ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗಿಂತ ಒಂಟಿತನ ಕಾಡಿತ್ತು: ಶಾಸಕ ಎಸ್‌.ವಿ. ರಾಮಚಂದ್ರ

ಸೋಂಕಿನಿಂದ ಗುಣಮುಖರಾದ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ
Last Updated 1 ಜೂನ್ 2021, 3:09 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾಕ್ಕೆ ನಾನು ಹೆದರಲಿಲ್ಲ. ಅದರಿಂದ ತೊಂದರೆಯೂ ಆಗಿಲ್ಲ. ಆದರೆ, 12 ದಿನ ಯಾರನ್ನೂ ಭೇಟಿಯಾಗಲು ಅವಕಾಶ ಇಲ್ಲದೇ ಇರುವುದೇ ಹಿಂಸೆಯಾಗಿತ್ತು. ಒಂಟಿತನ ಕಾಡುವಂತೆ ಮಾಡಿತ್ತು...’

ಕೋವಿಡ್‌ನಿಂದ ಗುಣಮುಖರಾಗಿರುವ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಅವರು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡ ಅನುಭವದ ಮಾತಿದು.

‘ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದರಿಂದ ಆಗಾಗ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೆವು. ಮೊದಲು ನನ್ನ ಪತ್ನಿ ಇಂದಿರಾಳಿಗೆ ಕೊರೊನಾ ಬಂತು. ಅವಳು ಗುಣಮುಖಳಾದಳು. ಈ ನಡುವೆ ನಮ್ಮ ಮನೆಯ ಅಡುಗೆಯವರಿಗೆ, ಚಾಲಕ, ಗನ್‌ಮ್ಯಾನ್‌ ಎಲ್ಲರಲ್ಲೂ ಸೋಂಕು ಕಾಣಿಸಿಕೊಂಡಿತು. ಅವರೆಲ್ಲ ಗುಣಮುಖರಾದರು. ಇಂದಿರಾಳಿಗೆ ಕೊರೊನಾ ಬಂದು 10 ದಿನಗಳ ಬಳಿಕ ಅಂದರೆ ಏಪ್ರಿಲ್‌ 28ರಂದು ನಾನು ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಂಡೆ. ಪಾಸಿಟಿವ್‌ ಬಂತು’ ಎಂದು ವಿವರಿಸಿದರು.

‘ನಾನು ಬಹಳ ಕಾಲದಿಂದ ಮಧುಮೇಹಿ. ಹಾಗಾಗಿ ಪಾಸಿಟಿವ್‌ ಬಂದಾಗ ನನಗೆ ಗೊತ್ತಿರುವ ವೈದ್ಯರ ಸಲಹೆ ಕೇಳಿದೆ. ಬೆಂಗಳೂರಿಗೆ ಹೋಗೋದು ಉತ್ತಮ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ನೆರವು ಪಡೆದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ವೈದ್ಯರು, ಶುಶ್ರೂಷಕರು ಚೆನ್ನಾಗಿ ನೋಡಿಕೊಂಡರು. ಆಸ್ಪತ್ರೆಯಿಂದ ಬಿಡುಗಡೆ ಆದ ಮೇಲೆ ಮತ್ತೆ ಒಂದು ವಾರ ಹೋಂ ಕ್ವಾರಂಟೈನ್‌ನಲ್ಲಿ ಉಳಿದೆ. ದೇವರ, ನನ್ನ ಕ್ಷೇತ್ರದ ಜನರ, ಸ್ನೇಹಿತರ ಆಶೀರ್ವಾದದಿಂದ ಯಾವುದೇ ತೊಂದರೆ ಇಲ್ಲದೇ ಆರೋಗ್ಯವಾಗಿದ್ದೇನೆ. ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರವಲ್ಲ, ನಮ್ಮ ಜಗಳೂರು ತಾಲ್ಲೂಕು ಆಸ್ಪತ್ರೆಯಲ್ಲಿ ಕೂಡ ಉತ್ತಮ ವ್ಯವಸ್ಥೆ ಇದೆ. ಕೊರೊನಾ ಲಕ್ಷಣ ಕಂಡುಬಂದರೆ ಯಾರೂ ಕೂಡ ಹಿಂಜರಿಯದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್‌ ಬಂದರೆ ಸರಿಯಾದ ಚಿಕಿತ್ಸೆ ಪಡೆದು, ಔಷಧ, ಆಹಾರ ಸೇವಿಸಿ ಗುಣಮುಖರಾಗಬೇಕು. ಹಿಂಜರಿದರೆ ಅಪಾಯ ಹೆಚ್ಚು’ ಎಂದು ಕಿವಿಮಾತು ಹೇಳಿದರು.

‘ಮನೆಯಲ್ಲಿತ್ತು ಆತಂಕ’

‘ನನಗೆ ಕೊರೊನಾ ಬಂದಾಗ ಸಹಜವಾಗಿ ಪತ್ನಿಗೆ ಆತಂಕ ಉಂಟಾಗಿತ್ತು. ಈಗ ಎಲ್ಲ ಆತಂಕ ದೂರವಾಗಿದೆ. ಆಕೆ ಮತ್ತು ಮಗ ಅಜಯೇಂದ್ರ ಸಿಂಹನ ಪ್ರೀತಿ, ಕಾಳಜಿ, ಸಹಕಾರದಿಂದ ಬೇಗ ಗುಣಮುಖನಾಗಿದ್ದೇನೆ’ ಎಂದು ಎಸ್‌.ವಿ. ರಾಮಚಂದ್ರ ನೆನಪಿಸಿಕೊಂಡರು.

‘ವಿರೋಧಿಗಳಿಗೆ ಭಗವಂತನೇ ಉತ್ತರ’

‘ರಾಜಕೀಯ ಕಾರಣಕ್ಕಾಗಿ ಯಾರ ವಿರೋಧವನ್ನು ಕಟ್ಟಿಕೊಳ್ಳುವವ ನಾನಲ್ಲ. ಹಾಗಾಗಿ ನನಗೆ ರಾಜಕೀಯ ವಿರೋಧಿಗಳು ಕಡಿಮೆ. ಆದರೂ ನನಗೆ ಕೊರೊನಾ ಬಂದಾಗ ಕೆಲವರು ಕೇವಲವಾಗಿ ಮಾತನಾಡಿದ್ದಾರೆ. ಅವರಿಗೆ ನಾನೇನೂ ಉತ್ತರ ನೀಡುವುದಿಲ್ಲ. ಭಗವಂತನೇ ಉತ್ತರ ನೀಡುತ್ತಾನೆ’ ಎಂದು ಶಾಸಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT