನರಾರಂಭವಾಗಿವೆ. ಇವುಗಳಲ್ಲಿ ಶೇ 20ರಷ್ಟು ವಹಿವಾಟು ಮಾತ್ರ ನಡೆಯುತ್ತಿದ್ದು, ಕೆಲ ಮಹಡಿಗಳಲ್ಲಿನ ಕೊಠಡಿಗಳನ್ನು ಮಾತ್ರ ಬಾಡಿಗೆಗೆ ಕೊಡುತ್ತಿವೆ.

ಕೋವಿಡ್ ಪ್ರಕರಣಗಳು ಏರಿಕೆ ಕಂಡ ಬಳಿಕ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿತ್ತು. ಆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು 46 ಹೋಟೆಲ್‌ಗಳನ್ನು ಬಾಡಿಗೆಗೆ ಪಡೆದು, ಅಲ್ಲಿ 4 ಸಾವಿರ ಹಾಸಿಗೆಯನ್ನು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದ್ದವು. ಕೋವಿಡ್‌ ಕಾಣಿಸಿಕೊಂಡ ಪ್ರಾರಂಭಿಕ 6 ತಿಂಗಳು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಸ್ಥಗಿತವಾಗಿದ್ದವು. ಇದರಿಂದಾಗಿ ವಿದ್ಯುತ್ ಸೇರಿದಂತೆ ವಿವಿಧ ನಿಗದಿತ ಶುಲ್ಕವನ್ನು ಪಾತಿಸಲಾಗದೆಯೇ ಅವು ಸಂಕಷ್ಟ ಎದುರಿಸಿದ್ದವು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಅಗತ್ಯ: ‘ಕೋವಿಡ್‌ನಿಂದ ಹೋಟೆಲ್‌ ಹಾಗೂ ಪ್ರವಾಸೋದ್ಯಮ ಬಹಳಷ್ಟು ನಷ್ಟ ಅನುಭವಿಸಿವೆ. ಕಳೆದ 11 ತಿಂಗಳಲ್ಲಿ ಹೋಟೆಲ್ ಉದ್ಯಮದಾರರಷ್ಟೇ ಅಲ್ಲದೆ, ಇದನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದ ಕಾರ್ಮಿಕರು ಸಮಸ್ಯೆ ಎದುರಿಸಿದ್ದಾರೆ. ರೈತರು, ಹೈನುಗಾರರು, ವ್ಯಾಪಾರಿಗಳು ಸೇರಿದಂತೆ ಹಲವರು ಪರೋಕ್ಷವಾಗಿ ನಷ್ಟ ಅನುಭವಿಸಿದ್ದಾರೆ. ಈಗ ಮತ್ತೆ ಮೊದಲಿನ ಹಾದಿಗೆ ಮರಳಬೇಕಿದೆ. ಸರ್ಕಾರವು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದಲ್ಲಿ ಹೋಟೆಲ್‌ ಉದ್ಯಮ ಕೂಡ ಬೆಳವಣಿಗೆ ಹೊಂದುತ್ತದೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳಸಂಘದ ಖಜಾಂಚಿ ವೀರೇಂದ್ರ ಎನ್. ಕಾಮತ್ ತಿಳಿಸಿದರು.

‘ಪ್ರವಾಸಿ ಕೇಂದ್ರಗಳತ್ತ ಜನಸಂಚಾರ ಹೆಚ್ಚಿದಂತೆ ಜನರ ಅಗತ್ಯಗಳಿಗೆ ಅನುಗುಣವಾಗಿ ಹೋಟೆಲ್‌ಗಳು, ವಾಣಿಜ್ಯ ಕೇಂದ್ರಗಳು ಸ್ಥಾಪನೆಯಾಗುತ್ತವೆ. ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆಗಳೂ ಕುದುರುತ್ತವೆ. ಜೀವನ ಮಟ್ಟ ಸುಧಾರಿಸುತ್ತದೆ. ಪ್ರವಾಸಿ ಕೇಂದ್ರಗಳಲ್ಲಿ ಜನ ಬಯಸುವುದು ಮುಖ್ಯವಾಗಿ ಶುಚಿ–ರುಚಿಯಾದ ಊಟೋಪಚಾರ, ಉತ್ತಮ ವಸತಿಗೃಹ, ನೀರು ಮತ್ತು ಶೌಚಾಲಯದ ಸೂಕ್ತ ವ್ಯವಸ್ಥೆ. ಸರ್ಕಾರವು ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ಊಟ, ವಸತಿ, ನೀರು ಇತ್ಯಾದಿ ಸೌಲಭ್ಯವನ್ನು ಹೋಟೆಲ್‌ ಉದ್ಯಮದಾರರು ನಿರ್ವಹಿಸಲು ಸಮರ್ಥರಿದ್ದಾರೆ’ ಎಂದರು.

ಯಾವುದೇ ಮಹಾನಗರದ ಬ್ರ್ಯಾಂಡ್ ಮೌಲ್ಯ ಹೆಚ್ಚಿಸುವಲ್ಲಿ ಅಲ್ಲಿನ ಆತಿಥ್ಯ ಕೂಡ ಪ್ರಮುಖ
ಪಾತ್ರವಹಿಸುತ್ತದೆ. ಅದರಲ್ಲೂ ಎಲ್ಲ ವರ್ಗದ ಜನತೆಯನ್ನು ಒಳಗೊಂಡಿರುವ ರಾಜಧಾನಿ ಬೆಂಗಳೂರು ಇನ್ನಷ್ಟು ಬೆಳವಣಿಗೆ ಹೊಂದಲು ಈ ಕ್ಷೇತ್ರಕ್ಕೆ ಸರ್ಕಾರದ ಪ್ರೋತ್ಸಾಹ ಕೂಡ ಅಗತ್ಯ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಲ್ಲಿ ಆತಿಥ್ಯ ವಲಯವೂ ವಿಸ್ತರಿಸಿಕೊಳ್ಳಲಿದೆ. ಆಗ ಈ ಕ್ಷೇತ್ರದಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿ ಕೂಡ ಸಾಧ್ಯವಾಗುತ್ತದೆ ಎನ್ನುತ್ತಾರೆ ಆತಿಥ್ಯ ಉದ್ಯಮದ ಆಳ–ಅಗಲವನ್ನು ಬಲ್ಲ ಉದ್ಯಮಿಗಳು.

ಆತಿಥ್ಯ ವಲಯದ ಸ್ಥಿತಿಗತಿ

24,500

ನಗರದಲ್ಲಿರುವ ಒಟ್ಟು ಹೋಟೆಲ್‌ಗಳು

21,000

ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಹೋಟೆಲ್‌ಗಳು

3,500

ನಗರದಲ್ಲಿರುವ ತಾರಾ ಹೋಟೆಲ್‌ಗಳು

1,000

ಕೋವಿಡ್‌ ಬಳಿಕ ಮುಚ್ಚಲ್ಪಟ್ಟ ಹೋಟೆಲ್‌ಗಳು

50

ಕೋವಿಡ್‌ ನಂತರ ಪ್ರಾರಂಭವಾದ ಹೊಸ ಹೋಟೆಲ್‌ಗಳು

1.40 ಲಕ್ಷ

ಆತಿಥ್ಯ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು

60 ಸಾವಿರ

ಕೋವಿಡ್‌ ಬಳಿಕ ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರು

40 ಸಾವಿರ

ಆತಿಥ್ಯ ವಲಯ ಅವಲಂಬಿತ ದಿನಗೂಲಿ ನೌಕರರು

₹ 600 ಕೋಟಿ

ಆತಿಥ್ಯ ವಲಯ ನಡೆಸುವ ಒಂದು ತಿಂಗಳ ವಹಿವಾಟು

‘ಸರ್ಕಾರದಿಂದಲೂ ಪ್ರೋತ್ಸಾಹ ಅಗತ್ಯ’

‘ಹೋಟೆಲ್ ಉದ್ಯಮ ಬೇರೆ ಎಲ್ಲ ಉದ್ಯಮಗಳಿಗಿಂತ ವಿಭಿನ್ನ. ಪ್ರವಾಸೋದ್ಯಮ ಬೆಳೆದಲ್ಲಿ ಈ ಉದ್ಯಮ ಕೂಡ ಬೆಳವಣಿಗೆ ಹೊಂದುತ್ತದೆ. ಸರ್ಕಾರವು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಹೋಟೆಲ್‌ ತೆರೆಯಲು ಅವಕಾಶ ನೀಡಬೇಕು. ಈಗ ಹೋಟೆಲ್‌ ಪ್ರಾರಂಭಿಸಲು 15–18 ಇಲಾಖೆಗಳಿಂದ ಪರವಾನಗಿ ಪಡೆಯಬೇಕಾಗಿದೆ. ಇದನ್ನು ಆದಷ್ಟು ಸರಳೀಕರಣ ಮಾಡಬೇಕು. ಅದೇ ರೀತಿ, ಪ್ರತಿ ವರ್ಷ ಪರವಾನಗಿಯನ್ನು ನವೀಕರಣ ಮಾಡಿಸಿಕೊಳ್ಳಬೇಕಿದೆ. ಇದು ಕೂಡ ಅವೈಜ್ಞಾನಿಕ’ ಎಂದು ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

‘ಸರ್ಕಾರವು ಹೋಟೆಲ್‌ ಉದ್ಯಮವನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ. ಕೋವಿಡ್ ಕಾಣಿಸಿಕೊಂಡ ಬಳಿಕ ಆಸ್ತಿ ತೆರಿಗೆಯನ್ನು ಕೂಡ ಕಡಿಮೆ ಮಾಡಿಲ್ಲ. 5 ವರ್ಷಕ್ಕೊಮ್ಮೆಪರವಾನಗಿ ಶುಲ್ಕವನ್ನು ಹೆಚ್ಚು ಮಾಡಲಾಗುತ್ತಿದೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಕ್ಕ ಕಾರಣ ಈಗ ಮತ್ತೆ ಹೆಚ್ಚಳ ಮಾಡಕೂಡದು. ಸರ್ಕಾರದ ಒತ್ತಡ ಇದ್ದಲ್ಲಿ ಹೋಟೆಲ್ ಉದ್ಯಮದ ಬೆಳೆವಣಿಗೆ ಸಾಧ್ಯವಾಗದು’ ಎಂದು ವಿವರಿಸಿದರು.

‘ಏಪ್ರಿಲ್ ಬಳಿಕ ದರ ಏರಿಕೆ ಬಗ್ಗೆ ಚಿಂತನೆ’

‘ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಹೆಚ್ಚಳದಿಂದ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಹೀಗಿದ್ದರೂ ಹೋಟೆಲ್‌ಗಳು ಸದ್ಯಕ್ಕೆ ದರವನ್ನು ಏರಿಸುತ್ತಿಲ್ಲ. ಕೆಲವೇ ದಿನಗಳಲ್ಲಿ ಹಾಲು, ವಿದ್ಯುತ್‌ ಬೆಲೆ ಕೂಡ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಆ ಕಾರಣದಿಂದ ಏಪ್ರಿಲ್ ತಿಂಗಳ ಬಳಿಕ ದರ ಏರಿಕೆಯ ಬಗ್ಗೆ ಚಿಂತನೆ ನಡೆಸಲಿದ್ದೇವೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.

‘ನಗರದಲ್ಲಿ ಸುಮಾರು 12 ಸಾವಿರ ಐಟಿ ಕಂಪನಿಗಳಿವೆ. ಅವುಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಕಚೇರಿಗಳನ್ನು ಪ್ರಾರಂಭಿಸಿಲ್ಲ. ಇದು ಹೋಟೆಲ್ ಉದ್ಯಮಕ್ಕೆ ಹೊಡೆತ ನೀಡಿದೆ. ಕಂಪನಿಗಳ ಆವರಣದಲ್ಲಿರುವ ಫುಡ್‌ ಕೋರ್ಟ್‌ಗಳು ಮುಚ್ಚಿದ್ದು, ಹಲವಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಹೋಟೆಲ್‌ಗಳ ವಹಿವಾಟು ಸಂಪೂರ್ಣ ಕುಸಿದಿದೆ. ತಾರಾ ಹೋಟೆಲ್‌ಗಳಲ್ಲಿ ಕೊಠಡಿಗಳು ಬುಕ್‌ ಆಗದಿರುವುದು ಸಮಸ್ಯೆಯಾಗಿದೆ’ ಎಂದರು.

‘ಬೆಲೆ ಏರಿಕೆಯಿಂದ ನಿರ್ವಹಣೆ ಸಮಸ್ಯೆ’

‘ಕೋವಿಡ್‌ ಪ್ರಕರಣಗಳು ಇಳಿಕೆ ಕಂಡ ಬಳಿಕ ಜನತೆ ಹೋಟೆಲ್‌ಗಳಿಗೆ ಬರಲಾರಂಭಿಸಿದ್ದಾರೆ. ಉದ್ಯಮವು ಈಗ ಚೇತರಿಕೆಯ ಹಾದಿ ಹಿಡಿದಿದೆ. ಆದರೆ, ಈ ವೇಳೆ ಆಹಾರಧಾನ್ಯಗಳ ಬೆಲೆ ಶೇ 30ರಷ್ಟು ಜಾಸ್ತಿಯಾದ ಕಾರಣ ಸಮಸ್ಯೆಯಾಗಿದೆ. ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡಿದಲ್ಲಿ ಜನರಿಗೆ ಸಮಸ್ಯೆಯಾಗುತ್ತದೆ. ಇದರಿಂದ ಮತ್ತೆ ನಷ್ಟವನ್ನು ಅನುಭವಿಸಬೇಕಾಗಿದೆ. ಕೋವಿಡ್‌ ಸಂಬಂಧ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಕೂಡ ಮರಳಲಿಲ್ಲ. ಇದರಿಂದ ಇದ್ದವರೇ ಎಲ್ಲ ಕೆಲಸವನ್ನು ನಿರ್ವಹಿಸಬೇಕಿದೆ. ಈ ಸಂದರ್ಭದಲ್ಲಿ ಸರ್ಕಾರದ ಸಹಕಾರ ಅತ್ಯಗತ್ಯ’ ಎಂದು ಕದಂಬ ಹೋಟೆಲ್‌ ಸಮೂಹದ ಮಾಲೀಕ ರಾಘವೇಂದ್ರ ರಾವ್ ತಿಳಿಸಿದರು.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ಜನತೆ ಹೋಟೆಲ್‌ಗಳಿಗೆ ಬಾರದ ಪರಿಣಾಮ ಈ ಉದ್ಯಮವನ್ನು ನಂಬಿಕೊಂಡಿದ್ದವರು ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಶುಚಿತ್ವ ಕಾಯ್ದುಕೊಳ್ಳುವ ಜತೆಗೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದೇವೆ. ಈಗ ಉದ್ಯಮವು ಚೇತರಿಕೆ ಕಾಣುತ್ತಿದೆ. ಪ್ರವಾಸೋದ್ಯಮ ಹಾಗೂ ಹೋಟೆಲ್‌ ಉದ್ಯಮ ನಗರದ ಪ್ರಗತಿಗೆ ಪೂರಕ. ಹಾಗಾಗಿ, ಸರ್ಕಾರವು ವಿವಿಧ ತೆರಿಗೆ ಹಾಗೂ ಶುಲ್ಕದಲ್ಲಿ ವಿನಾಯಿತಿ ನೀಡಿದಲ್ಲಿ ಸಹಕಾರಿಯಾಗಲಿದೆ’ ಎಂದು ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನ ಮಾಲೀಕ ಎಸ್‌.ಪಿ. ಕೃಷ್ಣರಾಜ್ ವಿವರಿಸಿದರು.

‘ಕೋವಿಡ್‌ನಿಂದ ನಮಗೆ ಸಾಕಷ್ಟು ಹೊಡೆತ ಬಿದ್ದಿದೆ. ಶುಚಿತ್ವ ಕಾಪಾಡಿಕೊಂಡು ಗ್ರಾಹಕರಿಗೆ ಸಹಕರಿಸುತ್ತಿದ್ದೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ನಾವು ತಿನಿಸುಗಳ ಬೆಲೆ ಹೆಚ್ಚಳ ಮಾಡಿಲ್ಲ. ಗ್ರಾಹಕರ ಸಹಕಾರ ಕೂಡ ಅಗತ್ಯ’ ಎಂದು ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‌ನ ಮಾಲೀಕ ಯೋಗೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT