ಬುಧವಾರ, ಆಗಸ್ಟ್ 10, 2022
24 °C

ರಾಗಿ ಖರೀದಿ: ₹ 89.44 ಕೋಟಿ ಬಾಕಿ, ಸಾಲದ ಸುಳಿಗೆ ಸಿಲುಕುವ ಆತಂಕದಲ್ಲಿ ರೈತರು

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಿ ತಿಂಗಳು ಕಳೆದಿದ್ದರೂ ಈವರೆಗೂ ಪೂರ್ಣ ಪ್ರಮಾಣದಲ್ಲಿ ಸರ್ಕಾರ ಹಣ ಪಾವತಿಸಿಲ್ಲ. ಜಿಲ್ಲೆಯಲ್ಲಿ 13,089 ರೈತರಿಗೆ ₹ 89.44 ಕೋಟಿಯನ್ನು ಬಾಕಿ ಉಳಿಸಿಕೊಂಡಿದೆ.

ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದು, ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಪರಿಕರಗಳನ್ನು ಖರೀದಿಸಬೇಕಿದೆ. ರಾಗಿ ಮಾರಾಟ ಮಾಡಿದ ಹಣದಲ್ಲಿ ಒಂದಷ್ಟು ಸಾಲ ತೀರಿಸಿಕೊಂಡು, ಮುಂದಿನ ಕೃಷಿ ಕಾರ್ಯಕ್ಕೆ ಬಳಸಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಈವರೆಗೂ ಹಣ ಬಾರದೆ ಮತ್ತೆ ಸಾಲಕ್ಕೆ ಕೈಚಾಚುವ ಪರಿಸ್ಥಿತಿ ಎದುರಾಗಿದೆ.

ಒಂದು ಕ್ವಿಂಟಲ್‌ಗೆ ₹3,285ರಂತೆ ಕರ್ನಾಟಕ ರಾಜ್ಯ ಆಹಾರ ಹಾಗೂ ನಾಗರಿಕ ಸರಬರಾಜು ನಿಗಮದ (ಕೆಎಸ್‌ಎಫ್‌ಸಿ) ಮೂಲಕ ಖರೀದಿಸಿದ್ದು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಒಟ್ಟು 38,792 ರೈತರು ರಾಗಿ ಮಾರಾಟ ಮಾಡಿದ್ದು, ₹ 278.91 ಕೋಟಿ ಪಾವತಿಸಬೇಕಿತ್ತು. ಮಾರ್ಚ್ 14ರವರೆಗೆ 25,703 ರೈತರಿಗೆ ₹ 189.47 ಕೋಟಿ ಪಾವತಿಸಲಾಗಿದೆ. ಇನ್ನೂ ₹ 89.44 ಕೋಟಿ ಬಾಕಿ ನೀಡಬೇಕಾಗಿದೆ.

ಖರೀದಿ ಕೇಂದ್ರಕ್ಕೆ ಬಂದು ರಾಗಿಯ ಮಾದರಿ ತೋರಿಸಿ, ಜಮೀನಿನ ಮತ್ತು ಬ್ಯಾಂಕ್ ದಾಖಲೆಗಳನ್ನು ಕೊಟ್ಟು ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಮತ್ತೆ ನಿಗದಿತ ದಿನದಂದು ರಾಗಿ ಖರೀದಿ ಕೇಂದ್ರಕ್ಕೆ ಬಂದು ಒಂದೆರಡು ದಿನಗಳ ಕಾಲ ಹಗಲು–ರಾತ್ರಿ ಕಾದು ಕುಳಿತು ತೂಕ ಹಾಕಿ ರಾಗಿ ಕೊಟ್ಟು ಹೋಗಿದ್ದರು. ಖರೀದಿಸಿದ ಒಂದೆರಡು ವಾರದಲ್ಲಿ ಆಹಾರ ಇಲಾಖೆಯಿಂದ ನೇರವಾಗಿ ರೈತರ ಖಾತೆಗೆ ಹಣ ಪಾವತಿಯಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೂ ಹಣ ರೈತರ ಕೈಸೇರಿಲ್ಲ.

ರಾಗಿ ಕೊಯ್ಲು ಆರಂಭವಾದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಬೆಲೆ ₹ 2,000ದಿಂದ ₹2,500 ದರ ಇತ್ತು. ಖರೀದಿ ಕೇಂದ್ರ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲೂ ಧಾರಣೆ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಹೆಚ್ಚಿನ ಮಂದಿ ಖರೀದಿ ಕೇಂದ್ರದಲ್ಲೇ ಮಾರಾಟ ಮಾಡಿದ್ದರು. ಈಗ ಮಳೆ ಬಿದ್ದು ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿದ್ದು, ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಹಣ ಬಾರದೆ ಆತಂಕಕ್ಕೆ ಒಳಗಾಗಿದ್ದಾರೆ.

‘ತಕ್ಷಣ ಬಾಕಿ ಕೊಡಿ’
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಿರುವ ಬಾಕಿ ಹಣವನ್ನು ತಕ್ಷಣವೇ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ಒತ್ತಾಯಿಸಿದರು.

‘ನಾನು ಸಹ ರಾಗಿ ಮಾರಾಟ ಮಾಡಿ ಎರಡು ತಿಂಗಳಾಗಿದ್ದರೂ ಹಣ ಬಂದಿಲ್ಲ. ಕೋವಿಡ್–19ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ರೈತರ ಬಳಿ ಹಣ ಇಲ್ಲವಾಗಿದೆ. ಇತರೆ ಕ್ಷೇತ್ರದಲ್ಲಿ ವಸ್ತು ಕೊಂಡುಕೊಂಡ ತಕ್ಷಣ ಹಣ ನೀಡುತ್ತಾರೆ. ಆದರೆ, ರೈತರು ಮಾತ್ರ ತಮ್ಮ ವಸ್ತು ಮಾರಾಟ ಮಾಡಿ ಹಣಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರತಿಕ್ರಿಯಿಸಿದರು.

**

ರೈತರಿಗೆ ತಲುಪದ ಬೆಂಬಲ ಬೆಲೆ ರಾಗಿ ಹಣ
ಹೊಸದುರ್ಗ:
ಇಲ್ಲಿಯ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಗೆ ಖರೀದಿಸಿದ್ದ ರಾಗಿ ಹಣ ಎರಡು ತಿಂಗಳಾದರೂ ರೈತರ ಬ್ಯಾಂಕ್‌ ಖಾತೆ ಸೇರಿಲ್ಲ.

ಕಳೆದ ಜನವರಿ ತಿಂಗಳಿನಿಂದ ಎರಡು ತಿಂಗಳ ಕಾಲ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವ ರೈತರ ನೋಂದಣಿ ನಡೆಯಿತು. 8,000ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿದ್ದರು. 7,000ಕ್ಕೂ ಹೆಚ್ಚು ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು.

‘ಬಹುತೇಕ ರೈತರಿಂದ ರಾಗಿ ಖರೀದಿಸಿರುವುದಕ್ಕೆ ಹಣ ಪಡೆಯುವ ಅಧಿಕೃತ ಚೀಟಿ ನೀಡಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಖರೀದಿ ಕೇಂದ್ರದ ಅಧಿಕಾರಿಯೂ ಸಿಗುತ್ತಿಲ್ಲ. ರೈತರ ಬ್ಯಾಂಕ್‌ ಖಾತೆಗೂ ಹಣ ಜಮಾ ಆಗಿಲ್ಲ. ಇದರಿಂದ ರೈತರಿಗೆ ಆತಂಕ ಎದುರಾಗಿದೆ’ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಕೆ.ಸಿ. ಮಹೇಶ್ವರಪ್ಪ.

ಬೆಂಬಲ ಬೆಲೆಗೆ ತಾಲ್ಲೂಕಿನ ಎಷ್ಟು ರೈತರಿಂದ, ಎಷ್ಟು ಕ್ವಿಂಟಲ್‌ ರಾಗಿ ಖರೀದಿಸಲಾಗಿದೆ? ಎಷ್ಟು ರೈತರಿಗೆ ಹಣ ಪಡೆಯುವ ಅಧಿಕೃತ ಚೀಟಿ  ಕೊಡಲಾಗಿದೆ? ಎಷ್ಟು ರೈತರ ಬ್ಯಾಂಕ್‌ ಖಾತೆಗೆ ಈಗಾಗಲೇ ಹಣ ಜಮಾ ಆಗಿದೆ ಎಂಬ ಬಗ್ಗೆ ತಹಶೀಲ್ದಾರ್‌ ವೈ.ತಿಪ್ಪೇಸ್ವಾಮಿ ಅವರನ್ನು ಕೇಳಿದರೆ, ಈ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

-ಎಸ್‌.ಸುರೇಶ್‌ ನೀರಗುಂದ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು